ಕನ್ನಡಪ್ರಭ ವಾರ್ತೆ ಮೈಸೂರು
ಬುಡಕಟ್ಟು ಜನರ ಸಂಸ್ಕೃತಿ ಭಾರತೀಯ ಸಂಸ್ಕೃತಿಯ ಜೀವಜಲವಾಗಿದೆ ಎಂದು ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ ತಿಳಿಸಿದರು.ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ನಡೆದ ಬುಡಕಟ್ಟು ಜನರ ಆರೋಗ್ಯ ಮತ್ತು ಆರೋಗ್ಯ ರಕ್ಷಣಾ ಪದ್ಧತಿಗಳ ಮೇಲೆ ಜಾಗತೀಕರಣ ಮತ್ತು ಸಾಂಸ್ಕೃತಿಕ ನಂಬಿಕೆಗಳ ಪ್ರಭಾವ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬುಡಕಟ್ಟು ಜನರು ಅರಣ್ಯವನ್ನು ಪೋಷಿಸುತ್ತಾರೆ, ದೇವರೆಂದು ಪೂಜಿಸುತ್ತಾರೆ. ವಾಸಿಯಾಗದ ಕಾಯಿಲೆಗೂ ಬುಡಕಟ್ಟು ಜನರಲ್ಲಿ ಔಷಧವಿದೆ. ಬುಡಕಟ್ಟು ಸಂಸ್ಕೃತಿ ಭಾರತೀಯ ಪರಂಪರೆಯನ್ನು ಸಂರಕ್ಷಿಸಿದೆ. ಪ್ರತಿಯೊಂದು ಗಿಡಮೂಲಿಕೆಯು ಔಷಧಿಯಾಗಿದೆ. ಔಷಧಿಯ ಬಗ್ಗೆ ತಿಳಿದುಕೊಳ್ಳಬೇಕಾದರೆ ವನಚರರನ್ನು ಕೇಳಬೇಕು. ಬುಡಕಟ್ಟು ಜನರನ್ನು ಕೇಳಬೇಕು ಎಂದರು.ಇಂದು ಉದಾರೀಕರಣ ಜಾಗತೀಕರಣದ ಯುಗದಲ್ಲಿ ಗಿಡಮೂಲಕೆ ಔಷಧಿಗಳನ್ನು ಮೂಢನಂಬಿಕೆ ಎನ್ನುತ್ತೇವೆ. ಈ ಕಾರ್ಯಾಗಾರ ಓರಿಯನ್ ಟೇಷನ್ ಗೆ ರಹದಾರಿಯಾಗಿದ್ದು, ಬುಡಕಟ್ಟು ಸಂಸ್ಕೃತಿ ಎಂದರೇನು? ಬುಡಕಟ್ಟು ಜನಾಂಗದ ವೈಶಿಷ್ಟಗಳೇನು? ಅವರ ವೈಜ್ಞಾನಿಕ ಕೆಲಸಗಳೇನು ಎಂಬುದರ ಬಗ್ಗೆ ದಾಖಲೀಕರಣವಾಗಬೇಕು. ನಾವು ಸಹ ನೀವು ಮಾಡುವ ಒಳ್ಳೆಯ ಕೆಲಸಗಳಿಗೆ ನಿಮ್ಮ ಜೊತೆಗಿರುತ್ತೇವೆ ಎಂದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಟಿ. ಯೋಗೀಶ್ ವೀಡಿಯೋ ಕಾನ್‌ಫರೆನ್ಸ್ ಮೂಲಕ ಮಾತನಾಡಿ, ಈ ಕಾರ್ಯಾಗಾರದಲ್ಲಿ ಬುಡಕಟ್ಟು ಮುಖಂಡರಿಂದ ಪ್ರಬಂಧ ಮಂಡಿಸುವವರಿಂದ ಬುಡಕಟ್ಟು ಜನರ ಆರೋಗ್ಯ ಸುಧಾರಣೆಗೆ ಬರುವ ಸಲಹೆ ಸೂಚನೆಗಳನ್ನು ಸಂಕ್ಷಿಪ್ತವಾಗಿ ನಮಗೆ ಕಳಿಸಿದರೆ ಬಜೆಟ್ ನ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಬುಡಕಟ್ಟು ಜನರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಸ್ಥೆಯ ಉಪ ನಿರ್ದೇಶಕಿ ಎಚ್.ಎಸ್. ಗಿರಿಜಾಂಬ ಮಾತನಾಡಿ, ಈ ಕಾರ್ಯಾಗಾರಕ್ಕೆ ಆಂಧ್ರಪ್ರದೇಶ, ಕೇರಳ, ತೆಲಂಗಾಣ, ದೆಹಲಿಯಿಂದಲು ಪ್ರಬಂಧ ಮಂಡಿಸಲು ಬಂದಿದ್ದಾರೆ. ಸುಮಾರು 63 ಪ್ರಬಂಧಗಳು ಮಂಡನೆಯಾಗಿವೆ. ಇದರಲ್ಲಿ ಗುಣಮಟ್ಟದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಹೊರ ತರಲಾಗುವುದು. ಮುಂದಿನ ಕಾರ್ಯಾಗಾರದೊಳಗೆ ಒಂದು ಜರ್ನಲ್ ಅನ್ನು ಸಹ ಬಿಡುಗಡೆ ಮಾಡಲು ಪ್ರಯತ್ನಿಸುತ್ತೇವೆ. ಟಿ.ಆರ್.ಐ. ತಂಡ ಡಾ. ದಿನೇಶ್ ಕೆ.ಡಿ. ನೇತೃತ್ವದಲ್ಲಿ ಈ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿದೆ ಎಂದರು.
ಕಾವೇರಿ ಆಯುರ್ವೇದ ಮೆಡಿಕಲ್ ಕಾಲೇಜಿನ ವೈದ್ಯಕೀಯ ಅಧೀಕ್ಷಕಿ ಡಾ.ಪೂರ್ಣಿಮಾ ಕೆ. ಮೂರ್ತಿ, ಲೆಕ್ಕಾಧಿಕಾರಿ ಬಿ.ಆರ್. ಭವ್ಯಾ, ಕಚೇರಿ ಅಧೀಕ್ಷಕಿ ಎಂ.ವಿ.ನಾಗರತ್ನ, ಡಾ.ಕೆ.ವಿ. ಕೃಷ್ಣಮೂರ್ತಿ, ಡಾ.ಕೆ.ಡಿ.ದಿನೇಶ್, ಡಾ.ರಾಮಕೃಷ್ಣಯ್ಯ, ಡಾ. ಕಲಾವತಿ, ಡಾ.ಟಿ.ಎಸ್.ವೆಂಕಟೇಶ್, ಡಾ. ಮೋಹನ್ ಕುಮಾರ್, ಡಾ. ರವಿಕುಮಾರ್, ಭರತ್ ಕುಮಾರ್, ಮನೋಜ್ ಕುಮಾರ್ ಇದ್ದರು.