ಹುಬ್ಬಳ್ಳಿ:
ಆದಿವಾಸಿಗಳ ಹಕ್ಕುಗಳನ್ನು ಯಾರು ಮನೆ ಬಾಗಿಲಿಗೆ ಬಂದು ನೀಡುವುದಿಲ್ಲ. ಸಂಘಟಿತರಾಗಿ, ಶಿಕ್ಷಣ ಪಡೆದು ಹಕ್ಕುಗಳಿಗಾಗಿ ಹೋರಾಡಿದಾಗ ಮಾತ್ರ ಅವುಗಳನ್ನು ಪಡೆಯಲು ಸಾಧ್ಯ. ಹೀಗಾಗಿ ರಾಜ್ಯದ ಎಲ್ಲ ಆದಿವಾಸಿ, ಹರಿಣ ಶಿಕಾರಿ ಹಾಗೂ ಮೂಲನಿವಾಸಿ ಸಮುದಾಯಗಳು ಒಗ್ಗಟ್ಟಿನಿಂದ ಹೊಸ ಹೋರಾಟ ಆರಂಭಿಸಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದರು.ಇಲ್ಲಿನ ನೆಹರು ಮೈದಾನದಲ್ಲಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್, ಆದಿವಾಸಿ ಹರಿಣಶಿಕಾರಿ ಪಾರ್ದಿ ಸಮಾಜ ಕ್ಷೇಮಾಭಿವೃದ್ಧಿ ಸಂಘ, ಸೆಟ್ಲ್‌ಮೆಂಟ್ ಕಾಲನಿ ಹುಬ್ಬಳ್ಳಿ ಹಾಗೂ ಸಮಸ್ತ ಕರ್ನಾಟಕ ಆದಿವಾಸಿ ಸಮುದಾಯಗಳ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 32ನೇ ವಿಶ್ವ ಆದಿವಾಸಿ ದಿನಾಚರಣೆ ಮತ್ತು ಆದಿವಾಸಿಗಳ ಕಲಾಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತ 78 ವರ್ಷಗಳ ಬಳಿಕ ಸಂಘಟನೆ ಹುಟ್ಟು ಹಾಕಿರುವುದು ಅಭಿನಂದನಾರ್ಹ ಎಂದ ಅವರು, ಹುಬ್ಬಳ್ಳಿಯ ಈ ಸಮಾವೇಶ ನಿಮ್ಮ ಹೋರಾಟಕ್ಕೆ ನಾಂದಿಯಾಗಲಿ. ನಿಮ್ಮ ಸಮುದಾಯದ ಸಮಸ್ಯೆಗಳ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದರು.ನೀಲನಕ್ಷೆ:
ಆದಿವಾಸಿ ಸಮುದಾಯವನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ಮುಂದಿನ ಐದು- ಹತ್ತು ವರ್ಷಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಸಮಗ್ರ ನೀಲನಕ್ಷೆ ರೂಪಿಸಬೇಕು. ಶಿಕ್ಷಣ, ಉದ್ಯೋಗ, ವಸತಿ, ಸಾಮಾಜಿಕ ಸ್ಥಾನಮಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಂತ-ಹಂತವಾಗಿ ಅಭಿವೃದ್ಧಿ ಸಾಧಿಸುವ ಗುರಿ ಹೊಂದಬೇಕು ಎಂದು ಸಚಿವರು ಕರೆ ನೀಡಿದರು.
ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಸರ್ಕಾರದಿಂದ ನಿಮಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಮಾಜ ಬಾಂಧವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಎಸ್ಸಿ-ಎಸ್ಟಿ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಮಾತನಾಡಿ, ಆದಿವಾಸಿ, ಅಲೆಮಾರಿಗಳು ಶಿಕ್ಷಣ, ಸಾಮಾಜಿಕ ಸ್ಥಾನಮಾನ, ರಾಜಕೀಯವಾಗಿ ಸಾಕಷ್ಟು ವಂಚಿತರಾಗಿದ್ದಾರೆ. ತಾವು ವಾಸಿಸುತ್ತಿರುವ ಜಾಗಕ್ಕೆ ಹಕ್ಕುಪತ್ರ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಈ ವರೆಗೂ ಅವರ ಬೇಡಿಕೆ ಈಡೇರಿಲ್ಲ. ನಾವೆಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರೆ ನಿಮ್ಮಲ್ಲಿ ಜಾಗೃತಿ ಮೂಡಬೇಕು. ಮೈಸೂರಿನಲ್ಲಿರುವ ಅಧ್ಯಯನ ಕೇಂದ್ರ ಪಶ್ಚಿಮ ಘಟಕ್ಕೂ ಬರಬೇಕು. ಆದಿವಾಸಿಗಳಿಗೆ ಸಮುದಾಯ ಭವನಗಳ ನಿರ್ಮಾಣ ಕಾರ್ಯವಾಗಬೇಕು ಎಂದರು.ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು. ಇದೇ ವೇಳೆ ಗರುಡಗುಡ್ಡ ಚಲನಚಿತ್ರದ ಲಾಂಛನ ಬಿಡುಗಡೆ ಹಾಗೂ ಹಲವರಿಗೆ "ಆದಿವಾಸಿ ಸಿರಿ " ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಗೌರವಾಧ್ಯಕ್ಷ ಪ್ರೊ. ಕೆ.ಎಂ. ಮೇತ್ರಿ, ಅಧ್ಯಕ್ಷ ಎಂ. ಕೃಷ್ಣಯ್ಯ, ಉಪಾಧ್ಯಕ್ಷೆ ಕುಮುದಾ ಸುಶೀಲಪ್ಪ, ಮಾಜಿ ಸಂಸದ ಐ.ಜಿ. ಸನದಿ, ಮೇಯರ್ ದುರ್ಗಮ್ಮ ಬಿಜವಾಡ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಲಕ್ಷ್ಮಣ ಮುಚಕಂಡೆ, ಬಾಲರಾಜ ಚವ್ಹಾಣ, ಮಲ್ಲಣ್ಣ ಕಾಳೆ, ಚಂದ್ರಿಕಾ ಕಾಳೆ, ರಮೇಶ ಕಾಂಬಳೆ, ಚಂದ್ರಶೇಖರ ಜುಟ್ಟಲ್, ಶಿವಾನಂದ ಬೆಂತೂರ, ಪರಶುರಾಮ ಪೂಜಾರ ಇತರರು ಇದ್ದರು.