ಬುಡಕಟ್ಟು ಮಹಿಳೆಯರ ನಿಜವಾದ ಸಬಲೀಕರಣ ಆಗಲು ಅವರಿಗೆ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಿ, ಶಿಕ್ಷಣವೇ ಮಹಿಳೆಗೆ ದೊಡ್ಡ ಶಕ್ತಿ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.

- ಬುಡಕಟ್ಟು ಮಹಿಳೆ: ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಡಾ.ನಾಗಲಕ್ಷ್ಮಿ ಚೌಧರಿ

- - -

ಕನ್ನಡಪ್ರಭ ವಾರ್ತೆ ಹರಿಹರ

ಬುಡಕಟ್ಟು ಮಹಿಳೆಯರ ನಿಜವಾದ ಸಬಲೀಕರಣ ಆಗಲು ಅವರಿಗೆ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಿ, ಶಿಕ್ಷಣವೇ ಮಹಿಳೆಗೆ ದೊಡ್ಡ ಶಕ್ತಿ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಹೇಳಿದರು.

ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ನಡೆದ ಎಂಟನೇ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಮೊದಲ ದಿನವಾದ ಭಾನುವಾರ ಬುಡಕಟ್ಟು ಮಹಿಳೆ: ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣುಮಕ್ಕಳಿಗೆ ಬಾಲ್ಯವಿವಾಹಕ್ಕೆ ಮುಂದಾಗದೇ ಉತ್ತಮ ಶಿಕ್ಷಣವನ್ನು ನೀಡಿದಾಗ ಅವಳು ಜಗತ್ತನ್ನೇ ಗೆಲ್ಲುತ್ತಾಳೆ ಎಂದರು.

ಮಹಿಳೆಯರಿಗೆ ಶಿಕ್ಷಣ ಅಗತ್ಯ:

ಮಹಿಳೆಯರಿಗಾಗಿ ಅನೇಕ ಸೌಲಭ್ಯಗಳು ಇವೆ. ಆದರೆ, ಅವುಗಳನ್ನು ಅರಿಯುವ ಹಾಗೂ ಉಪಯೋಗಿಸಿ ಮಾಡಿಕೊಳ್ಳುವ ಶಕ್ತಿ ಅಗತ್ಯವಿದೆ. ಮಹಿಳೆ ಗರ್ಭ ಧರಿಸಿದ ದಿನದಿಂದ ಮಗು ಹುಟ್ಟಿದ 40 ದಿನಗಳವರೆಗೆ ಸಂಪೂರ್ಣ ವೆಚ್ಚ ಸರ್ಕಾರದಿಂದ ಲಭಿಸುತ್ತದೆ. ಅಲ್ಲದೇ, ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ, ಔಷಧಿ ಮಾತ್ರೆಗಳು ಲಭ್ಯವಿದ್ದರೂ ವೈದ್ಯರು ಹೊರಗೆ ತರಲು ಬರೆದು ಕೊಡುತ್ತಾರೆ. ಅದರ ವಿರುದ್ಧ ತಿರುಗಿ ಬೀಳುವ ಶಕ್ತಿ ಬರಬೇಕಾದಲ್ಲಿ ಶಿಕ್ಷಣದ ಅವಶ್ಯಕತೆ ಇದೆ ಎಂದರು.

ಮಹಿಳೆ ಮಾತೃಶಕ್ತಿ, ಕ್ರಿಯಾಶಕ್ತಿ ಹಾಗೂ ನೇತೃತ್ವಶಕ್ತಿ ಹೊಂದಿದ್ದಾಳೆ. ಇದನ್ನು ವಾಲ್ಮೀಕಿ ರಾಮಾಯಣದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ತಾಳ್ಮೆ ಹಾಗೂ ಸಂಸ್ಕಾರವನ್ನು ಕಾದಿಟ್ಟುಕೊಂಡು ಬಂದಿರುವ ಮಹಿಳೆ ಗಂಡಸರಿಂದ ಎಷ್ಟೇ ಅನ್ಯಾಯ ಆದರೂ ತಾಳ್ಮೆ ಹಾಗೂ ಸಂಸ್ಕಾರ ಕಳೆದು ಕೊಂಡಿಲ್ಲ. ಈಗಲೂ ಶೇ.99 ಮಹಿಳೆಯರು ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನೇ ಮಾಡುವುದಿಲ್ಲ. ದೌರ್ಜನ್ಯ ಉಂಟಾದಲ್ಲಿ ಮಹಿಳೆಯರು 112ಕ್ಕೆ ಮಾಹಿತಿ ನೀಡಿದಲ್ಲಿ ಕೇವಲ 10 ನಿಮಿಷದಲ್ಲಿ ಪೊಲೀಸರು ರಕ್ಷಣಗೆ ಆಗಮಿಸುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗುರುಪೀಠದ ಧರ್ಮದರ್ಶಿ ಶಾಂತಲಾ ರಾಜಣ್ಣ ಮಾತನಾಡಿ, ಎರಡೂ ಕೈಗಳು ತಟ್ಟಿದಾಗ ಚಪ್ಪಾಳೆ ಆಗುವಂತೆ ಗಂಡು- ಹೆಣ್ಣು ಇಬ್ಬರೂ ಒಗ್ಗಟ್ಟಾಗಿ ನಡೆದಾಗ ಮಾತ್ರ ಸಹ ಜೀವನ ಸುಖವಾಗಿರಲು ಸಾಧ್ಯ. ಅಂದಿನ ಮಹಿಳೆ ರಾಜನಿಗೆ ರಾಣಿಯರಾಗಿದ್ದರು. ಇಂದು ಒಗ್ಗಟ್ಟಿನ ಬದುಕಿನಿಂದ ಬದುಕಿದಾಗ ಮಾತ್ರ ಕುಟುಂಬದಲ್ಲಿ ಮಹಾರಾಣಿಯಾಗಲು ಸಾಧ್ಯ ಎಂದರು.

ಶ್ರೀ ಮಠದ ಗುರುಗಳ 267 ದಿನ ಧರಣಿಯಿಂದಾಗಿ ಶೇ.7ರಷ್ಟು ಮೀಸಲಾತಿ ಲಭ್ಯವಾಯಿತು. ಆದರೆ, ಕಾನೂನಿಂದ ಮಾನ್ಯತೆ ದೊರಕಿಲ್ಲ. ಸಿಗುವ ಸೌಲಭ್ಯಗಳು ಮಧ್ಯವರ್ತಿಗಳ ಕಾಟದಿಂದ ಇಲ್ಲದಿರುವವರಿಗೆ ಸಿಗುವ ಬದಲು ಉಳ್ಳವರಿಗೆ ಸಿಗುತ್ತಿದೆ. ಇದು ಬದಲಾಗ ಬೇಕಾದಲ್ಲಿ ಶಿಕ್ಷಣದ ಜತೆಗೆ ಸಾಮಾಜಿಕ ಜ್ಞಾನ ಅಗತ್ಯ ಎಂದು ಪ್ರತಿಪಾದಿಸಿದರು.

ಭಾವಚಿತ್ರ ಮೆರವಣಿಗೆ:

ಇದಕ್ಕೂ ಮೊದಲು ರಾಜನಹಳ್ಳಿ ಗ್ರಾಮದಿಂದ ಶ್ರೀ ಮಠದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ, ಧ್ವಜಾರೋಹಣ, ಸರ್ವಧರ್ಮ ಸಾಮೂಹಿಕ ವಿವಾಹ, ಬುಡಕಟ್ಟು ಪ್ರದರ್ಶನ ಮೇಳ ಕೃಷಿ ವಸ್ತು ಪ್ರದರ್ಶನ ಮೇಳ, ಉದ್ಯೊಗ ಮೇಳ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಸಮರ್ಪಣೆ ನಡೆದವು.

ಶ್ರೀ ಮಠದ ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ಬಸನಗೌಡ ದದ್ದಲ್‌, ಸಂಚಾಲಕ ಎಂ.ಜಿ. ಪಂಪಾಪತಿ, ಶಾಸಕ ಬಿ.ಪಿ. ಹರೀಶ್‌, ದೇವದುರ್ಗದ ಶಾಸಕಿ ಕರೆಮ್ಮ ಜಿ. ನಾಯಕ, ಕೊಪ್ಪಳ ವಿಧಾನ ಪರಿಷತ್ತು ಸದಸ್ಯೆ ಹೇಮಲತಾ ನಾಯಕ, ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ, ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಎಇಇ ರಾಜೇಶ್ವರಿ ಬಾಸೂರು, ಕೋಲಾರ ಸಹಾಯಕ ಕಮಿಷನರ್‌ ಡಾ.ಮೈತ್ರಿ, ಬೆಳಗಾವಿ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ವಾರಂಗಲ್‌, ಬೆಂಗಳೂರು ಜಂಟಿ ನಿರ್ದೇಶಕಿ ಡಾ. ಎನ್‌.ಆರ್‌. ಗೀತಾ ಇತರರು ಉಪಸ್ಥಿತರಿದ್ದರು.

- - -

-08HRR.002.ಜೆಪಿಜಿ:

ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ನಡೆದ 8ನೇ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಮೊದಲ ದಿನವಾದ ಭಾನುವಾರ ಬುಡಕಟ್ಟು ಮಹಿಳೆ: ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಲಾಯಿತು.