ಬಿಜೆಪಿ ಮುಖಂಡ ನಟೇಶ್ ಕುಮಾರ್‌ಗೆ ನುಡಿನಮನ

| Published : Dec 16 2024, 12:47 AM IST

ಸಾರಾಂಶ

ಕೆಲ ದಿನಗಳ ಹಿಂದಷ್ಟೇ ಅಗಲಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಹಾಸನ ಜಿಲ್ಲಾ ಬಿಜೆಪಿ ಮಾಜಿ ಸಂಘಟನಾ ಪ್ರಧಾನ ಕಾರ್ಯದರ್ಶಿ ನಟೇಶ್ ಕುಮಾರ್‌ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಸಾಮಾನ್ಯರು ಸುಂದರ ಜಗತ್ತಿನಲ್ಲಿ ಬದುಕುತ್ತಾರೆ. ಆದರೆ, ಶ್ರೇಷ್ಠರು ತಾನು ಬದುಕಿದ ಸಮಾಜವನ್ನು, ಜಗತ್ತನ್ನು ಸುಂದರವಾಗಿಸುತ್ತಾರೆ. ಹಾಗೆಯೇ ನಟೇಶ್ ಅವರು ತಾನು ಬದುಕಿದ ಸಮಾಜವನ್ನು, ಜಗತ್ತನ್ನು ಸುಂದರವಾಗಿಸಿದ್ದಾರೆ ಎಂದು ಜನಸೇವಾ ಶಿಕ್ಷಣದ ಮುಖಂಡ ನಿರ್ಮಲ್ ಕುಮಾರ್‌ ಅವರು ಹೇಳಿದರು.

ಅರಕಲಗೂಡು: ಪಟ್ಟಣದ ಲಕ್ಷ್ಮೀ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಕೆಲ ದಿನಗಳ ಹಿಂದಷ್ಟೇ ಅಗಲಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಹಾಸನ ಜಿಲ್ಲಾ ಬಿಜೆಪಿ ಮಾಜಿ ಸಂಘಟನಾ ಪ್ರಧಾನ ಕಾರ್ಯದರ್ಶಿ ನಟೇಶ್ ಕುಮಾರ್‌ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.

ಇದೇ ವೇಳೆ ಹಿರಿಯ ಪ್ರಚಾರಕರು, ಜನಸೇವಾ ಶಿಕ್ಷಣದ ಮುಖಂಡ ನಿರ್ಮಲ್ ಕುಮಾರ್‌ ಅವರು ಮಾತನಾಡಿ, ಸಾಮಾನ್ಯರು ಸುಂದರ ಜಗತ್ತಿನಲ್ಲಿ ಬದುಕುತ್ತಾರೆ. ಆದರೆ, ಶ್ರೇಷ್ಠರು ತಾನು ಬದುಕಿದ ಸಮಾಜವನ್ನು, ಜಗತ್ತನ್ನು ಸುಂದರವಾಗಿಸುತ್ತಾರೆ. ಹಾಗೆಯೇ ನಟೇಶ್ ಅವರು ತಾನು ಬದುಕಿದ ಸಮಾಜವನ್ನು, ಜಗತ್ತನ್ನು ಸುಂದರವಾಗಿಸಿದ್ದಾರೆ ಎಂದು ಹೇಳಿದರು.

ಜೀವನದಲ್ಲಿ ಹುಟ್ಟು- ಸಾವು ಕಟ್ಟಿಟ್ಟಬುತ್ತಿ. ಆದರೆ, ಈ ಹುಟ್ಟು-ಸಾವಿನ ನಡುವಿನ ಬದುಕು ಹೇಗಿರಬೇಕೆಂದು ಗುರಿ ಇಟ್ಟುಕೊಂಡ ಧೀಮಂತ ರಾಷ್ಟ್ರಭಕ್ತ. ಇವರು ಹಿಂದುತ್ವ, ಜಗತ್ತನ್ನು ಕಲ್ಯಾಣವಾಗಿಸುವ ವಿಚಾರಧಾರೆ ಹೊಂದಿದ್ದರು. ಅದಕ್ಕಾಗಿ ಈ ವಿಚಾರಗಳನ್ನು ಅವರ ಕುಟುಂಬ, ಬಂಧು ಬಳಗ ಎಲ್ಲರಿಗೂ ತಿಳಿಸಿದ್ದಾರೆ. ಅಂದರೆ, ಬೆಂಕಿಯ ಸಂಪರ್ಕಕ್ಕೆ ಬಂದ ಪ್ರತಿ ವಸ್ತುವು ಬೆಂಕಿಯಾಗುವಂತೆ ನಟೇಶ್ ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರಿಗೂ ದೇಶದ ಪರಂಪರೆ, ಸಂಸ್ಕೃತಿ ಬಗ್ಗೆ ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು.

ದೇಶದ ಶಕ್ತಿ, ಸತ್ವ, ಜೀವ, ಬಂಡವಾಳವೆಂದರೆ ರಾಜಕಾರಣವಲ್ಲ, ಮಿಲಿಟರಿ ಸೈನ್ಯವಲ್ಲ, ಪೊಲೀಸ್ ಫೋರ್ಸ್‌ ಅಲ್ಲ, ಹಿಂದೂ ಧರ್ಮ. ಹಿಂದೂ ಸಮಾಜವನ್ನು ಜಾಗೃತಿಗೊಳಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಭಾರತಕ್ಕೆ ಶಕ್ತಿ, ಸಾಮರ್ಥ್ಯ ನೀಡುವಂತ ಯಾವುದಾದರು ಸಂಜೀವಿನಿ ಇದ್ದರೆ ರಾಷ್ಟೀಯ ಸ್ವಯಂ ಸೇವಕ ಸಂಘ ಎಂದರು.

ಕಾಂಗ್ರೆಸ್ ಮುಖಂಡ ಕೃಷ್ಣೆಗೌಡ, ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಶಾಸಕರಾದ ಸುರೇಶ್, ಸಿಮೆಂಟ್ ಮಂಜು, ಮುಖಂಡ ಹಿರಣ್ಣಯ್ಯ, ಪ್ರದೀಪ್ ರಂಗಸ್ವಾಮಿ, ವೀರಶೈವ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್‌, ನಟೇಶ್ ಕುಟುಂಬದವರು ಮತ್ತಿತರಿದ್ದರು.