ಪಾಕ್, ಚೈನಾ ಯುದ್ಧಗಳಲ್ಲಿ ಭಾಗಿಯಾಗಿದ್ದ ಮಾಜಿ ಯೋಧರಿಗೆ ಸನ್ಮಾನ

| Published : Feb 11 2024, 01:49 AM IST

ಸಾರಾಂಶ

ಕೊಡಗಿನ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ 1962, 1965, 1971 ರ ಯುದ್ಧಗಳಲ್ಲಿ ಭಾಗವಹಿಸಿದ ಕೊಡಗಿನ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕತ್ತೀರ ಪಿ.ಸೋಮಣ್ಣ, ಜಿಲ್ಲೆಯಲ್ಲಿ ವಿವಿಧ ಸಂಘಟನೆಯಿಂದ ಈ ಹಿಂದೆ ಸೈನಿಕರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ, ಯುದ್ಧಗಳಲ್ಲಿ ಹೋರಾಡಿದ, ಭಾಗವಹಿಸಿದವರನ್ನು ಗುರುತಿಸುವ ಕಾರ್ಯ ನಡೆದಿರಲಿಲ್ಲ. ಮೊದಲ ಬಾರಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ 1962ರ ಇಂಡೋ ಚೈನ ಯುದ್ಧ ಹಾಗೂ 1965 ಮತ್ತು 1971ರ ಇಂಡೋ ಪಾಕ್ ಯುದ್ಧಗಳಲ್ಲಿ ಭಾಗವಹಿಸಿದ ಕೊಡಗಿನ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಜಿಲ್ಲೆಯ ಜನತೆ ಕೈಜೋಡಿಸಬೇಕು ಎಂದು ಮನವಿ ಮಾಡಿದ ಅವರು ಕಳೆದ ಸಾಲಿನಲ್ಲಿ ಸಂಘವು ಜಿಲ್ಲೆಯ ಎಲ್ಲ ಮಾಜಿ ಸೈನಿಕರು, ವಿಧವೆಯರು, ಅವಲಂಬಿತರಿಗೆ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಟೋಟ ಸ್ಪರ್ಧೆ ಮತ್ತು ಆರೋಗ್ಯ ತಪಾಸಣೆಯನ್ನು ಯಶಸ್ವಿ ನಡೆಸಿದೆ ಎಂದರು.ಕಾರ್ಯಕ್ರಮಕ್ಕೆ ಬರಲಾಗದವರಿಗೆ ಸಂಘದ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದ ಸೋಮಣ್ಣ ಇದೇ ರೀತಿ ಮುಂದಿನ ದಿನಗಳಲ್ಲಿ ಕಾರ್ಗಿಲ್, ಶಾಂತಿ ಪಡೆಯವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.ಸಂಘದ ಉಪಾಧ್ಯಕ್ಷ ಸುಧೀರ್ ಮಾತನಾಡಿ, ದ.ಕನ್ನಡ ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಸತ್ಯಜಿತ್ ಸುರತ್ಕಲ್ ಅವರನ್ನು ಮಡಿಕೇರಿಯಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಗಿದೆ. ಕೊಡಗಿಗೂ ಸಹಾಯಹಸ್ತ ಚಾಚುವಂತೆ ಅವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.ಸಂಘದ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಮಾಚಿಮಂಡ ಭವಾನಿ, ಮಡಿಕೇರಿ ಸಂಚಾಲಕ ತಳೂರ್ ಕಾಳಪ್ಪ, ಪ್ರಮುಖರಾದ ಬೊಟ್ಟಂಗಡ ಜಪ್ಪು ಸುದ್ದಿಗೋಷ್ಠಿಯಲ್ಲಿದ್ದರು.