ಸಾರಾಂಶ
ಇತ್ತೀಚಿಗೆ ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ, ಚಿತ್ರ ನಟ ಕೆ. ಶಿವರಾಂ ನಿಧನದ ಹಿನ್ನಲೆಯಲ್ಲಿ ಅವರಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು
ಕನ್ನಡಪ್ರಭ ವಾರ್ತೆ ಹನೂರು
ಇತ್ತೀಚಿಗೆ ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ, ಚಿತ್ರ ನಟ ಕೆ. ಶಿವರಾಂ ನಿಧನದ ಹಿನ್ನಲೆಯಲ್ಲಿ ಅವರಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಪಟ್ಟಣದ ಲೋಕೋಪಯೋಗಿ ವಸತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೆ.ಶಿವರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಈ ವೇಳೆ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗಿಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಮಾತನಾಡಿ, ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿವಿಧ ಜಿಲ್ಲೆಗಳಲ್ಲಿ ದಕ್ಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕೆ. ಶಿವರಾಂ ನಿಧನದಿಂದ ನಾಡಿಗೆ ನಷ್ಟ ಉಂಟಾಗಿದೆ ಅದರಲ್ಲೂ ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಅಧಿಕಾರದ ಅವಧಿಯಲ್ಲಿ ಶೋಷಿತ, ದಲಿತ ಸಮುದಾಯದ ಹೆಣ್ಣುಮಕ್ಕಳು ವಿಮಾನಯಾನದಲ್ಲಿ ಗಗನಸಖಿಯರಾಗಿ, ಆಸ್ಪತ್ರೆಗಳಲ್ಲಿ ಶುಶ್ರೂಷಕಿಯರಾಗಿಕರ್ತವ್ಯ ನಿರ್ವಹಿಸುವ ಅನುಕೂಲವನ್ನು ಒದಗಿಸಿದವರು. ಅವರ ಅವಧಿಯಲ್ಲಿ ಬೀದರ್, ಧಾರವಾಡ ಸೇರಿದಂತೆ ಇನ್ನಿತರಡೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಇಂತಹ ಮೇರು ವ್ಯಕ್ತಿ ಮತ್ತೊಂದಷ್ಟು ಕಾಲ ನಮ್ಮೊಡನೆ ಇರಬೇಕಾಯಿತು. ಅವರ ಆತ್ಮಕ್ಕೆ ಭಗವಾನ್ ಬುದ್ಧ ಶಾಂತಿ ನೀಡಲಿ ಅವರ ನಿಧನದ ದುಃಖವನ್ನು ಬರಿಸುವ ಶಕ್ತಿಯನ್ನು ಕುಟುಂಬದವರಿಗೆ ನೀಡಲಿ ಎಂದರು. ಈ ವೇಳೆ ಸಮಿತಿಯ ತಾಲೂಕು ಕಾರ್ಯದರ್ಶಿ ಮಾದೇಶ್, ಶಿವಸ್ವಾಮಿ, ದೊಡ್ಡಯ್ಯ, ಹಿಂಡಯ್ಯ, ಭಾಗ್ಯಮ್ಮ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.