ಸವಣೂರ: ಕಡುಬಡತನ, ಜೀವನದ ಸಂಕಷ್ಟಗಳು ಹಾಗೂ ತಂದೆಯ ಅಕಾಲಿಕ ನಿಧನದಂತಹ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ದೇಶಸೇವೆಯ ಕನಸನ್ನು ಕೈಬಿಡದೆ ನಿರಂತರ ಪರಿಶ್ರಮ ನಡೆಸಿದ ತಾಲೂಕಿನ ಮಂತ್ರೋಡಿ ಗ್ರಾಮದ ಯುವಕ ಮಲ್ಲಿಕಾರ್ಜುನ ಫಕ್ಕೀರೇಶ ಹರ್ಲಾಪುರ ಭಾರತೀಯ ಸೇನೆಯ ಅಗ್ನಿಪಥ್ ಯೋಜನೆಯಡಿ ಅಗ್ನಿವೀರನಾಗಿ ಆಯ್ಕೆಯಾಗುವ ಮೂಲಕ ಗ್ರಾಮದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿಹಿಡಿದಿದ್ದಾನೆ.ಮಲ್ಲಿಕಾರ್ಜುನ ಅವರು ಬಡ ಕೂಲಿ ಕಾರ್ಮಿಕ ಕುಟುಂಬದ ಮೂರನೇ ಮಗ. ಬಾಲ್ಯದಲ್ಲಿಯೇ ತಂದೆ ಫಕ್ಕೀರಪ್ಪ ಅವರನ್ನು ಕಳೆದುಕೊಂಡ ಕುಟುಂಬದ ಜವಾಬ್ದಾರಿಯನ್ನು ತಾಯಿ ಯಲ್ಲವ್ವ ಹರ್ಲಾಪುರ ತಮ್ಮ ಹೆಗಲ ಮೇಲೆ ಹೊತ್ತರು. ಕೂಲಿ ಕೆಲಸ ಮಾಡಿಕೊಂಡೇ ಒಬ್ಬ ಮಗಳನ್ನು ವಿವಾಹ ಮಾಡಿಕೊಟ್ಟು, ಇಬ್ಬರು ಪುತ್ರರಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಿ ಬೆಳೆಸಿದರು. ತಾಯಿಯ ತ್ಯಾಗ ಮತ್ತು ಮಕ್ಕಳ ದೃಢಸಂಕಲ್ಪವೇ ಇಂದು ಈ ಸಾಧನೆಗೆ ಕಾರಣವಾಗಿದೆ.ಮಲ್ಲಿಕಾರ್ಜುನ ಅವರ ಅಣ್ಣ ಭರತ ಹರ್ಲಾಪುರ ಅವರಿಗೂ ದೇಶಸೇವೆ ಮಾಡುವ ಅಪಾರ ಆಸೆಯಿತ್ತು. ಭಾರತೀಯ ಸೇನೆಗೆ ಸೇರುವ ಕನಸಿಗಾಗಿ ಸಾಕಷ್ಟು ಪ್ರಯತ್ನಿಸಿದರೂ ಅವಕಾಶ ದೊರೆಯಲಿಲ್ಲ. ಆದರೆ ಅವರು ತಮ್ಮ ಕನಸನ್ನು ಕೈಬಿಡದೆ ಸಿವಿಲ್ ಪೊಲೀಸ್ ಹುದ್ದೆಗಾಗಿ ಸತತ ಪರಿಶ್ರಮ ನಡೆಸುತ್ತಿದ್ದಾರೆ. ಅಣ್ಣನ ಅಪೂರ್ಣ ಕನಸು ತಮ್ಮನ ಮೂಲಕ ಸಾಕಾರಗೊಂಡಿರುವುದು ಕುಟುಂಬದ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ.ಅಗ್ನಿವೀರನಾಗಿ ಆಯ್ಕೆಯಾದ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಗ್ರಾಮಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿದರು. ತರಬೇತಿಗಾಗಿ ತೆರಳುವ ಮುನ್ನ ಮಲ್ಲಿಕಾರ್ಜುನ ಅವರಿಗೆ ಹೂಮಾಲೆ ಹಾಕಿ, ಶಿರಸ್ತ್ರಾಣ ತೊಡಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಹಿರಿಯರ ಆಶೀರ್ವಾದ ಪಡೆದು "ಭಾರತ ಮಾತೆಯ ಸೇವೆಯೇ ನನ್ನ ಧ್ಯೇಯ " ಎಂಬ ಸಂಕಲ್ಪದೊಂದಿಗೆ ಅವರು ತರಬೇತಿ ಕೇಂದ್ರದತ್ತ ಪ್ರಯಾಣ ಬೆಳೆಸಿದರು.ಈ ವೇಳೆ ಗ್ರಾಮದಲ್ಲಿ ದೇಶಭಕ್ತಿಯ ವಾತಾವರಣ ನಿರ್ಮಾಣವಾಗಿದ್ದು, ಯುವಕರು "ಭಾರತ್ ಮಾತಾ ಕಿ ಜೈ " ಹಾಗೂ "ವಂದೇ ಮಾತರಂ " ಘೋಷಣೆಗಳನ್ನು ಮೊಳಗಿಸಿ ಅಗ್ನಿವೀರನಿಗೆ ಶುಭ ಹಾರೈಸಿದರು.ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಕಳಲಕೊಂಡ ಮಾತನಾಡಿ, "ಜೀವನದ ಕಷ್ಟಗಳನ್ನು ಮೆಟ್ಟಿ ನಿಂತು ನಮ್ಮ ಗ್ರಾಮದ ಯುವಕ ದೇಶಸೇವೆಗೆ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಅವರ ಸಾಧನೆ ಇತರ ಯುವಕರಿಗೂ ಸ್ಫೂರ್ತಿಯಾಗಲಿ, " ಎಂದು ಹೇಳಿದರು.ಮಲ್ಲಿಕಾರ್ಜುನ ಅವರ ಯಶಸ್ವಿ ತರಬೇತಿ ಹಾಗೂ ಉಜ್ವಲ ಸೇನಾ ಬದುಕಿಗಾಗಿ ಕುಟುಂಬಸ್ಥರು, ಬಂಧುಗಳು ಮತ್ತು ಗ್ರಾಮಸ್ಥರು ಶುಭ ಹಾರೈಸಿದರು.