ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತೊಗಲು ಗೊಂಬೆಯಾಟದ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರರನ್ನು ರಾಜ್ಯ ಶಿಳ್ಳೇಕ್ಯಾತರ ಸಮಾಜದಿಂದ ಕೊಪ್ಪಳ ಜಿಲ್ಲೆಯ ಮೋರನಾಳದ ಸ್ವಗ್ರಾಮದಲ್ಲಿ ಸನ್ಮಾನಿಸಲಾಯಿತು.2024ನೇ ಸಾಲಿಗೆ ಭೀಮವ್ವ (96) ಪ್ರಸಿದ್ಧ ತೊಗಲು ಗೊಂಬೆಯಾಟದ ಕಲಾವಿದೆ. ಸ್ಥಳೀಯ ಹಳ್ಳಿಗಳಲ್ಲಿ ಗೊಂಬೆಯಾಟ ಆಡಿಸುವುದನ್ನು ಪತಿ ದೊಡ್ಡಬಾಳಪ್ಪ ಅವರೊಂದಿಗೆ ಹದಿನಾಲ್ಕನೇ ವಯಸ್ಸಿನಿಂದಲೇ ಆರಂಭಿಸಿದರು. ಪತಿಯೊಂದಿಗೆ ಅನೇಕ ಬಾರಿ ಅಮೇರಿಕ, ಫ್ರಾನ್ಸ್, ಆರ್ಮಸ್ಟರ್ಡಾಮ್, ಇಟಲಿ, ಇರಾನ್, ಇರಾಕ್, ದುಬೈ ಮುಂತಾದ ದೇಶಗಳಿಗೆ ತೊಗಲು ಗೊಂಬೆಯಾಟದ ಕಲೆಯನ್ನು ಪ್ರದರ್ಶಿಸಿರುವುದಾಗಿ ಅವರು ತಿಳಿಸಿದರು.
ಮೋರನಾಳ ಕೊಪ್ಪಳ ಜಿಲ್ಲೆಯ ಕುಗ್ರಾಮದಲ್ಲಿ ಭೀಮವ್ವ ವಾಸವಾಗಿದ್ದಾರೆ. ಈ ಕಲಾವಿದೆಯನ್ನು ಗುರುತಿಸಿ ರಾಜ್ಯ ಸರ್ಕಾರ ಹಲವು ಬಾರಿ ರಾಜ್ಯಮಟ್ಟದ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಇದೀಗ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿ ಅವರ ಕಲೆಗೆ ಸೂಕ್ತ ಬೆಂಬಲ ಸೂಚಿಸಿ ಗೌರವಿಸಿ ಸತ್ಕಾರ ಮಾಡಲಿದೆ.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೀಮವ್ವ ಶಿಳ್ಳೆಕ್ಯಾತರ, ರಾಜ್ಯದಲ್ಲಿರುವ ಸಮಾಜದ ಎಲ್ಲಾ ಕಲಾವಿದರಿಗೆ ಸರ್ಕಾರ ನೀಡಿರುವ ಪುರಸ್ಕಾರಕ್ಕೆ ಅಭಿನಂದನೆ ತಿಳಿಸಿದ್ದಾರೆ. ಪದ್ಮಶ್ರೀ ಭೀಮವ್ವ ಆರ್ಥಿಕವಾಗಿ ಸ್ಥಿತಿವಂತರಲ್ಲ. ಪ್ರಶಸ್ತಿಯೊಂದಿಗೆ ಅಲ್ಪ ಸ್ವಲ್ಪ ಗೌರವಧನ ನೀಡಿದಲ್ಲಿ ಹೆಚ್ಚು ಅನುಕೂಲವಾಗಲಿದೆ. ವಯೋವೃದ್ಧೆ ಭೀಮವ್ವ ಇದೀಗ 96ರ ಆಸುಪಾಸಿನಲ್ಲಿದ್ದು, ಪ್ರಶಸ್ತಿಯಿಂದ ಹೆಮ್ಮೆ ಪಟ್ಟು ತಿರುಗಾಡುವ ವಯಸ್ಸಲ್ಲ. ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳೊಂದಿಗೆ ಉಳಿದ ಜೀವಿತಾವಧಿಯಲ್ಲಿ ಪ್ರಶಸ್ತಿಯೊಂದಿಗೆ ಧನಸಹಾಯವಿದ್ದರೆ ಕೊನೆಗಾಲದ ಜೀವನ ಸಂತೋಷದಿಂದ ಕಳೆಯಲು ಅನುವಾಗಲಿದೆ ಎಂದು ಸಮಾಜದ ಗೌರವಾಧ್ಯಕ್ಷ ರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಭೀಮವ್ವ ಅವರಿಗೆ ಫಲ ಪುಷ್ಪ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿಳ್ಳೇಕ್ಯಾತ ಸಮಾಜದ ರಾಜ್ಯಾಧ್ಯಕ್ಷ ನಾಗಪ್ಪ ಕೆ.ಧುಮಾಳ್, ಗೌರವಾದ್ಯಕ್ಷ ಪಿ.ರಾಮಯ್ಯ ಸಾಸ್ನೀಕರ್, ಎಲ್ಐಸಿ ಶರಣಬಸಪ್ಪ, ಸಮಾಜದ ಮಾಜಿ ಕಾರ್ಯದರ್ಶಿ ಶ್ರೀನಿವಾಸ, ದಿವಾಕರ, ಮಂಜಪ್ಪ, ನಿವೃತ್ತ ಹೆಚ್.ಎಂ.ಮಂಜಪ್ಪ, ಸೀನಪ್ಪ ಇದ್ದರು.-----
ಫೋಟೋ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭೀಮವ್ವ ಶಿಳ್ಳೇಕ್ಯಾತರರನ್ನು ರಾಜ್ಯ ಶಿಳ್ಳೇಕ್ಯಾತರ ಸಮಾಜದ ವತಿಯಿಂದ ಸ್ವಗೃಹ ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದಲ್ಲಿ ಸನ್ಮಾನಿಸಲಾಯಿತು.ಫೋಟೋ ಫೈಲ್ ನಂ.12 ಕೆ.ಎಸ್.ಕೆ.ಪಿ 1