ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ನನ್ನ ವಿಧಾನಸಭಾ ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವುದರೊಂದಿಗೆ ಇಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಅವರ ಸ್ವಂತ ಜೀವನ ರೂಪಿಸಿಕೊಂಡರೆ ಅದೇ ನನಗೆ ಹಾಗೂ ಈ ಕ್ಷೇತ್ರಕ್ಕೆ ಪೋಷಕರಿಗೆ ನೀಡುವ ಗೌರವ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.ಪಟ್ಟಣದ ತೀನಂಶ್ರೀ ಭವನದಲ್ಲಿ ಸೋಮವಾರ ಎಸ್.ಬಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ನಮಗೆ ಪ್ರೇರಣೆ ನಮ್ಮ ಮೇಷ್ಟ್ರು ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ತಾಲೂಕಿನ 44 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿಯಲ್ಲಿ 625ಕ್ಕೆ 600ಕ್ಕೂ ಹೆಚ್ಚು ಅಧಿಕ ಅಂಕಗಳನ್ನು ಪಡೆದಿದ್ದು ಇವರ ಸಾಧನೆಗೆ ಪ್ರೇರಣಾದಾಯಿಗಳಾದ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಯ ಎಲ್ಲಾ ಶಿಕ್ಷಕರನ್ನೊಳಗೊಂಡ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಬಿಇಒ ನೇತೃತ್ವದಲ್ಲಿ ಉತ್ತಮವಾದ ಪ್ರೇರಣಾ ಶಿಬಿರಗಳೊಂದಿಗೆ ಮಕ್ಕಳ ಹಾಗೂ ಪೋಷಕರೊಂದಿಗೆ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಬಿಇಒ ಕಾಂತರಾಜು ಮಾತನಾಡಿ ರಾಜ್ಯದಲ್ಲೇ ಈ ರೀತಿಯ ಕಾರ್ಯಕ್ರಮ ಯಾರು ಮಾಡಿರಲು ಸಾ ಧ್ಯವಿಲ್ಲ ಇದೊಂದು ವಿಶೇಷ ವಿನೂತನ ಕಾರ್ಯಕ್ರಮವಾಗಿದೆ. ಶಾಸಕರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಅವರ ಪ್ರೇರಣೆ ಹಾಗೂ ಅವರ ಪ್ರಶಂಸೆಯ ಮಾತುಗಳೇ ನಮಗೆ ಈ ಸಾಧನೆಗೆ ಕಾರಣವಾಗಿದೆ. ಇದರೊಂದಿಗೆ ನನ್ನೊಂದಿಗೆ ತಾಲೂಕಿನ ಎಲ್ಲಾ ಶಿಕ್ಷಕರು ಈ ಸಾಧನೆಗೆ ಕಾರಣವಾಗಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು ತಾಲ್ಲೂಕಿನಲ್ಲಿ ಹೆಚ್ಚು 625ಕ್ಕೆ 620ಅಂಕಗಳನ್ನು ಪಡೆದ ಮೇಲನಹಳ್ಳಿ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಧನುಷ್ ಎಸ್ ಮಾತನಾಡಿ ನಮಗೆ ನಮ್ಮ ಶಾಲೆಯ ಶಿಕ್ಷಕರು ಹಾಗೂ ಪ್ರೇರಣಾ ಶಿಬಿರಗಳೇ ನಮ್ಮ ಸಾಧನೆಗೆ ಕಾರಣವಾಗಿದೆ. ಕೇವಲ ಶಾಲಾ ಅವಧಿಯಲ್ಲಿ ಮಾತ್ರವಲ್ಲದೇ ಉಳಿದ ಸಮಯದಲ್ಲೂ ನಮಗೆ ಹೆಚ್ಚು ಅಂಕಗಳನ್ನು ಪಡೆಯುವ ಬಗ್ಗೆ ಅಧ್ಯಯನ ಮಾಡುವ ಬಗ್ಗೆ ತಿಳಿಸುತ್ತಿದ್ದರು. ಆದ್ದರಿಂದ ನಮಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಇದರೊಂದಿಗೆ ಶಾಸಕರೇ ಖುದ್ದು ನಮ್ಮ ಮನೆಗಳಿಗೆ ಬಂದು ನಮ್ಮನ್ನು ಅಭಿನಂದಿಸಿದ್ದು ನಮಗೆ ಹೆಚ್ಚು ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಇದಕ್ಕೆ ಕಾರಣ ಶಿಕ್ಷಕರು ತಮ್ಮಅಭಿಪ್ರಾಯ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಶಿಕ್ಷಕರು ಅಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.