ಅಖಿಲಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಮಾಜದ ಐಕ್ಯತೆಯನ್ನು ಕಾಪಾಡಲು ಜೀವಿತದ ಕೊನೆಯವರೆಗೂ ಶ್ರಮಿಸಿದ ಶ್ಯಾಮನೂರು ಶಿವಶಂಕರಪ್ಪ

ಕನ್ನಡಪ್ರಭ ವಾರ್ತೆ, ತುಮಕೂರುಅಖಿಲಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಮಾಜದ ಐಕ್ಯತೆಯನ್ನು ಕಾಪಾಡಲು ಜೀವಿತದ ಕೊನೆಯವರೆಗೂ ಶ್ರಮಿಸಿದ ಶ್ಯಾಮನೂರು ಶಿವಶಂಕರಪ್ಪ ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಿಸಲು ಹೋರಾಟ ನಡೆಸಿದ್ದರು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತುಮಕೂರು. ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ ಪರಮೇಶ್ ನುಡಿದರು.ಅವರು ನಗರದ ಮುರುಘ ರಾಜೇಂದ್ರ ಸಭಾಂಗಣದಲ್ಲಿ ಅಖಿಲಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕ ಏರ್ಪಡಿಸಿದ್ದ ಶ್ಯಾಮನೂರು ಶಿವಶಂಕರಪ್ಪನವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು. ಶ್ಯಾಮನೂರು ಅವರು ವೀರಶೈವ ಲಿಂಗಾಯಿತ ಸಮಾಜಕ್ಕೆ ತಂದೆಯ ಸ್ಥಾನದಲ್ಲಿ ನಿಂತು ಅದನ್ನು ನಿರ್ವಹಿಸಿದವರು. ಅಲ್ಲಿ ಅವರ ಮಾತಿಗೆ ಯಾರೂ ಎದುರುತ್ತರ ಕೊಡುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದ ರಾಜ್ಯ ಕೋಶಾಧ್ಯಕ್ಷರಾಗಿ ಶಾಸಕರಾಗಿ ಮಂತ್ರಿಗಳಾಗಿ ದುಡಿದವರು ಅವರನ್ನು ಪಕ್ಷ ಭೇದವಿಲ್ಲದೆ ಎಲ್ಲರೂ ಪ್ರೀತಿಸುತ್ತಿದ್ದರು ತಮಗೆನಿಸಿದ ಸತ್ಯವನ್ನು ನಿರ್ಬಿತೆಯಿಂದ ಹೇಳುವ ಗುಣ ಅವರಲ್ಲಿತ್ತು ಅವರಲ್ಲಿ ಎಷ್ಟೇ ಸಿರಿವಂತಿಕೆ ಇದ್ದರೂ ಸರಳವಾದ ವ್ಯಕ್ತಿತ್ವವನ್ನು ಹೊಂದಿದ್ದರು ಅವರ ಅಗಲಿಕೆ ಕೇವಲ ವೀರಶೈವ ಲಿಂಗಾಯಿತ ಸಮಾಜಕ್ಕೆ ಅಲ್ಲದೆ ಇಡೀ ನಾಡಿನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕದ ನಿರ್ದೇಶಕ, ಇತಿಹಾಸ ಸಂಶೋಧಕರಾದ ಡಾ ಡಿ ಎನ್ ಯೋಗೀಶ್ವರಪ್ಪ ಮಾತನಾಡಿ, ದಾವಣಗೆರೆಯ ಸೋಲಿಲ್ಲದ ಸರದಾರನೆಂದೇ ಪ್ರಸಿದ್ದಿಯಾಗಿದ್ದ ಶ್ಯಾಮನೂರು ಶಿವಶಂಕರಪ್ಪನವರು ಕೇವಲ ಹತ್ತನೇ ತರಗತಿಯವರೆಗೆ ಕಲಿತಿದ್ದರೂ ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಮಾಡಿಕೊಟ್ಟವರು ಎಂದರು.ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಮಹಾನಗರ ಪಾಲಿಕೆ ಘಟಕದ ಅಧ್ಯಕ್ಷ ಕೆ ಎಸ್ ಉಮಾಮಹೇಶ್ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಅಜಾತ ಶತ್ರುವೆಂದೇ ಹೆಸರಾಗಿದ್ದ ಶ್ಯಾಮನೂರು ಶಿವಶಂಕರಪ್ಪನವರು ಮಧ್ಯಕರ್ನಾಟಕ ಪ್ರಮುಖ ನಾಯಕರಾಗಿ ದಾವಣಗೆರೆಯಲ್ಲಿ ಉದ್ಯಮ ಸಾಮ್ರಾಜ್ಯವನ್ನೇ ನಿರ್ಮಿಸಿದವರು ಇಷ್ಟಲಿಂಗಧಾರಿಯಾಗಿದ್ದ ಅವರು ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರ ಬಾಳಿಗೆ ಬೆಳಕನ್ನು ನೀಡಿದ ದಾಸೋಹಿ ಮಠ ಮಾನ್ಯಗಳ ಬಗ್ಗೆ ಸಮಾಜದ ಗುರುಗಳ ಬಗ್ಗೆ ಅಪಾರ ಭಕ್ತಿಯನ್ನಿಟ್ಟುಕೊಂಡಿದ್ದ ಶ್ಯಾಮನೂರು ಅವರ ಜೀವನವೇ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯಟದರ್ಶಿ ಧರ್ಮಪಾಲ್ ಕಾರ್ಯದರ್ಶಿ ರುದ್ರಪ್ರಸಾದ್ ತಾಲ್ಲೂಕು ಘಟಕದ ಅಧ್ಯಕ್ಷ ಜಯಣ್ಣ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಡಾ. ಸದಾಶಿವಯ್ಯ ನಟರಾಜು ರಾಜಶೇಖರಯ್ಯ ಪುಷ್ಪಾ ಉದಯ್‌ಕುಮಾರ್ ಡಾ ಟಿ ಆರ್ ಲೀಲಾವತಿ ಇತರರು ಹಾಜರಿದ್ದರು.ಪೋಟೋ : ಮುರುಘ ರಾಜೇಂದ್ರ ಸಭಾಂಗಣದಲ್ಲಿ ಅಖಿಲಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕದಿಂದ ಶ್ಯಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.