ಕನ್ನಡಪ್ರಭ ವಾರ್ತೆ ಹೊಸನಗರ

ಅಮ್ಮ ಎಂದರೆ ಮೈಮನವೆಲ್ಲ ಹೂವಾಗುವುದಮ್ಮ.. ಇಂಥ ಅದ್ಭುತ ಗೀತೆಯಿಂದ ನಮ್ಮೆಲ್ಲರ ಅಮ್ಮನನ್ನು ನಮ್ಮ ಹೃದಯ ಮಂದಿರದಲ್ಲಿ ಕೂರಿಸಿದ, ತಮ್ಮ ಮಧುರ ಕಂಠದಿಂದ ದಶಕಗಳ ಕಾಲ ಕೋಟ್ಯಂತರ ಕನ್ನಡಿಗರ ಹೃದಯ ಸಿಂಹಾಸನವನ್ನು ಆಳಿದ ನಾದಲೋಕದ ಗಾನಸರಸ್ವತಿ, ದಿ.ಎಸ್. ಜಾನಕಮ್ಮನವರ ನೆನಪುಗಳು ಮಲೆನಾಡಿನ ಮಡಿಲು ಹೊಸನಗರದಲ್ಲಿ ಪುನಃ ಜೀವತಳೆದವು.

ಗಾನಕೋಗಿಲೆಯ ಮಧುರ ಧ್ವನಿ ಭೌತಿಕವಾಗಿ ದೂರವಾಗಿದ್ದರೂ, ಅವರ ನಾದಪಯಣ ಪ್ರತಿಯೊಬ್ಬ ಕಲಾಭಿಮಾನಿಯ ಎದೆಯಾಳದಲ್ಲಿ ಶಾಶ್ವತವಾಗಿ ನೆಲೆಸಿದೆ ಎಂಬುದಕ್ಕೆ ಹೊಸನಗರದಲ್ಲಿ ನಡೆದ ಈ ‘ಗಾನನಮನ‘ ಕಾರ್ಯಕ್ರಮ ಸಾಕ್ಷಿಯಾಯಿತು. ಇತ್ತೀಚೆಗೆ ದೈವಾಧೀನರಾದ ಈ ಶ್ರೇಷ್ಠ ಗಾಯಕಿಯ ಸ್ಮರಣಾರ್ಥ, ಸುಗಮ ಸಂಗೀತ ಪರಿಷತ್ತು, ತಾಲೂಕು ಘಟಕ ಹೊಸನಗರ ಇವರು ನಗರದ ಒಕ್ಕಲಿಗರ ಭವನದಲ್ಲಿ ಆವರಣದಲ್ಲಿ ಆಯೋಜಿಸಿದ್ದ ಭಾವಪೂರ್ಣ ಗಾನನಮನ ಕಾರ್ಯಕ್ರಮವು ಶ್ರೋತೃಗಳ ಮನ ತಣಿಸಿತು.

ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಸಾಹಿತಿ ಶಾಂತರಾಮ್ ಪ್ರಭುಗಳು ಮಾತನಾಡಿ ಎಸ್. ಜಾನಕಿ ಅವರು ಬದುಕಿನ ಪಯಣ ಆರಂಬಿಸಿದ್ದು ತೆಲಗಿನ ಮಣ್ಣಿನಲ್ಲದರೆ, ಪಯಣ ಮುಗಿಸಿದ್ದು ನಮ್ಮ ಕನ್ನಡ ಮಣ್ಣಿನಲ್ಲಿ ಈ ನಾಡು ಹಾಗೂ ಭಾಷೆಯ ಬಗ್ಗೆ ಅವರಿಗಿದ್ದ ವಿಶೇಷ ಪ್ರೀತಿಯೇ ಇದಕ್ಕೆ ಕಾರಣ ಹಿನ್ನೆಲೆ ಗಾಯಕಿಯಾಗಿ ಸಂತೋಷ, ದುಃಖ, ಪ್ರೀತಿ, ಭಕ್ತಿ, ತಾಯಿಯ ಮಮತೆ, ವಿರಹ, ಯಾವ ಭಾವನೆಯೇ ಇರಲಿ ತಮ್ಮ ಅಪರೂಪದ ಕಂಠ ಸಿರಿಯಿಂದ ಅದಕ್ಕೆ ಜೀವ ತುಂಬಿದ್ದರು. ಹಲವಾರು ಮಾನವೀಯ ಮೌಲ್ಯಗಳನ್ನು ನಾಡಿಗೆ ಅರ್ಪಿಸಿ ಅಮರವಾಗಿದ್ದಾರೆ ಎಂದರು

ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶಾಂತಶೆಟ್ಟಿ ಮಾತನಾಡಿ ಜಾನಕಮ್ಮ ನವರು ಕೇವಲ ಚಲನಚಿತ್ರ ಹಿನ್ನೆಲೆ ಗಾಯಕಿಯಲ್ಲ, ಸಮಗ್ರ ಭಾರತೀಯ ಸಂಗೀತ ಲೋಕದ ಅಪೂರ್ವ ಧ್ವನಿಯಾಗಿದ್ದರು. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಗೀತೆಗಳಿಗೆ ಧ್ವನಿಯಾಗುವ ಮೂಲಕ ಕೋಟ್ಯಂತರ ಸಂಗೀತಾಸಕ್ತರ ಮನದಲ್ಲಿ ನೆಲೆಸಿದ್ದಾರೆ. ಅವರ ಕಂಠಸಿರಿ, ಭಾವಪೂರ್ಣ ಗಾಯನ ಹಾಗೂ ಸಂಗೀತದ ಮೇಲಿನ ಸಮರ್ಪಣಾ ಬಾವ ಸದಾ ಸ್ಮರಣೀಯವಾಗಿದ್ದು, ಅವರ ಹಾಡುಗಳು ಮುಂದಿನ ಪೀಳಿಗೆಗೂ ಪ್ರೇರಣೆಯಾಗಲಿವೆ. ಯುಗಯುಗಳು ಸಾಗುತ್ತವೆ ಎಂದರು.


ಹೊಸನಗರ ಟೌನ್ ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಕಲಾವಿದರು ತಮ್ಮ ಹಾಡಿನಲ್ಲಿ ಜಾನಕಮ್ಮನವರನ್ನು ಅಮರಗೊಳಿಸಿದರು, ಎಲ್ಲರ ಕಂಗಳು ವಂದನೆ ಹೇಳಿತು, ಹೃದಯವು ತುಂಬಿ ಹಾಡಿತು...

ಕಾರ್ಯಕ್ರಮದಲ್ಲಿ ಡಾ. ಮಾರ್ಶಲ್ ಶೆರಾಂ ನಿವೃತ್ತ ಪ್ರಾಂಶುಪಾಲರು, ಯೋಗಿಶ್ ಪ್ರಾಂಶುಪಾಲರು ಇಂದಿರ ಗಾಂಧಿ ವಸತಿ ಶಾಲೆ ಹೊಸನಗರ, ಮಲೆನಾಡಿನ ಹಿರಿಯ ಹಾಡುಗಾರರಾದ ಸುರೇಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಶ್ರೀಮತಿ ಅಶ್ವಿನಿ ಪ್ರಭು, ನಿರ್ವಹಣೆ ಕೆ.ಜಿ. ನಾಗೇಶ್, ಪ್ರಶಾಂತ್ ಮಾಡಿದರು.----------------

ಪೋಟೋ: 27ಎಸ್ಒಎಸ್‌01