ಸಾರಾಂಶ
ಕೋರೆಂಗಾವ್ ಮಹರ್ ಸೈನಿಕರಿಗೆ ಗೌರವ ನಮನ
ಕನ್ನಡಪ್ರಭ ವಾರ್ತೆ ಹನೂರು
ಅಸ್ಪೃಶ್ಯತೆಯ ವಿರುದ್ಧ ನಡೆದ ಸಮರದಲ್ಲಿ ಹೋರಾಡಿ ಪ್ರಚಂಡ ಜಯ ಸಾಧಿಸಿ ವೀರ ಮರಣ ಹೊಂದಿದ ಮಹರ್ ಸೈನಿಕರಿಗೆ ಗೌರವ ನಮನಗಳನ್ನು ಸಲ್ಲಿಸುವ ಮೂಲಕ 206 ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ವತಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಡೋಲು, ವಾದ್ಯಗಳ ಜೊತೆ ನೂರಾರು ಜನ, ಹಾಗೂ ಸಂಘಟನೆಯ ಪದಾಧಿಕಾರಿಗಳು ಸಾರ್ವಜನಿಕರು ಸಾಗಿ ಪಟ್ಟಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಗಣ್ಯರು ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದೆ ವೇಳೆ ಉದ್ಘಾಟನಾ ಭಾಷಣ ಮಾಡಿದ ಭೀಮ ಕೋರೆಗಾಂವ್ ಪುಸ್ತಕದ ಲೇಖಕ ಮಣಗಳ್ಳಿ ಗ್ರಾಮದ ಡಿ. ಮಹಾದೇವಕುಮಾರ್ ಮಾತನಾಡಿ, 1818 ನೇ ಇಸವಿಯಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿರೂರು ತಾಲೂಕಿನಲ್ಲಿ ನಡೆದ ಭೀಮ ಕೋರೆಗಾಂವ್ ಯುದ್ಧವು ಯಾವುದೇ ರಾಜ್ಯ ಕಬಳಿಸುವುದಕ್ಕಾಗಲಿ, ಹಣಕ್ಕಾಗಲಿ, ಸಂಪತ್ತಿಗಾಗಲಿ ನಡೆದ ಯುದ್ಧವಲ್ಲ, ಬದಲಾಗಿ ದಲಿತ ಮತ್ತು ಶೋಷಿತ ಸಮುದಾಯದ ಮನುಷ್ಯರನ್ನು ಅತ್ಯಂತ ಹೀನಾಯ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದ ಮೇಲ್ವರ್ಗದ ಪೇಶ್ವೆಗಳ ಜೊತೆ ಕೇವಲ 800 ಜನ ಮಹರ್(ದಲಿತ) ಸೈನಿಕರು ಪೇಶ್ವೆಗಳ 28 ಸಾವಿರ ಸೈನಿಕರ ಜೊತೆ ಕೇವಲ ಒಂದು ಹಗಲು ಒಂದು ರಾತ್ರಿ ಕೆಚ್ಚೆದೆಯಿಂದ ಹಸಿದ ಹೆಬ್ಬುಲಿಗಳಂತೆ ಕಾದಾಡಿ ಎಲ್ಲರನ್ನು ಯುದ್ಧದಲ್ಲಿ ಸೋಲಿಸಿದ ಒಂದು ಐತಿಹಾಸಿಕ ಯುದ್ಧ, ಈ ಯುದ್ಧವನ್ನು ಗೆಲ್ಲುವುದರ ಮೂಲಕ ಸ್ವಾಭಿಮಾನ ಮತ್ತು ಆತ್ಮ ಗೌರವದ ವಿಜಯ ಪತಾಕೆ ಹಾರಿಸಿದರು.
ಸ್ವಾಭಿಮಾನದ ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದ ಮಹರ್ ಸೈನಿಕರ ನೆನಪಾರ್ತವಾಗಿ ಘಟನೆ ನಡೆದ ಸ್ಥಳದಲ್ಲಿ ವಿಜಯಸ್ತಂಭ ಸ್ಥಾಪಿಸಿದ್ದಾರೆ ಎಂದು ಹೇಳುತ್ತಾ ಯುದ್ಧದಲ್ಲಿ ಮಡಿದ ಮಹರ್ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ ಪಡೆದಂತ ಮಾರ್ಟಳ್ಳಿ ಗ್ರಾಪಂ ಹಾಲಿ ಉಪಾಧ್ಯಕ್ಷರು ಮತ್ತು ಹಾಲಿ ಸದಸ್ಯರಾಗಿರುವ ರಾಮಲಿಂಗಮ್ ಮತ್ತು ನದಿಯಾ ದಂಪತಿಗಳಿಗೆ ಹಾಗೂ ಕೊಳ್ಳೇಗಾಲದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಅಂಬೇಡ್ಕರ್ ನ್ಯಾಷನಲ್ ವಿಶಿಷ್ಟ ಸೇವಾ ಪ್ರಶಸ್ತಿ ಪುರಸ್ಕೃತರು ಓಲೆ ಮಹದೇವ್ ರವರು ಸೇರಿದಂತೆ, 2022 ನೇ ಸಾಲಿನ ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ ಪಡೆದಿರುವಂತಹ ನಿಂಪುವಾರ್ತಾ ಪತ್ರಿಕೆ ಸಂಪಾದಕ ರಾಜೇಶ್, ಮೈಸೂರು ವಿಭಾಗಿಯ ಡಿಎಸ್ಎಸ್ ಸಂಚಾಲಕ ಸಿದ್ದರಾಜು ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಹನೂರು ತಾಲೂಕು ರಾಮಪುರ ಹೋಬಳಿಯ ಆರ್ ಐ ಶಿವಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಸಂಪತ್ ಕುಮಾರ್, ಪ್ರಥಮ ದರ್ಜೆ ಗುತ್ತಿಗೆದಾರರಾದ ಪುಟ್ಟಸ್ವಾಮಿ, ಗುತ್ತಿಗೆದಾರ, ಗುರುಸ್ವಾಮಿ, ಜಯಪ್ರಕಾಶ್, ಡಿಎಸ್ ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಕೆ ವೀರ, ವನ್ನೀಕುಲ ಕ್ಷತ್ರಿಯ ಸಂಘ ಜಿಲ್ಲಾಧ್ಯಕ್ಷ ಮಣಿ ಪೆದ್ದನಪಾಳ್ಯ, ಮಹದೇಶ್ ಬೈರನತ್ತ. ಸಿದ್ದಯ್ಯ, ಹನೂರು ಮತ್ತು ಕೊಳ್ಳೇಗಾಲದ ವಿವಿಧ ಗ್ರಾಮದ ಡಿಎಸ್ ಎಸ್ ಸಂಘಟನೆ ಸದಸ್ಯರು, ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.