ಪಾಠ ಮಾಡುವ ಮೂಲಕ ಮೌಲ್ಯಯುತ ವಿಚಾರ ಮತ್ತು ಜ್ಞಾನದ ಶಿಸ್ತು ಕಲಿಸಿದರು. ನಮಗೆ ಕಲಿಸಿದ್ದು ತರಗತಿಗಳಲ್ಲಾದರೂ ಬದುಕಿಗೆ ಮಾರ್ಗದರ್ಶನವಾಯಿತು.

ಧಾರವಾಡ:

ಅದೊಂದು ಹೃದಯಸ್ಪರ್ಶಿ, ವಿಶೇಷ, ವಿಶಿಷ್ಟ ಸಮಾರಂಭ. 1993ರಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ 33 ವರ್ಷಗಳ ನಂತರ ತಮಗೆ ಕಲಿಸಿದ ಗುರುಗಳನ್ನು ತಾವು ಕಲಿತ ಸಂಸ್ಥೆಯಲ್ಲಿ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಭಾನುವಾರ ನಡೆದ ವಿಶೇಷ ಕಾರ್ಯಕ್ರಮವಿದು. ಈ ಅಪರೂಪದ ಸಮಾರಂಭದಲ್ಲಿ ತಮಗೆ ಕಲಿಸಿದ ಡಾ. ವೀರಣ್ಣ ರಾಜೂರ, ಡಾ. ಶಾಲಿನಿ ರಘುನಾಥ್, ಡಾ. ಎಸ್.ವಿ. ಅಯ್ಯನಗೌಡರ, ಡಾ. ಸುಲೋಚನಾ ಮಟ್ಟಿ ಹಾಗೂ ಡಾ. ಶಾಂತಾ ಇಮ್ರಾಪುರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಅಂದಿನ ವಿದ್ಯಾರ್ಥಿ ಹಾಗೂ ರಾಯಚೂರಿನ ವಾಲ್ಮೀಕಿ ವಿವಿ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ಪಾಠ ಮಾಡುವ ಮೂಲಕ ಮೌಲ್ಯಯುತ ವಿಚಾರ ಮತ್ತು ಜ್ಞಾನದ ಶಿಸ್ತು ಕಲಿಸಿದರು. ನಮಗೆ ಕಲಿಸಿದ್ದು ತರಗತಿಗಳಲ್ಲಾದರೂ ಬದುಕಿಗೆ ಮಾರ್ಗದರ್ಶನವಾಯಿತು. ನಮಗೆ ಹರಸಿದರು, ಹಾರೈಸಿದರು. ಜತೆಗೆ ನಮ್ಮ ದೇಹಕ್ಕೆ ಅಂಟಿದ ಚರ್ಮದ ಹಾಗೆ ನಮ್ಮೊಂದಿಗೆ ಇದ್ದಾರೆ ಎಂದು ಶ್ಲಾಘಿಸಿದರು.

ಪ್ರಾಧ್ಯಾಪಕ ಡಾ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ಹೆತ್ತಾಕೆಯ ಹಾಗೆ ನಮ್ಮನ್ನು ಬೆಳೆಸಿದ್ದು, ಬದುಕು ಕೊಟ್ಟಿದ್ದು ಗುರುಗಳು ಎಂದು ಪ್ರಶಂಸಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ, ಬದುಕನ್ನು ಕೊಟ್ಟ ಕನ್ನಡ ಅಧ್ಯಯನ ಪೀಠ ಮರೆಯದೆ ಕಲಿಸಿದ ಗುರುಗಳನ್ನು ಗೌರವಿಸಿ. ವಿದ್ಯಾರ್ಥಿಗಳಿಲ್ಲದೆ ಗುರುಗಳಿಲ್ಲ ಮತ್ತು ಪ್ರಾಧ್ಯಾಪಕರು ಬೆಳೆಯಲು ಸಾಧ್ಯವಿಲ್ಲ ಎಂದರು.

ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ. ಕೃಷ್ಣ ನಾಯಕ, ಡಾ. ಸುರೇಶ ಗೌಡರ ನೆನಪುಗಳನ್ನು ಹಂಚಿಕೊಂಡರು. ಶರಣಮ್ಮ ಗೋರೆಬಾಳ ಸ್ವಾಗತಿಸಿದರು. ಡಾ. ದತ್ತಾತ್ರೇಯ ಗಾಂವಕರ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಬಿದರಿ ನಿರೂಪಿಸಿದರು. ವಿಶ್ವನಾಥ ಮುನವಳ್ಳಿ ಸೇರಿದಂತೆ 1993ನೇ ಬ್ಯಾಚ್‌ ವಿದ್ಯಾರ್ಥಿಗಳಿದ್ದರು.