ಸಾರಾಂಶ
ಶ್ವೇತ ವೋಲೇಟಿ ಹಾಗೂ ಕೆ.ಎಂ.ದಿವ್ಯಾಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬೆಳಗಾವಿ ಸುವರ್ಣಸೌಧದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಮ್ಮ ಶಾಲೆ ನಮ್ಮ ಜವಾಬ್ದಾರಿ ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಯಲಗುಡಿಗೆ ಗ್ರಾಮದ ಶಾಲೆ ದಾನಿಗಳಾದ ಶ್ವೇತಾ ವೋಲೇಟಿ ಹಾಗೂ ಕೆ.ಎಂ.ದಿವ್ಯಾ ಶಾಲೆಗೆ ಸಲ್ಲಿಸಿರುವ ಸೇವೆ ಪರಿಗಣಿಸಿ ರಾಜ್ಯ ಸರ್ಕಾರದಿಂದ ಗೌರವ ಸಮರ್ಪಣೆ ಮಾಡಲಾಯಿತು.ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಈ ಸಮಾರಂಭಕ್ಕೆ ಆಯ್ಕೆಯಾಗಿದ್ದು. ಈ ಶಾಲೆ ಏಳಿಗೆಗೆ ಶ್ರಮಿಸುತ್ತಿರುವ ಇಬ್ಬರು ದಾನಿಗಳಿಗೆ ರಾಜ್ಯ ಸರ್ಕಾರದಿಂದ ಗೌರವ ಸಮರ್ಪಣೆ ದೊರಕಿದೆ. ಯಲಗುಡಿಗೆ ಶಾಲೆ ಶಿಕ್ಷಕಿ ಕೆ.ಎಚ್.ಗೀತಾ ಮಾತನಾಡಿ, ದಾನಿಗಳಾದ ಶ್ವೇತಾ ವೋಲೇಟಿ ಅನಿವಾಸಿ ಭಾರತೀಯರಾಗಿದ್ದು, 2013 ರಿಂದಲೂ ಪ್ರತಿವರ್ಷ ಶಾಲೆ ಸಬಲೀಕರಣಕ್ಕೆ ಕೈಜೋಡಿಸಿದ್ದಾರೆ. ತಮ್ಮ ಮಕ್ಕಳ ಹುಟ್ಟು ಹಬ್ಬದ ನೆನಪಿಗಾಗಿ ಹಲವಾರು ವಸ್ತು ಹಾಗೂ ಮೂಲಸೌಲಭ್ಯವನ್ನು ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆ ಎಂದರು.ನೆನಪಿನಂಗಳ ಹೆಸರಿನ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯ ಕೆ.ಎಂ.ದಿವ್ಯ ಕಳೆದ ಒಂದು ವರ್ಷದಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಇಂಗ್ಲಿಷ್ ತರಗತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸು ತ್ತಿದ್ದರು. ತಾನು ಓದಿದ ಶಾಲೆಗೆ ಸೇವೆ ಮಾಡಬೇಕೆಂಬ ಸದುದ್ದೇಶದಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇವರಿಬ್ಬರ ಅನುಪಮ ಸೇವೆ ಗುರುತಿಸಿ ರಾಜ್ಯ ಸರ್ಕಾರ ಗೌರವ ಸಮರ್ಪಣೆ ಮಾಡಿದೆ ಎಂದು ಹೇಳಿದರು.ಯಲಗುಡಿಗೆಯಂತಹ ಕುಗ್ರಾಮದ ಸರ್ಕಾರಿ ಶಾಲೆ ಇಂದು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದರೆ ಅದರಲ್ಲಿ ಶ್ವೇತಾ ವೋಲೇಟಿ ಹಾಗೂ ಕೆ.ಎಂ.ದಿವ್ಯ ಅವರ ಕೊಡುಗೆ ದೊಡ್ಡ ಮಟ್ಟದಲ್ಲಿದೆ. ಶಾಲಾ ಮಕ್ಕಳಿಗೆ ಮತ್ತು ಶಾಲೆಯ ಭೌತಿಕ ಪ್ರಗತಿಯ ಮೂಲಕ ನಮ್ಮ ಶಾಲೆ ಸಬಲೀಕರಣಕ್ಕೆ ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ. 12 ಕೆಸಿಕೆಎಂ 4ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಯಲಗುಡಿಗೆ ಗ್ರಾಮದ ಶಾಲೆಯ ದಾನಿಗಳಾದ ಶ್ವೇತ ವೋಲೇಟಿ ಹಾಗೂ ಕೆ.ಎಂ.ದಿವ್ಯ ಅವರನ್ನು ಗೌರವಿಸಲಾಯಿತು. ಶಿಕ್ಷಕಿ ಕೆ.ಎಚ್.ಗೀತಾ ಇದ್ದರು.