ಸಾರಾಂಶ
- ಚನ್ನಗಿರಿಯಲ್ಲಿ ತಾಲೂಕು ಕಾಂಗ್ರೆಸ್‌ನಿಂದ ಅಭಿನಂದನೆ ಸ್ವೀಕಾರ । ಕೇವಲ 29 ಸಾವಿರ ಮತ ಅಂತರ ಗೆಲುವಿಗೆ ಕಾರಣ ಏನೆಂದು ಪ್ರಶ್ನೆ- - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಕಳೆದ ಎರಡೂವರೆ ದಶಕಗಳಿಂದ ಬಿಜೆಪಿ ವಶದಲ್ಲಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸುವ ಮೂಲಕ ಮತದಾರರು ಪಕ್ಷದ ತೆಕ್ಕೆಗೆ ನೀಡಿದ್ದಾರೆ. ಈಗ ದಾವಣಗೆರೆ ಕ್ಷೇತ್ರದಲ್ಲಿ ತ್ರಿಬಲ್ ಎಂಜಿನ್ ಸರ್ಕಾರ ಆಡಳಿತ ನಡೆಸುತ್ತಿದೆ. ಅಭಿವೃದ್ಧಿ ಪರ್ವ ಪ್ರಾರಂಭಿಸಲಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ಮಂಗಳವಾರ ಪಟ್ಟಣದ ಜವಳಿ ಸಮುದಾಯ ಭವನದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ತಮಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟನೆ ನೆರವೇರಿಸಿ, ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಲಕ್ಷ ಮತಗಳ ಅಂತರ ಗೆಲುವು ಎಂದಿದ್ದಿರಿ:ಲೋಕಸಭೆ ಚುನಾವಣೆಯಲ್ಲಿ ಚನ್ನಗಿರಿ ಕ್ಷೇತ್ರ ಮತದಾರರು ಅಧಿಕ ಮತಗಳನ್ನು ನೀಡಿ ನನ್ನನ್ನು ಲೋಕಸಭಾ ಸದಸ್ಯೆಯಾಗಿ ಆಯ್ಕೆಮಾಡಿದ್ದಾರೆ. ನಿಮ್ಮಗಳ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಮತದಾನ ಮುಗಿದ ನಂತರ ನನ್ನನ್ನು ಭೇಟಿ ಮಾಡಿದ ಎಲ್ಲ ಕಾರ್ಯಕರ್ತರು, ಮುಖಂಡರು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೀರಿ ಎಂದು ವಿಶ್ವಾಸದಿಂದ ಹೇಳುತ್ತಿದ್ದರು. ಆದರೆ, ನಾನು 29 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಇದಕ್ಕೆ ಕಾರಣ ಏನು ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.
ಎಲ್ಲ ರೀತಿಯಿಂದಲೂ ವ್ಯವಸ್ಥಿತವಾಗಿ ಚುನಾವಣೆ ಮಾಡಿದ್ದೇವೆ, ಶಾಸಕರು, ಮಂತ್ರಿಗಳು ಎಲ್ಲ ಸಮುದಾಯಗಳ ಮುಖಂಡರು ಇದ್ದರು. ಆದರೆ ಕ್ಷೇತ್ರದ ಜನರ ನಾಡಿಮಿಡಿತ ಅರಿಯುವಲ್ಲಿ ನಾವುಗಳು ಎಡವಿದ್ದೇವೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜನರ ವಿಶ್ವಾಸಗಳನ್ನು ಮತ್ತಷ್ಟು ಗಳಿಸಿ, ಕಾಂಗ್ರೆಸ್ ಶಕ್ತಿಯನ್ನು ವೃದ್ಧಿಸಬೇಕಾಗಿದೆ ಎಂದರು.ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ:
ಸಂಸದೆಯಾಗಿ ಪ್ರಥಮ ಲೋಕಸಭಾ ಅಧಿವೇಶನದಲ್ಲಿಯೇ ವೈದ್ಯಕೀಯ ಕ್ಷೇತ್ರ, ರಾಷ್ಟ್ರೀಯ ಹೆದ್ದಾರಿಗಳ ಮೇಲ್ದರ್ಜೆಗೆರಿಸುವ ವಿಚಾರ, ದಾವಣಗೆರೆ ಜಿಲ್ಲೆಯಲ್ಲಿ ಐಟಿ, ಬಿಟಿ ಕಂಪನಿಗಳ ಸ್ಥಾಪನೆ ವಿಚಾರಗಳನ್ನು ಚರ್ಚೆ ನಡೆಸಿದ್ದೇನೆ. ಇನ್ನು ಮುಂದೆ ಪ್ರತಿ 3ರಿಂದ 6 ತಿಂಗಳಿಗೊಮ್ಮೆ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ ಆ ಕ್ಷೇತ್ರದ ಪ್ರತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಭೆಯನ್ನು ನಡೆಸಿ ಜನರ ಕುಂದು-ಕೊರತೆಗಳನ್ನು ಆಲಿಸಲಾಗುವುದು ಎಂದರು.ಮತಗಳಿಗಾಗಿ ಪ್ರಾಮಾಣಿಕ ಕೆಲಸ:
ಕ್ಷೇತ್ರದ ಶಾಸಕ ಬಸವರಾಜು ವಿ. ಶಿವಗಂಗಾ ಮಾತನಾಡಿ. ಕಾಂಗ್ರೆಸ್ ಸಿದ್ಧಾಂತ ಬಿಟ್ಟು ಕೆಲಸ ಮಾಡಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದಿಂದ ಹಣದ ಆಮಿಷ, ಸಂಬಂಧಿಕರ ಮೂಲಕ ಅನೇಕ ಒತ್ತಡಗಳನ್ನು ತಂದರೂ ನಾನು ಅವರ ಆಮಿಷಗಳಿಗೆ ಬಲಿಯಾಗದೇ ಪಕ್ಷದ ಅಭ್ಯರ್ಥಿ ಆಗಿರುವ ಪ್ರಭಕ್ಕ ಅವರಿಗೆ ಅತಿ ಹೆಚ್ಚು ಮತಗಳನ್ನು ಕೊಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಾನು ಚುನಾವಣೆ ಗೆದ್ದು 15 ತಿಂಗಳು ಕಳೆದರೂ ನನ್ನ ಗೆಲುವನ್ನು ವಿರೋಧಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ನನ್ನ ಬಳಿ ಬಂದವರಿಗೆ ಕೆಲಸಗಳಾಗಿಲ್ಲ ಎಂದು ಹೇಳಿದರೆ ನಾನು ಇವತ್ತೆ ರಾಜೀನಾಮೆ ಕೊಡಲು ಸಿದ್ಧ ಎಂದರು.ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ಎಲ್ಲರ ಪರಿಶ್ರಮದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಗಳಿಸಿದ್ದಾರೆ. ಕ್ಷೇತ್ರದ ಶಾಸಕರು ಸಹ ಕಾಂಗ್ರೆಸ್ ಪಕ್ಷದವರೇ ಇದ್ದಾರೆ. ಈ ಇಬ್ಬರು ಜೋಡೆತ್ತಿನ ರೀತಿಯಲ್ಲಿ ಕೆಲಸ ಮಾಡಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು. ಜಿ.ಪಂ, ತಾ.ಪಂ. ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಒಗ್ಗಟ್ಟಿನ ಹೋರಾಟ ಮಾಡೋಣ ಎಂದರು.
ಕೆಪಿಸಿಸಿ ಕಾರ್ಯದರ್ಶಿ ವಡ್ನಾಳ್ ಜಗದೀಶ್, ರಾಜ್ಯ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಅಮಾನುಲ್ಲಾ, ಕೆಪಿಸಿಸಿ ವಕ್ತಾರ ಹೊದಿಗೆರೆ ರಮೇಶ್, ಡಿಸಿಸಿ ಉಪಾಧ್ಯಕ್ಷರಾದ ಜಿ.ಆರ್. ಲೋಕೇಶ್ವರಪ್ಪ, ವೀರೇಶ್ ನಾಯ್ಕ್, ಎಂ.ಸಿದ್ದಪ್ಪ, ಸಿ.ನಾಗರಾಜ್, ಚನ್ನಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್, ಸಂತೆಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಜಬೀವುಲ್ಲಾ, ಕಾಂಗ್ರೇಸ್ ಮುಖಂಡರಾದ ಕಾಫಿಪುಡಿ ಶಿವಾಜಿ ರಾವ್, ಕೆ.ಆರ್. ಮಂಜುನಾಥ್, ಜಿತೇಂದ್ರ ಕಂಚುಗಾರ್, ದೇವರಹಳ್ಳಿ ನೀಲಪ್ಪ, ಜಿ.ನಿಂಗಪ್ಪ, ಮರವಂಜಿ ತಿಪ್ಪಣ್ಣ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.- - - ಬಾಕ್ಸ್
* ಶಾಸಕರೇ, ಸ್ವತಂತ್ರವಾಗಿ ಆಡಳಿತ ನಡೆಸಿ: ಉಪಾಧ್ಯಕ್ಷಶಾಸಕರು ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಪ್ರತಿ ಮನೆ ಮನೆಗೂ ನನ್ನ ದೂರವಾಣಿ ಸಂಖ್ಯೆ ನೀಡುತ್ತೇನೆ, ನಿಮ್ಮ ಸಮಸ್ಯೆಗಳ ಬಗ್ಗೆ ನೇರವಾಗಿ ನನಗೆ ಕರೆ ಮಾಡಿ ಎಂದು ಹೇಳಿದ್ದರು. ಚುನಾವಣೆಯಲ್ಲಿ ಗೆದ್ದು ಶಾಸಕರಾದ ನಂತರ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೀರೇಶ್ ನಾಯ್ಕ್ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರು ಒಂದು ತಂಡವನ್ನು ಕಟ್ಟಿಕೊಂಡಿದ್ದು, ಅವರು ಹೇಳಿದಂತೆ ಅಧಿಕಾರ ನಡೆಸುತ್ತಿದ್ದೀರಿ. ನಿಮ್ಮ ಆಡಳಿತವನ್ನು ಸ್ವತಂತ್ರವಾಗಿ ನಡೆಸಿ. ನಿಮ್ಮ ಪಟಾಲಂಗಳನ್ನು ದೂರ ಇಟ್ಟಾಗ ಮಾತ್ರ ನಿಮಗೆ ಒಳ್ಳೆಯ ಹೆಸರು ಬರಲಿದೆ ಎಂದು ಕಟುವಾಗಿ ಹೇಳಿದರು.ಶಾಸಕರು ತಮ್ಮ ಆಡಳಿತ ವೈಖರಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನ ಸಮಸ್ಯೆಗಳನ್ನು ಅಲಿಸಿ, ಪರಿಹರಿಸುವ ಕೆಲಸ ಮಾಡಬೇಕಾಗಿದೆ. ನಿಮ್ಮನ್ನು ಬೇರೆದಾರಿಗೆ ಎಳೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿಯಾಗಿದ್ದು, ಅವರಿಗೆ ಸಕಾಲಕ್ಕೆ ಸ್ಪಂದಿಸಿ ಕೆಲಸ ಮಾಡಿರಿ ಎಂದು ಆಗ್ರಹಿಸಿದರು.
- - - -3ಕೆಸಿಎನ್‌ಜಿ1:ಅಭಿನಂದನೆ ಸಮಾರಂಭವನ್ನು ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಶಾಸಕ ಬಸವರಾಜ ವಿ. ಶಿವಗಂಗಾ, ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಮುಖಂಡರು ಇದ್ದಾರೆ.