ರಸ್ತೆಯಲ್ಲಿ ತ್ರಿಬಲ್‌ ರೈಡಿಂಗ್ ಮಾಡಿದ್ದಲ್ಲದೆ ಮನಬಂದಂತೆ ಸ್ಕೂಟರ್ ಓಡಿಸಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಮೂವರು ದುಂಡಾವರ್ತನೆ ಮಾಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ರಸ್ತೆಯಲ್ಲಿ ತ್ರಿಬಲ್‌ ರೈಡಿಂಗ್ ಮಾಡಿದ್ದಲ್ಲದೆ ಮನಬಂದಂತೆ ಸ್ಕೂಟರ್ ಓಡಿಸಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಮೂವರು ದುಂಡಾವರ್ತನೆ ಮಾಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಸ್ಕೂಟರ್ ನೊಂದಣಿ ಸಂಖ್ಯೆ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಆದರೆ ಈ ಘಟನೆ ಬಗ್ಗೆ ಯಾರೊಬ್ಬರು ಲಿಖಿತ ದೂರು ನೀಡಿಲ್ಲ. ‘ಎಕ್ಸ್‌’ ತಾಣದಲ್ಲಿ ಸಲ್ಲಿಕೆಯಾದ ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ತ್ರಿಬಲ್ ರೈಡಿಂಗ್‌ನಲ್ಲಿ ಬಂದ ಮೂವರು, ಮುಂದೆ ಹೋಗುತ್ತಿದ್ದ ಕಾರನ್ನು ಹಿಂದಿಕ್ಕುವ ಭರದಲ್ಲಿ ಗುದ್ದಿಸಿದ್ದಾರೆ. ಆಗ ಆ ಕಾರಿನ ಬಂಪರ್‌ ಕಿತ್ತು ಬಂದಿದೆ. ಹೀಗಿದ್ದರೂ ಸ್ಕೂಟರ್‌ ನಿಲ್ಲಿಸದೆ ಅತಿವೇಗವಾಗಿ ಮುಂದುವರೆದ ಆರೋಪಿಗಳು, ಅಲ್ಲಿಂದ ಸ್ವಲ್ಪ ದೂರದಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಸಿದ್ದಾರೆ. ಆಗಲೂ ಸ್ಕೂಟರ್ ನಿಲ್ಲಿಸದೆ ಚಾಲಕ ಕಾರಿನಿಂದಿಳಿಯುತ್ತಿದ್ದಂತೆ ಪರಾರಿಯಾಗಿದ್ದಾರೆ. ಈ ಕೃತ್ಯವು ಹಿಂದಿನ ಕಾರಿನ ಡ್ಯಾಶ್ ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.