ಸಾರಾಂಶ
ದೇಶಭಕ್ತಿ ಜಾಗೃತಿಯ ನಿಟ್ಟಿನಲ್ಲಿ ಬಿಜೆಪಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ವತಿಯಿಂದ ಸೋಮವಾರ ಇಲ್ಲಿನ ಘಂಟಿಕೇರಿಯ ಸರಾಫಗಟ್ಟಿ ವೃತ್ತದಿಂದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಕೃತ್ಯಗಳು, ಘೋಷಣೆಗಳು ಹಾಗೂ ದೇಶ ವಿಭಜನೆಯ ಹೇಳಿಕೆಗಳನ್ನು ಖಂಡಿಸಿ, ದೇಶಭಕ್ತಿ ಜಾಗೃತಿಯ ನಿಟ್ಟಿನಲ್ಲಿ ಬಿಜೆಪಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ವತಿಯಿಂದ ಸೋಮವಾರ ಇಲ್ಲಿನ ಘಂಟಿಕೇರಿಯ ಸರಾಫಗಟ್ಟಿ ವೃತ್ತದಿಂದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಯಿತು.ಸರಾಫಗಟ್ಟಿಯಿಂದ ಆರಂಭವಾದ ತಿರಂಗಾ ಯಾತ್ರೆಯು ನಗರದ ದುರ್ಗದಬೈಲ್, ಬ್ರಾಡ್‌ವೇ, ನ್ಯೂ ಮ್ಯಾದರ ಓಣಿ, ದಾಜಿಬಾನ ಪೇಟೆ ಮೂಲಕ ತುಳಜಾಭವಾನಿ ದೇವಸ್ಥಾನದ ವರೆಗೆ ಸಂಚರಿಸಿ ಸಮಾರೋಪಗೊಂಡಿತು. ಮೆರವಣಿಗೆಯುದ್ದಕ್ಕೂ ರಾಜ್ಯದಲ್ಲಿ ನಡೆಯುತ್ತಿರುವ ದೇಶವಿರೋಧಿ ಕೃತ್ಯಗಳನ್ನು ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಅಲ್ಲದೇ ಜನರಲ್ಲಿ ತಿರಂಗಾ ಯಾತ್ರೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಹು-ಧಾ ಶಹರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ರಾಜ್ಯ ಯುವಮೋರ್ಚಾದ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಾಳಿಕಾಯಿ, ಹು-ಧಾ ಪೂರ್ವ ಕ್ಷೇತ್ರದ ಮಂಡಲದ ಅಧ್ಯಕ್ಷ ಪ್ರಭು ನವಲಗುಂದಮಠ, ಮೋರ್ಚಾದ ಅಧ್ಯಕ್ಷ ಪ್ರೀತಮ್ ಅರಕೇರಿ, ಪ್ರಧಾನ ಕಾರ್ಯದರ್ಶಿ ಜಗದೀಶ ಬುಳ್ಳಣ್ಣವರ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಪಾಲಿಕೆ ಮಾಜಿ ಸದಸ್ಯ ನಾರಾಯಣ ಜರತಾರಘರ, ಪ್ರಮುಖರಾದ ದತ್ತಮೂರ್ತಿ ಕುಲಕರ್ಣಿ, ಚಂದ್ರಶೇಖರ ಗೋಕಾಕ, ಮಂಜು ಕಲಾಲ್, ಪ್ರಿನ್ಸ್ ಶರ್ಮಾ, ಅನ್ನಪ್ಪ ಗೋಕಾಕ, ಅನೂಪ ಬಿಜವಾಡ, ಬಸವರಾಜ ಅಮಿನಬಾವಿ ಸೇರಿದಂತೆ ಹಲವರಿದ್ದರು.