ಕ್ಷುಲ್ಲಕ ಗಲಾಟೆ: ವಾಟ್ಸಪ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಕೋಮು ಗಲಭೆಗೆ ಯತ್ನ!

| Published : Jan 14 2025, 01:01 AM IST

ಕ್ಷುಲ್ಲಕ ಗಲಾಟೆ: ವಾಟ್ಸಪ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಕೋಮು ಗಲಭೆಗೆ ಯತ್ನ!
Share this Article
  • FB
  • TW
  • Linkdin
  • Email

ಸಾರಾಂಶ

ಕೋಡಿ ಬೆಂಗ್ರೆ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು, ಈ ಪ್ರಕರಣವನ್ನು ತಿರುಚಿದ ದುಷ್ಕರ್ಮಿಗಳು ವಾಟ್ಸಪ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಕೋಮು ಗಲಭೆ ಸೃಷ್ಟಿಗೆ ಯತ್ನಿಸಿದ ಘಟನೆ ನಡೆದಿದೆ. ಗಲಾಟೆ ನಡೆಸಿದ ಇತ್ತಂಡಗಳ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದವರ ಪತ್ತೆಗೆ ಇಲಾಖೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಹೊರವಲಯದ ಕೋಡಿ ಬೆಂಗ್ರೆ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು, ಈ ಪ್ರಕರಣವನ್ನು ತಿರುಚಿದ ದುಷ್ಕರ್ಮಿಗಳು ವಾಟ್ಸಪ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಕೋಮು ಗಲಭೆ ಸೃಷ್ಟಿಗೆ ಯತ್ನಿಸಿದ ಘಟನೆ ನಡೆದಿದೆ. ಗಲಾಟೆ ನಡೆಸಿದ ಇತ್ತಂಡಗಳ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದವರ ಪತ್ತೆಗೆ ಇಲಾಖೆ ಮುಂದಾಗಿದೆ.

ಪರಸ್ಪರ ಹಲ್ಲೆ ನಡೆಸಿದ ಕೋಡಿ ಬೆಂಗ್ರೆಯ ಕಾರ್ತಿಕ್, ಸಂತೋಷ್, ಧನುಷ್, ಪ್ರಜ್ವಲ್ ಎಂಬವರನ್ನು ಬಂಧಿಸಲಾಗಿದೆ. ಇತ್ತಂಡಗಳ ಉಳಿದ ಆರೋಪಿಗಳ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಏನಾಗಿತ್ತು?:

ಜನವರಿ 12ರ ಮಧ್ಯರಾತ್ರಿ 12.45ಕ್ಕೆ ಗಣೇಶಕಟ್ಟೆ, ತಣ್ಣೀರುಬಾವಿ ಎಂಬಲ್ಲಿ ವೆಂಕಟೇಶ್​, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಎಂಬವರು ಮದ್ಯ ಸೇವಿಸಿ ಸಿಗರೆಟ್ ಸೇದುತ್ತಿದ್ದರು. ಈ ಸಂದರ್ಭ ಪ್ರೀತಂ, ಸನ್ವೀತ್ ಹಾಗೂ ಇತರರು ಸ್ಥಳಕ್ಕೆ ಬಂದು ಸಿಗರ್ ಲೈಟರ್ ಕೇಳಿದ್ದಾರೆ. ಪ್ರಜ್ವಲ್ ಲೈಟರ್‌ನ್ನು ಪ್ರೀತಂ ಹಾಗೂ ಇತರರಿಗೆ ನೀಡಿದ್ದು, ಅವರು ವಾಪಸ್​ ಕೊಡದೆ ಇದ್ದಾಗ ಲೈಟರ್ ಕೊಡಿ ಎಂದು ಕೇಳಿದ್ದಾರೆ. ಆಗ ‘ನೀವು ಯಾಕೆ ಧಮ್ಕಿ ಹಾಕುತ್ತೀರಿ’ ಎಂದು ಹೇಳಿ, ಅವರಲೊಬ್ಬ ಕಾರ್ತಿಕ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾನೆ. ನಂತರ ನಾಲ್ಕೈದು ಮಂದಿ ಮರದ ಕೋಲುಗಳಿಂದ ಪ್ರಜ್ವಲ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್ ಎಂಬವರಿಗೆ ಹಲ್ಲೆ ನಡೆಸಿದ್ದಾರೆ.

ಪರಸ್ಪರ ಹಲ್ಲೆ ಕುರಿತು ಪಣಂಬೂರು ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರೀತಂ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕಲಂ 118(1), 126(2), 189(2), 189(4), 190, 191(2), 191(3),352) ಅಡಿ ಪ್ರಕರಣ ದಾಖಲಾಗಿದೆ. ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಪ್, ಧನುಷ್, ಪ್ರಜ್ವಲ್ ಎಂಬವರು ಆರೋಪಿಗಳಾಗಿದ್ದು, ಅವರಲ್ಲಿ, ಕಾರ್ತಿಕ್, ಸಂತೋಷ್, ಧನುಷ್, ಪ್ರಜ್ವಲ್ ಎಂಬವರನ್ನು ಬಂಧಿಸಲಾಗಿದೆ.

ಪ್ರಜ್ವಲ್ ಎಂಬಾತ ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕಲಂ 189(2), 189(4) , 191(2), 191(3), 118(1), 190 ಅಡಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಪ್ರೀತಂ ಮತ್ತು ಸನ್ವೀತ್ ಹಾಗೂ ಇತರರು ಆರೋಪಿಗಳಾಗಿದ್ದಾರೆ.

ವಾಟ್ಸ್​​ಆ್ಯಪ್​​ನಲ್ಲಿ ಸುಳ್ಳು ಸುದ್ದಿ!:

ಈ ಘಟನೆ ನಡೆದ ಬಳಿಕ ಕಿಡಿಗೇಡಿಗಳು ವಾಟ್ಸಪ್‌ನಲ್ಲಿ ಸುಳ್ಳು ಸುದ್ದಿ ಹರಡಿದ್ದಾರೆ. ‘‘ಬೆಂಗ್ರೆ ಪರಿಸರದಲ್ಲಿ ಹಿಂದೂಗಳ ಮನೆಯನ್ನು ಗುರಿಯಾಗಿಸಿ ತಲವಾರು ಸಹಿತ ನುಗ್ಗಿದ ಮುಸ್ಲಿಂ ಯುವಕರು, 10 ಮಂದಿ ಇದ್ದ ಮುಸ್ಲಿಂ ಯುವಕರ ತಂಡದಿಂದ ಪರಿಶಿಷ್ಟ ಸಮುದಾಯದ ಯುವಕನ ಮೇಲೆ ದಾಳಿ, ದಾಳಿ ನಡೆಸಿ ಪರಾರಿ ಆಗುವ ಸಂದರ್ಭ ಒಬ್ಬನನ್ನು ಸೆರೆ ಹಿಡಿದ ಹಿಂದೂಗಳು, ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿರುವ ಹಿಂದೂಗಳು’’ ಎಂಬುದಾಗಿ ಸುಳ್ಳು ಸುದ್ದಿಯನ್ನು ಹರಿಯಬಿಡಲಾಗಿತ್ತು. ಇದರ ಹಿಂದೆ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ಅಡಗಿರುವ ಕುರಿತು ತನಿಖೆ ನಡೆಯುತ್ತಿದೆ. ಜಾಲತಾಣದಲ್ಲಿ ಸುಳ್ಳು ವದಂತಿ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.

ಘಟನೆಗೆ ಸಂಬಂಧಿಸಿದಂತೆ ಡಿಸಿಪಿ ಸಿದ್ದಾರ್ಥ್ ಘೋಯಲ್, ಮಂಗಳೂರು ನಗರ ಹಾಗೂ ಸಿಸಿಬಿ ಎಸಿಪಿ, ಉತ್ತರ ಉಪ ವಿಭಾಗ ಎಸಿಪಿ, ಪಣಂಬೂರು ಪೊಲೀಸ್ ನಿರೀಕ್ಷಕರು ಕೂಡಲೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.