ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಲೋಕಕಲ್ಯಾಣಕ್ಕಾಗಿ ದಣಿವರಿಯದೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಸಿದ್ದಗಂಗೆಯನ್ನು ಅಕ್ಷರಶಃ ಶಿಕ್ಷಣ ಕಾಶಿಯನ್ನಾಗಿಸಿ ವಿಶ್ವ ವಿಖ್ಯಾತಗೊಳಿಸಿದ ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರು ಎಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ಧರಾಗಿದ್ದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 5ನೇ ಪುಣ್ಯ ಸ್ಮರಣೆಯನ್ನು ಸಿದ್ದಗಂಗೆಯಲ್ಲಿಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.ಶ್ರೀಕ್ಷೇತ್ರದಲ್ಲಿ ನಡೆದ ಶ್ರೀಗಳ 5ನೇ ಪುಣ್ಯ ಸಂಸ್ಮರಣೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಎಂ.ಬಿ. ಪಾಟೀಲ್, ಈಶ್ವರ್‌ಖಂಡ್ರೆ, ಸಂಸದ ಜಿ.ಎಸ್. ಬಸವರಾಜು ಸೇರಿದಂತೆ ವಿವಿಧ ಮಠಾಧೀಶರು, ಹರಗುರುಚರಮೂರ್ತಿಗಳು ಹಾಗೂ ಸಹಸ್ರಾರು ಭಕ್ತ ಸಮೂಹ ಸಾಕ್ಷಿಯಾದರು.
ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ನಸುಕಿನಿಂದಲೇ ವಿವಿಧ ಧಾರ್ಮಿಕ ವಿಧಿ, ವಿಧಾನಗಳು, ವೇದ ಘೋಷಗಳು ಮೊಳಗಿದವು.ಶ್ರೀಗಳ ೫ನೇ ಪುಣ್ಯಾರಾಧನೆ ಪ್ರಯುಕ್ತ ಶ್ರೀಗಳು ಐಕ್ಯರಾಗಿರುವ ಶಿವಯೋಗಿ ಮಂದಿರ ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದು, ಶ್ರೀಗಳ ಗದ್ದುಗೆಯನ್ನು ವಿವಿಧ ಪುಷ್ಪ, ಹಣ್ಣು ಹಂಪಲುಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.
ಮುಂಜಾನೆಯೇ ಇಷ್ಟಲಿಂಗ ಪೂಜೆ ನೆರವೇರಿಸಿದ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯ ಪೂಜಾ ವಿಧಾನಗಳು ಮಹಾರುದ್ರಾಭಿಷೇಕ, ರಾಜೋಪಚಾರ, ಬಿಲ್ವಾರ್ಚನೆಯೊಂದಿಗೆ ನೆರವೇರಿದವು. ಹಲವು ಮಠಾಧೀಶರು , ಹರಗುರುಚರಮೂರ್ತಿಗಳು ನಸುಕಿನಲ್ಲೆ ಆರಂಭವಾದ ಶ್ರೀಗಳ ಗದ್ದುಗೆ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.ಮೆರವಣಿಗೆ:
ಶ್ರೀಮಠದ ಆವರಣದಲ್ಲಿ ಸುಮಂಗಲಿಯರು ಹೊತ್ತ 108 ಕಳಸಗಳೊಂದಿಗೆ ರುದ್ರಾಕ್ಷಿ ಮಂಟಪದಲ್ಲಿ ಲಿಂಗೈಕ್ಯ ಶ್ರೀಗಳ ಭಾವಚಿತ್ರ ಮೆರವಣಿಗೆ ವೈಭವಯುತವಾಗಿ ನಡೆಯಿತು.ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆಯು ಶ್ರೀಗಳ ಗದ್ದುಗೆ ಮಂದಿರದಿಂದ ಆರಂಭವಾಗಿ ವಸ್ತುಪ್ರದರ್ಶನದ ಆವರಣದವರೆಗೆ ಸಾಗಿತು. ಮತ್ತೆ ವಸ್ತು ಪ್ರದರ್ಶನದ ಆವರಣದಿಂದ ಗದ್ದುಗೆಯ ಮಂದಿರದವರೆಗೆ ಮೆರವಣಿಗೆಯು ಸಾಗಿ ಅಂತ್ಯಗೊಂಡಿತು. ಈ ಮೆರವಣಿಗೆಯುದ್ದಕ್ಕೂ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹರಗುರುಚರಮೂರ್ತಿಗಳು, ಭಕ್ತಾದಿಗಳು, ಶಾಲಾ ಮಕ್ಕಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಶ್ರೀಗಳ ಭಾವಚಿತ್ರ ಮೆರವಣಿಗೆಯಲ್ಲಿ ಕರಡಿ ವಾದ್ಯ, ನಂದಿಧ್ವಜ ಕುಣಿತ, ಡೋಲು ಕುಣಿತ ಸೇರಿ ವಿವಿಧ ಜಾನಪದ ಕಲಾ ಮೇಳಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.ಗದ್ದುಗೆ ದರ್ಶನ ಪಡೆದ ಸಿಎಂ:
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಎಂ.ಬಿ. ಪಾಟೀಲ್, ಈಶ್ವರ್‌ಖಂಡ್ರೆ ಸೇರಿದಂತೆ ಅನೇಕ ಗಣ್ಯರು ಶ್ರೀಗಳ ಗದ್ದುಗೆ ದರ್ಶನ ಪಡೆದರು.ಶ್ರೀಗಳ ಗದ್ದುಗೆ ದರ್ಶನ ಪಡೆದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರನ್ನು ಪೂರ್ಣಕುಂಭ ಕಳಸ ಮತ್ತು ಮಂಗಳವಾದ್ಯದೊಂದಿಗೆ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಭವ್ಯವಾಗಿ ನಿರ್ಮಿಸಿದ್ದ ಬೃಹತ್ ಗೋಸಲ ಸಿದ್ಧೇಶ್ವರ ವೇದಿಕೆಗೆ ಕರೆದೊಯ್ಯಲಾಯಿತು.
ದಾಸೋಹ ದಿನ ಆಚರಣೆ:ರಾಜ್ಯ ಸರ್ಕಾರ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಘೋಷಿಸಿದ್ದು, ಅದರಂತೆ ಪುಣ್ಯಾರಾಧನೆಯನ್ನು ಅಕ್ಷರಶಃ ಮಹಾದಾಸೋಹ ದಿನವನ್ನಾಗಿ ಆಚರಿಸುತ್ತಿದ್ದು, ಶ್ರೀಮಠದ 6 ಕಡೆಗಳಲ್ಲಿ ಲಕ್ಷಾಂತರ ಭಕ್ತಾದಿಗಳಿಗಾಗಿ ಬಗೆ ಬಗೆಯ ಖಾದ್ಯಗಳೊಂದಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಶ್ರೀಮಠದ ಕೈಗಾರಿಕಾ ವಸ್ತುಪ್ರದರ್ಶನದ ಆವರಣ, ಸಾದರ ಕೊಪ್ಪಲು, ಕೆಂಪಹೊನ್ನಯ್ಯ, ಅತಿಥಿಗೃಹ, ಹೊಸ ಪ್ರಸಾದ ನಿಲಯ, ಹಳೆ ಪ್ರಸಾದ ನಿಲಯ ಸೇರಿದಂತೆ 6 ಕಡೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗಿನ ಉಪಹಾರ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ಚಿತ್ರಾನ್ನ, ಪಾಯಸ, ಸಿಹಿ ಬೂಂದಿ, ಖಾರಬೂಂದಿ, ಅನ್ನಸಾಂಬಾರು ಸೇರಿದಂತೆ ವಿವಿಧ ಖಾದ್ಯಗಳನ್ನು ಭಕ್ತರು ಸವಿದು ಪುನೀತರಾದರು.ಮುಂಜಾನೆಯಿಂದಲೇ ನಾಡಿನ ವಿವಿಧೆಡೆಯಿಂದ ಧಾವಿಸಿದ್ದ ಸಹಸ್ರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರೀಗಳ ಗದ್ದುಗೆ ದರ್ಶನ ಪಡೆದರು.
ಶ್ರೀಮಠದಲ್ಲಿ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿ ವಿ. ಮರಿಯಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.----ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 5ನೇ ಪುಣ್ಯ ಸ್ಮರಣೆಯನ್ನು ಸಿದ್ದಗಂಗೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು.