ಓಮ್ನಿ ಕಾರಿಗೆ ಟ್ರಕ್‌ ಡಿಕ್ಕಿ: ಚಾರ್ಮಾಡಿ ನಿವಾಸಿ ಸಹಿತ ಇಬ್ಬರು ಸ್ಥಳದಲ್ಲೇ ಸಾವು

| Published : Dec 13 2024, 12:49 AM IST

ಓಮ್ನಿ ಕಾರಿಗೆ ಟ್ರಕ್‌ ಡಿಕ್ಕಿ: ಚಾರ್ಮಾಡಿ ನಿವಾಸಿ ಸಹಿತ ಇಬ್ಬರು ಸ್ಥಳದಲ್ಲೇ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ದಾರಿ ಮಧ್ಯೆ ರಸ್ತೆ ಬದಿ ಕಾರಿನಲ್ಲಿದ್ದಾಗ ಟ್ರಕ್ ಡಿಕ್ಕಿ ಹೊಡೆದು, ಮೂಸಾ ಶರೀಫ್, ಲಿಂಗೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿಕ್ಕಿ ಹೊಡೆದು ಟ್ರಕ್ ಪರಾರಿಯಾಗಿದೆ ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಅತ್ಯಾಚಾರಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಕೈಗೊಂಡಿದ್ದ ಐವರು ವಿರಾಮದ ವೇಳೆ ವಿಶ್ರಾಂತಿ ಪಡೆಯುತ್ತಿದ್ದ ಓಮ್ನಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು, ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಗುಜರಾತ್‌ನ ಸೂರತ್‌ನಿಂದ 200 ಕಿ.ಮೀ. ದೂರದಲ್ಲಿ ಬುಧವಾರ ಮಧ್ಯಾಹ್ನ 2 ರ ಸುಮಾರಿಗೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರ ಪೈಕಿ ಒಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯ ನಿವಾಸಿ ಮೂಸಾ ಕುಂಞಿ ಯಾನೆ ಶರೀಫ್ ಎಂದು ಗುರುತಿಸಲಾಗಿದೆ. ಇನ್ನೊಬ್ಬರು ಲಿಂಗೇಗೌಡ ಎಂಬವರೂ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ದಾರಿ ಮಧ್ಯೆ ರಸ್ತೆ ಬದಿ ಕಾರಿನಲ್ಲಿದ್ದಾಗ ಟ್ರಕ್ ಡಿಕ್ಕಿ ಹೊಡೆದು, ಮೂಸಾ ಶರೀಫ್, ಲಿಂಗೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿಕ್ಕಿ ಹೊಡೆದು ಟ್ರಕ್ ಪರಾರಿಯಾಗಿದೆ ಎಂದು ತಿಳಿದುಬಂದಿದೆ.ಕೆ ಆರ್.ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸಾಮಾಜಿಕ ಹೋರಾಟಗಾರ ಮೂಸಾ ಶರೀಫ್ ಅವರು ಕರ್ನಾಟಕ ಸಾರಥಿಗಳ ಟ್ರೇಡ್ ಯೂನಿಯನ್ ಮುಖಂಡರು.ದೇಶದಲ್ಲಿ ಕಳವಳಕಾರಿಯಾಗಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ತ್ವರಿತ ಶಿಕ್ಷೆಗೆ ಆಗ್ರಹಿಸಿ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಐವರು ಮಂಗಳೂರಿನಿಂದ ದೆಹಲಿಗೆ ಅಕ್ಟೋಬರ್ 17 ರಂದು ಕಾಲ್ನಡಿಗೆ ಜಾಥಾ ಆರಂಭಿಸಿದ್ದರು.

ಮೂಸಾ ಶರೀಫ್ ಅವರ ಜೊತೆ ನೌಫಲ್ ಅಬ್ಬಾಸ್, ಬಾಲಕೃಷ್ಣ, ಹಂಝ ಲಿಂಗೇಗೌಡ, ಮತ್ತು ಪ್ರವೀಣ್‌ ಅವರಿದ್ದರು ಎಂದು ತಿಳಿದು ಬಂದಿದೆ. ಮೂಸಾ ಶರೀಫ್ ಅವರು ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳು, ಕುಟುಂಬದವರನ್ನು ಅಗಲಿದ್ದಾರೆ.

ಪಾದಯಾತ್ರೆ ಕುರಿತು ಪ್ರತಿನಿತ್ಯ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಇವರು ಪಾದಯಾತ್ರೆ ಹೊರಟು 55 ನೇ ದಿನ ಈ ಅನಾಹುತ ಸಂಭವಿಸಿದೆ.