ಚನ್ನಮ್ಮ ಕಿತ್ತೂರು : ದೇಶದ ಜನರನ್ನು ಪ್ರೀತಿಸುವುದೇ ನೈಜ ದೇಶ ಪ್ರೇಮ: ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Oct 26 2024, 01:14 AM IST / Updated: Oct 26 2024, 10:40 AM IST

ಚನ್ನಮ್ಮ ಕಿತ್ತೂರು : ದೇಶದ ಜನರನ್ನು ಪ್ರೀತಿಸುವುದೇ ನೈಜ ದೇಶ ಪ್ರೇಮ: ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಅಂದರೆ ದೇಶದ ಜನ. ಯಾವುದೇ ಧರ್ಮದವರಿರಲಿ, ಯಾವುದೇ ಜಾತಿಯವರಿರಲಿ ಎಲ್ಲರನ್ನು ಪ್ರೀತಿಸಬೇಕು ಎಂಬುವುದನ್ನು ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಶೂರ ಸಂಗೊಳ್ಳಿ ರಾಯಣ್ಣ ಕಲಿಸಿಕೊಟ್ಟಿದ್ದಾರೆ. ದೇಶದ ಜನರನ್ನು ಪ್ರೀತಿಸುವುದೇ ನಿಜವಾದ ದೇಶಪ್ರೇಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

 ಚನ್ನಮ್ಮ ಕಿತ್ತೂರು : ದೇಶ ಅಂದರೆ ದೇಶದ ಜನ. ಯಾವುದೇ ಧರ್ಮದವರಿರಲಿ, ಯಾವುದೇ ಜಾತಿಯವರಿರಲಿ ಎಲ್ಲರನ್ನು ಪ್ರೀತಿಸಬೇಕು ಎಂಬುವುದನ್ನು ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಶೂರ ಸಂಗೊಳ್ಳಿ ರಾಯಣ್ಣ ಕಲಿಸಿಕೊಟ್ಟಿದ್ದಾರೆ. ದೇಶದ ಜನರನ್ನು ಪ್ರೀತಿಸುವುದೇ ನಿಜವಾದ ದೇಶಪ್ರೇಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಿತ್ತೂರಿನಲ್ಲಿ ಶುಕ್ರವಾರ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದ ಜನರನ್ನು ಪ್ರೀತಿಸಿ, ದೇಶದ ಜನರ ಸ್ವಾತಂತ್ರ್ಯ ರಕ್ಷಣೆಗಾಗಿ ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರಾಣತ್ಯಾಗ ಮಾಡಿದ್ದಾರೆ. ಇದು ಅತ್ಯುನ್ನತವಾದ ತ್ಯಾಗ. ಇವರ ಆದರ್ಶವನ್ನು ಇವತ್ತಿನ‌ ಪೀಳಿಗೆ ಪಾಲಿಸಬೇಕಿದೆ ಎಂದರು.ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲಾರರು ಎಂಬ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದ ಸಿಎಂ, ಬಲಾಢ್ಯ ಬ್ರಿಟೀಷರ ವಿರುದ್ಧ ಹೋರಾಡಿದ ಚನ್ನಮ್ಮನ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರ ಕಿತ್ತೂರು ಉತ್ಸವವನ್ನು ಸರ್ಕಾರಿ ಉತ್ಸವವಾಗಿ ಆಚರಣೆ ಮಾಡಲು ಆದೇಶಿಸಿತು. ನಾನು ಸಂಗೊಳ್ಳಿ ರಾಯಣ್ಣ-ಕಿತ್ತೂರು ಚನ್ನಮ್ಮನ ಅಭಿಮಾನಿ ಎಂದು ಹೇಳಿದರು. ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮುಂತಾದವರ ಹೋರಾಟ ಹಾಗೂ ಆಶಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಹೋರಾಟಗಾರರಿಂದ ದೇಶದ ಜನರನ್ನು ಪ್ರೀತಿಸುವುದನ್ನು ನಾವು ಕಲಿಯಬೇಕಿದೆ. ಬಸವಣ್ಣನವರೂ ಜಾತಿ, ಧರ್ಮದ ತಾರತಮ್ಯ ಇಲ್ಲದಂತೆ ಮನುಷ್ಯರನ್ನು ಪ್ರೀತಿಸಿ ಎಂದು ಸಾರಿದವರು. ಹೀಗಾಗಿ ನಮ್ಮ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿತು. ಜಾತಿ, ಧರ್ಮದ ಅಸಮಾನತೆ ಸಮಾಜದಲ್ಲಿ ಇರುವಷ್ಟೂ ದಿನ ಸಾಮಾಜಿಕ ನ್ಯಾಯ ಬರಲು ಸಾಧ್ಯವಿಲ್ಲ. ಇದು ಸಾಧ್ಯವಾಗಬೇಕಾದರೆ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಎಲ್ಲಾ ಜಾತಿ, ಧರ್ಮ, ಎಲ್ಲ ವರ್ಗದವರಿಗೂ ಸಿಗಬೇಕು ಎಂದು ಪ್ರತಿಪಾದಿಸಿದರು.

ಹುಟ್ಟುವಾಗ ವಿಶ್ವಮಾನವ ಬೆಳಿತಾ‌ ಬೆಳಿತಾ ಅಲ್ಪಮಾನವರಾಗುತ್ತಾರೆ. ನಾವು ಬೆಳಿತಾ ಬೆಳಿತಾ ವಿಶ್ವಮಾನವರಾಗಬೇಕಿದೆ ಎಂದು ಕುವೆಂಪು ಹೇಳಿದ್ದಾರೆ. ಅದೇ ರೀತಿ ನಾವು ವಿಶ್ವಮಾನವರಾಗಬೇಕಿದೆ ಎಂದ ಅವರು, ಅನೇಕರ ತ್ಯಾಗ ಬಲಿದಾನಗಳಿಂದ ನಾವು ಗಳಿಸಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಸಮ ಸಮಾಜ ನಿರ್ಮಿಸಬೇಕಿದೆ. ಬಸವಣ್ಣನವರ ಆಶಯದಂತೆ ಜಾತಿ, ಮೌಢ್ಯ, ಕಂದಾಚಾರಗಳನ್ನು ತಿರಸ್ಕರಿಸಬೇಕಿದೆ ಎಂದು ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಮಹಾಪುರುಷರ ಸ್ಮರಣೆ ಮಾಡುವ ಕೆಲಸವನ್ನು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕಿತ್ತೂರು ಚನ್ಮಮ್ಮನವರ ವಿಜಯೋತ್ಸವವನ್ನು ಅದ್ಧೂರಿ ಮತ್ತು ಅರ್ಥಪೂರ್ಣ ಆಚರಣೆಗೆ ಕ್ರಮ ಕೈಗೊಂಡಿದ್ದಾರೆ. ಚನ್ನಮ್ಮಳ ಸ್ವಾಭಿಮಾನಿ ಹೋರಾಟದ ಕುರಿತು ಯುವ ಸಮುದಾಯದ‌ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಕಿತ್ತೂರು ವಸತಿ ಶಾಲೆಗೆ‌ ಇಲಾಖೆಯ ವತಿಯಿಂದ ₹ 22 ಕೋಟಿ ಅನುದಾನ ನೀಡಲಾಗಿದೆ. ಯಾವುದೇ ಜಾತಿಭೇದವಿಲ್ಲದೆ ಸರ್ವರಿಗೂ ಪಂಚಗ್ಯಾರಂಟಿಯ ಸೌಲಭ್ಯವನ್ನು ತಲುಪಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದು ಹೇಳಿದರು.

ಶಾಸಕರಾದ ಬಾಬಾಸಾಹೇಬ ಪಾಟೀಲ ಮಾತನಾಡಿ, ಸೂರ್ಯ ಮುಳುಗದ ಸಾಮ್ರಾಜ್ಯ ಎಂದೇ ಹೆಸರಾಗಿದ್ದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸ್ವಾಭಿಮಾನದ ಕಹಳೆ‌ ಮೊಳಗಿಸಿದ ವೀರರಾಣಿ ಚನ್ನಮ್ಮ ದೇಶಕ್ಕಾಗಿ ಮಾಡಿದ ಹೋರಾಟ ಐತಿಹಾಸಿಕ ಮಹತ್ವ ಹೊಂದಿದೆ ಎಂದು ಬಣ್ಣಿಸಿದರು.

ಚನ್ನಮ್ಮನ ಕೋಟೆಯ ಅಭಿವೃದ್ಧಿಗೆ ಪ್ರಾಧಿಕಾರದ ವತಿಯಿಂದ ಬಹುಹಂತದ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಪ್ರಾಧಿಕಾರಕ್ಕೆ ಪ್ರಸಕ್ತ ವರ್ಷ ಮೊದಲ ಹಂತದಲ್ಲಿ ₹50 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಥೀಮ್‌ ಪಾರ್ಕ್‌ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನೀರಾವರಿ, ಕೆರೆ ತುಂಬುವ ಯೋಜನೆಗಳು ಚಾಲ್ತಿಯಲ್ಲಿದ್ದು, ಶೀಘ್ರ ಪೂರ್ಣಗೊಳ್ಳಲಿದ್ದು, ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದಾರೆ. ಲೋಕೋಪಯೋಗಿ ಇಲಾಖೆ ವತಿಯಿಂದ ಅನೇಕ ಕಾಮಗಾರಿ ಹಮ್ಮಿಕೊಳ್ಳಲಾಗುವುದು ಎಂದ ಅವರು, ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಮಲಪ್ರಭಾ ಸಹಕಾರಿ ಸಕ್ಕರೆ‌ ಕಾರ್ಖಾನೆಯ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಸ್ವಾತಂತ್ರ್ಯ‌ ಹೋರಾಟದಲ್ಲಿ ಜನಸಾಮಾನ್ಯರು ಪಾಲ್ಗೊಂಡಿದ್ದಾರೆ. ಆದರೆ ಸ್ವಾತಂತ್ರ್ಯ‌ ಹೋರಾಟದ ಚರಿತ್ರೆ ಬರೆಯುವಾಗ ಇಂತಹ ಸಾಮಾನ್ಯ‌ ಜನರು ಮತ್ತು ಮಹಿಳೆಯರನ್ನು ಪರಿಗಣಿಸದಿರುವುದು ವಿಷಾದಕರ. 2022ರಲ್ಲಿ ಕೇಂದ್ರ ಸರ್ಕಾರ ಬೆಳಕಿಗೆ ಬಾರದ ಸ್ವಾತಂತ್ರ್ಯ ಹೋರಾಟಗಾರರ ಕುರಿತು 22 ಭಾಷೆಗಳಲ್ಲಿ ಕೃತಿ ರಚಿಸುವ ನಿರ್ಧಾರ ಕೈಗೊಂಡಿತು. ಆದರೆ, ಸಂಶೋಧನೆ ಕೈಗೊಂಡು ಕೃತಿ‌ ರಚಿಸುವ ಜವಾಬ್ದಾರಿಯನ್ನು ಯುವಕರಿಗೆ ನೀಡಿದ್ದರಿಂದ ಉತ್ಕೃಷ್ಟ ಕೃತಿ ರಚನೆ ಸಾಧ್ಯವಾಗಲಿಲ್ಲ. ಮೂರ್ನಾಲ್ಕು ಸಾವಿರ ವರ್ಷಗಳ ಕೃತಿಗಳಾದ ರಾಮಾಯಣ, ಮಹಾಭಾರತ‌ ತಿಳಿದುಕೊಂಡಿರುವ ದೇಶದ ಜನರಿಗೆ 200 ವರ್ಷಗಳ ಕಿತ್ತೂರು ಚನ್ನಮ್ಮಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದು ದುರದೃಷ್ಟಕರ ಎಂದು ಖೇದ ವ್ಯಕ್ತಪಡಿಸಿದರು.

ದತ್ತಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು ಮೊದಲ ಅನುಷ್ಠಾನಗೊಂಡಿದ್ದು ಕಿತ್ತೂರಿನಲ್ಲಿ. ಇಂತಹ ಅಮಾನುಷ ಹಾಗೂ ಅನಾಗರಿಕ‌ ಕಾನೂನು‌ ಕಿತ್ತೂರಿನಲ್ಲಿ ಅನುಷ್ಠಾನಗೊಂಡಿರುವುದರಿಂದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಿಶೇಷ ಸ್ಥಾನವಿದೆ. ಬ್ರಿಟೀಷರ ಮೇಲೆ ಖಡ್ಗ ಎತ್ತಿದ ಮೊದಲ ಮಹಿಳೆ ಕೂಡ ಕಿತ್ತೂರು ಚನ್ನಮ್ಮ ಎಂಬುದು ಅಭಿಮಾನದ ಸಂಗತಿ ಎಂದ ಅವರು, ರಾಜ್ಯವಾಳಿದವರು ಜನರ ಬಳಿ‌ ಹೋದಾಗ ಲಾವಣಿಗಳು ಹುಟ್ಟುತ್ತವೆ. ಅದೇ ರೀತಿ‌ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಜನರ‌ ಬಳಿ‌ ಹೋಗುವುದರಿಂದ ಅವರ ಬಗ್ಗೆ ಜನಮಾನಸದಲ್ಲಿ ಅಭಿಪ್ರಾಯಗಳು ಸೃಷ್ಟಿವಾಗುತ್ತಿವೆ ಎಂದು‌ ಅಭಿಪ್ರಾಯಪಟ್ಟರು.

ಕಿತ್ತೂರು ಉತ್ಸವ ನಾಡಹಬ್ಬವೆಂದು ಘೋಷಿಸಿ:

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಅಪಶಕುನಗಳ ಕುತ್ಸಿತ ಕಟ್ಟುಕಥೆಗಳ ಮಧ್ಯೆಯೂ ಚನ್ನಮ್ಮನ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುವ ಮೂಲಕ ಚನ್ನಮ್ಮನವರಲ್ಲಿದ್ದ ಧೈರ್ಯ, ಸಾಹಸ ಪ್ರದರ್ಶಿಸಿದ್ದಾರೆ. ಕಿತ್ತೂರು ಉತ್ಸವವನ್ನು ದಸರಾ ಮಾದರಿಯಲ್ಲಿ ಕಿತ್ತೂರು ಕರ್ನಾಟಕದ ನಾಡಹಬ್ಬವಾಗಿ ಸರ್ಕಾರ ಘೋಷಣೆ ಮಾಡಬೇಕು. ಸಂಗೊಳ್ಳಿ ರಾಯಣ್ಣನ ಸಂಗೊಳ್ಳಿ ಮತ್ತು ನಂದಗಡದ ಮಾದರಿಯಲ್ಲಿ ಚನ್ನಮ್ಮನ ಕಿತ್ತೂರು ಅಭಿವೃದ್ಧಿಪಡಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಬೇಕು. ಝಾನ್ಸಿ ರಾಣಿ ಕ್ಷೇತ್ರದ ಮಾದರಿ ಚನ್ನಮ್ಮನ ಸಮಾಧಿ ಸ್ಥಳವಿರುವ ಬೈಲಹೊಂಗಲನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕ್ರಮ ವಹಿಸಬೇಕು. ಚನ್ನಮ್ಮ ಮತ್ತು ರಾಯಣ್ಣನ ಖಡ್ಗವನ್ನು ಭಾರತಕ್ಕೆ ತರಲು ಸರ್ಕಾರ ಪ್ರಯತ್ನಿಸಬೇಕು ಒತ್ತಾಯಿಸಿದರು.

ಚನ್ನಮ್ಮನ ಕಿತ್ತೂರಿನ ರಾಜಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಿಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಕಾದರವಳ್ಳಿ ಸೀಮಿಮಠದ ಡಾ.ಫಾಲಾಕ್ಷ ಶಿವಯೋಗೀಶ್ವರರು ಸಾನ್ನಿಧ್ಯ ವಹಿಸಿದ್ದರು.

ಶಾಸಕರಾದ ಅಶೋಕ‌ ಪಟ್ಟಣ, ಮಹಾಂತೇಶ ಕೌಜಲಗಿ, ವಿಶ್ವಾಸ ವೈದ್ಯ, ಆಸಿಫ್(ರಾಜು) ಸೇಠ್, ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ಪಿ ಡಾ.ಭೀಮಾಶಂಕರ‌ ಗುಳೇದ ಮತ್ತಿತರರು ಉಪಸ್ಥಿತರಿದ್ದರು.