ಸ್ಮಶಾನ ಜಾಗದ ಹೋರಾಟ ನಿಲ್ಲದು: ಪಿ.ಆರ್.ಭರತ್ ಸ್ಪಷ್ಟನೆ

| Published : Oct 26 2024, 01:13 AM IST

ಸಾರಾಂಶ

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕಾಗಿ ಒತ್ತಾಯಿಸಿ ಭಾರತ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ನಡೆಸುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ನೆಲ್ಯಹುದಿಕೇರಿ ಶಾಖಾ ಕಾರ್ಯದರ್ಶಿ ಪಿ.ಆರ್.ಭರತ್ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕಾಗಿ ಒತ್ತಾಯಿಸಿ ಭಾರತ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ನಡೆಸುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ನೆಲ್ಯಹುದಿಕೇರಿ ಶಾಖಾ ಕಾರ್ಯದರ್ಶಿ ಪಿ.ಆರ್.ಭರತ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 12 ಸಾವಿರ ಜನಸಂಖ್ಯೆ ಹೊಂದಿರುವ ನೆಲ್ಯಹುದಿಕೇರಿಗೆ ಸಾರ್ವಜನಿಕ ಸ್ಮಶಾನದ ಅಗತ್ಯವಿದ್ದು, ಸಿಪಿಎಂ ಪಕ್ಷ ಜನಪರವಾಗಿ ಹೋರಾಟ ನಡೆಸುತ್ತಿದೆ ಎಂದರು.

ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಕಾರ್ಯದಲ್ಲಿ ತೊಡಗಿರುವ ಸಿಪಿಎಂ ಯಾವುದೇ ದೇವಾಲಯ ಅಥವಾ ಇನ್ನಿತರ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಜನರನ್ನು ಕೆರಳಿಸುವ ಕೆಲಸ ಮಾಡುತ್ತಿಲ್ಲ. ಭೂಮಿಯಿಲ್ಲದ ಬಡವರಿಗೆ ಭೂಮಿ, ಸೂರು, ನಿರುದ್ಯೋಗಿಗಳಿಗೆ ಉದ್ಯೋಗ ಸೇರಿದಂತೆ ನ್ಯಾಯ ಸಮ್ಮತವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹೋರಾಟ ನಡೆಸುತ್ತಿದೆ. ಸ್ಮಶಾನದ ಹೋರಾಟದ ದಿಕ್ಕು ತಪ್ಪಿಸಲು ಕೆಲವರು ದೇವಾಲಯದ ಹೆಸರನ್ನು ಹೇಳಿ ಸಿಪಿಎಂ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ನಮ್ಮ ಹೋರಾಟಕ್ಕೂ, ದೇವಾಲಯಕ್ಕೂ ಯಾವುದೇ ಸಂಬಂಧವಿಲ್ಲ. ದೇವಾಲಯದ ಆಸ್ತಿಯ ಬಗ್ಗೆ ನಾವು ಎಲ್ಲಿಯೂ ಮಾತನಾಡಿಲ್ಲ, ಮಾತನಾಡುವುದೂ ಇಲ್ಲ. ಅದು ಆಡಳಿತ ಮಂಡಳಿಗೆ ಮತ್ತು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ರಮೇಶ್ ಮಾತನಾಡಿ ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನವಿಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನದಿ ದಡದಲ್ಲಿ ಅರ್ಧ ಎಕರೆಯಷ್ಟು ಜಾಗದಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದ್ದು, ಕಳೆದ ಹಲವು ವರ್ಷಗಳಿಂದ ಒಂದೇ ಜಾಗವನ್ನು ಅವಲಂಬಿಸಲಾಗಿದೆ. ಇಕ್ಕಟ್ಟಿನಲ್ಲಿ ಶವಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮಧ್ಯಪ್ರವೇಶ ಮಾಡಿ ಸ್ಮಶಾನದ ಜಾಗದ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದರು.

ಪಕ್ಷದ ಸದಸ್ಯರಾದ ಟಿ.ಟಿ.ಉದಯಕುಮಾರ್, ಕೆ.ಕೆ.ಚಂದ್ರನ್ ಹಾಗೂ ಕೆ.ಶಿವರಾಮನ್ ಸುದ್ದಿಗೋಷ್ಠಿಯಲ್ಲಿದ್ದರು.