ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಯುದ್ಧ ಬೇಡ ಶಾಂತಿ ಬೇಕು ಎಂದು ಹಪಹಪಿಸುತ್ತಿರುವ ರಾಷ್ಟ್ರಗಳಿಗೆ ಶಾಪವಾಗಿರುವ ಟ್ರಂಪ್ ಭಯೋತ್ಪಾದಕನಂತೆ ಕಾಡುತ್ತಿದ್ದಾನೆ ಎಂದು ಚಿಕ್ಕಮಗಳೂರು ಬಸವ ತತ್ವಪೀಠದ ಜಯ ಬಸವಾನಂದ ಸ್ವಾಮೀಜಿ ಹೇಳಿದರು.ಸಮೀಪದ ಮಂದಗೆರೆಯ ಹೊನ್ನೇನಹಳ್ಳಿ ಕ್ರಾಸ್ ಬಳಿ ಭಾನುವಾರ ರಾಜ್ಯರೈತ ಸಂಘ ಹಸಿರು ಸೇನೆ, ಹಜರತ್‌ಖ್ವಾಜಾ ಷಾ ಮೆಹಬೂಬ್ ಅಲ್ಲಾ ಷಾ ಬೆಸ್ತಿ ಉಲ್ ಖಾದರಿಅಲ್ ಹುಸೇನಿ ಸಹಯೋಗದಲ್ಲಿ ಜರುಗಿದ ಸರ್ವಧರ್ಮಸಭೆ ಹಾಗೂ ಗೌಸ್ ಆಜಾಮ್ ದೀಪೋತ್ಸವದಲ್ಲಿ ಆಶೀರ್ವಚನ ನುಡಿದರು.
ಜಗತ್ತಿನ ಎಲ್ಲ ಧರ್ಮಗಳು ಬಯಸುವುದು ಶಾಂತಿ. ದುಡ್ಡಿಗಾಗಿ ಅನ್ಯರಾಷ್ಟ್ರವಾದರೆ, ಶಾಂತಿ, ನೆಮ್ಮದಿಗಾಗಿ ಭಾರತವಾಗಿದೆ. ಅನುಕೂಲಕ್ಕಾಗಿ ಧರ್ಮ, ಜಾತಿ ಸಂಪ್ರದಾಯಗಳಿವೆ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳ ಭ್ರಷ್ಟಾಚಾರದಿಂದ ಎಲ್ಲವೂ ಕಲುಷಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ದೇಶವನ್ನು ಸಾಲಗಾರರಾಗಿ ಮಾಡುತ್ತಿರುವ ರಾಜಕಾರಣಿಗಳಿಂದ ಸರ್ವಧರ್ಮಗಳು ದ್ವೇಷ, ದ್ವಂದ್ವದ ವಸ್ತುವಾಗಿ ದುರ್ಬಳಕೆಯಾಗುತ್ತಿದೆ. ದೇಶದ ಶಾಂತಿಭಂಗವಾಗಿಸಲು ಹೊರರಾಷ್ಟ್ರಗಳು ಮಾದಕ ವಸ್ತುಗಳನ್ನು ದೇಶಕ್ಕೆ ನುಸುಳಿಸುತ್ತಿದೆ. ಹೀಗಾಗಿ ಯುವಶಕ್ತಿ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಯುದ್ಧದಿಂದ ಭಯೋತ್ಪಾದನೆ ಶಮನವಾಗದೆ ದಿವಾಳಿ ಮಾಡಲಿವೆ. ನಮ್ಮ ದೇಶದ ಅನ್ನ, ನೀರು, ಗಾಳಿ, ಸಮಾಜ ಕಲುಷಿತವಾಗಬಾರದು. ಬಡ್ಡಿ ವ್ಯವಹಾರ ಬಿಟ್ಟು ಗಳಿಸಿದ ಹಣದಾನ, ಧರ್ಮಕ್ಕೆ ಮೀಸಲಿಡಿ. ಸರ್ವ ಧರ್ಮ ಪ್ರೀತಿಸುವ, ಆಚಾರ ವಿಚಾರಗಳನ್ನು ಪಾಲಿಸಲು ಕಾಯಕ ನಿಷ್ಠೆ ಮರೆಯದಿರಿ ಎಂದು ನುಡಿದರು.
ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, 1980ರಲ್ಲಿ ರೈತ ಚಳವಳಿಗೆ ಧುಮುಕಿದೆ. ಮಂಡ್ಯ ಜಿಲ್ಲೆಯಲ್ಲಿ ರೈತ ಚಳವಳಿ ಆರಂಭಿಸಿದವರು ನಾವು. ಎಲ್ಲ ಪಕ್ಷಗಳು ರೈತರ, ಜನಪರ ಕಲ್ಯಾಣ ಮರೆತು ಲೂಟಿಗೆ ನಿಂತಿವೆ. ನ್ಯಾಯಕ್ಕೆ ಪರಿತಪಿಸುವ ಸ್ಥಿತಿ ಬಂದಿದೆ ಎಂದು ಬೇಸರಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಎಂ.ಎಸ್ ಸಂಸ್ಥೆಯ ಧರ್ಮಗುರು ಶ್ರೀನಿವಾಸಮೂರ್ತಿ, ಬೆಸ್ತಿ ಉಲ್ ಖಾದರಿ ಅಲ್ ಹುಸೇನಿ, ಆನೆಕೆರೆ ರವಿ, ದಬ್ಬೇಘಟ್ಟ ರಾಜಣ್ಣ, ಪಾಂಡು, ರಮೇಶ್, ಕೆ.ಆರ್. ನೀಲಕಂಠ, ಗಂಗಾಧರ್, ಅಕ್ಮಲ್ ಪಾಷ, ಜಯರಾಂ, ಕಾಂತರಾಜು, ದಾಸೇಗೌಡ, ಕಮಲಮ್ಮ, ಕಾಳಮ್ಮ, ಪವಿತ್ರ ಭಾಗವಹಿಸಿದ್ದರು.