ಸಾರಾಂಶ
ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿರುವ ಮೆಲ್ವಿನ್ ಡಿಸೋಜಾ ಸ್ಪಷ್ಟ ನುಡಿ । ಒಳ ನುಗ್ಗಿರುವ ಹಮಾಸ್ ಉಗ್ರರ ಸದೆ ಬಡಿಯಲು ಸೇನೆ ತಂತ್ರ
ನಾಗರಾಜ ಎಸ್.ಬಡದಾಳ್ಕನ್ನಡಪ್ರಭ ವಾರ್ತೆ ದಾವಣಗೆರೆ
ಇಸ್ರೇಲ್‌ನಲ್ಲಿ 15 ಸಾವಿರಕ್ಕೂ ಅಧಿಕ ಭಾರತೀಯರು, ಇದರಲ್ಲಿ 5 ಸಾವಿರಕ್ಕೂ ಹೆಚ್ಚು ಕನ್ನಡಿಗರು ವಿವಿಧ ವೃತ್ತಿಗಳ ಮಾಡಿಕೊಂಡಿದ್ದು, ಇಸ್ರೇಲ್ ಸರ್ಕಾರದ ಮೇಲೆ ನಮ್ಮೆಲ್ಲರಿಗೂ ನಂಬಿಕೆ ಇದ್ದು, ಭಾರತಕ್ಕೆ ವಾಪಾಸ್ಸಾಗುವ ಮಾತೇ ಇಲ್ಲ ಎಂದು ಮಂಗಳೂರು ಮೂಲದ ಮೆಲ್ವಿನ್ ಡಿಸೋಜಾ ಸ್ಪಷ್ಟಪಡಿಸಿದ್ದಾರೆ.ಹಮಾಸ್ ಉಗ್ರರ ದಾಳಿಗೆ ತುತ್ತಾದ ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ಕಳೆದ 16 ವರ್ಷದಿಂದ ಕೇರ್ ಟೇಕರ್ ವೃತ್ತಿ ಮಾಡಿಕೊಂಡಿರುವ ಮೆಲ್ವಿನ್ ಮೂಲತಃ ಮಂಗಳೂರಿನವರು. ದಾವಣಗೆರೆಯಲ್ಲಿ ತಮ್ಮ ಚಿಕ್ಕಮ್ಮನ ಮನೆಗೆ ಬಂದು ಹೋಗುತ್ತಿದ್ದರು, ಇಲ್ಲಿ ಸಾಕಷ್ಟು ಸ್ನೇಹಿತರು, ಬಂಧು-ಬಳಗ ಹೊಂದಿರುವ ಮೆಲ್ವಿನ್ ಡಿಸೋಜಾ 6 ತಿಂಗಳ ಹಿಂದಷ್ಟೇ ಇಲ್ಲಿಗೆ ಬಂದು ವಾಪಾಸು ಆಗಿದ್ದರು.
ಟೆಲ್ ಅವಿಲ್ ಇಸ್ರೇಲ್‌ನ ಪ್ರಮುಖ ಆರ್ಥಿಕ, ವಾಣಿಜ್ಯ ನಗರಿ. ಒಂದು ಕಡೆ ಕರಾವಳಿ ಮತ್ತೊಂದು ಕಡೆ ಮರುಭೂಮಿ ಇರುವ ವಿಶಾಲ ನಗರ. ಗಾಜಾದಿಂದ ಹಮಾಸ್ ಉಗ್ರರು ದಾಳಿ ಮಾಡಿದ ಗಡಿ ಪ್ರದೇಶ ಟೆಲ್ ಅವಿವ್ ನಿಂದ ಕೇವಲ 75-80 ಕಿಮೀ ಅಂತರದಲ್ಲಿದೆ. ಸುಮಾರು 3-4 ಸಾವಿರ ಕನ್ನಡಿಗರು ಸೇರಿ 5 ಸಾವಿರ ಭಾರತೀಯರು ಇಲ್ಲಿಯೇ ಇದ್ದಾರೆ. ಹಮಾಸ್ ಉಗ್ರರು ದಾಳಿ ನಡೆಸಿ ಇಂದಿಗೆ 3 ದಿನವಾಗಿದ್ದು, ಶನಿವಾರದ ಭೀಕರ ದಾಳಿಯನ್ನು ಇಸ್ರೇಲಿಗಳಾಗಲೀ, ನಾವಾಗಲೀ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.ಗಾಜಾದಿಂದ ಬಂದ ಹಮಾಸ್ ಉಗ್ರರು ಶನಿವಾರ ಬೆಳಿಗ್ಗೆ 6.20ರ ವೇಳೆ ನಡೆಸಿದ ದಾಳಿ ಅತ್ಯಂತ ಭೀಕರವಾಗಿದ್ದು, ಇದು ಎಲ್ಲರಿಗೂ ನೋವುಂಟು ಮಾಡಿದೆ. ನೋವಾ ಪಾರ್ಟಿ ಅಥವಾ ಮ್ಯೂಸಿಕ್ ಪಾರ್ಟಿ ಸ್ಥಳದ ಮೇಲೆ 2 ಸಾವಿರ ಹಮಾಸ್ ಉಗ್ರರು ದಾಳಿ ಮಾಡಿದ್ದು, ಸುಮಾರು 700 ಮಂದಿ ಮೃತಪಟ್ಟಿದ್ದು, 1,500 ಮಂದಿ ಗಾಯಗೊಂಡಿದ್ದಾರೆ. ಕೃಷಿ ಕೆಲಸಕ್ಕೆ ಬಂದಿದ್ದ ನೇಪಾಳದ 20 ಜನರ ಪೈಕಿ 10 ಮಂದಿ ಮೃತಪಟ್ಟಿದ್ದು, ಉಳಿದ 10 ಮಂದಿ ಗಾಯಗೊಂಡಿದ್ದಾರೆಂದು ತಿಳಿಸಿದ್ದಾರೆ.
...................ಮನೆಯಿಂದ ಹೊರ ಬರದಂತೆ ಸೂಚನೆ
ಅಕಸ್ಮಾತ್ ಬಾಂಬ್ ದಾಳಿ ನಡೆದರೆ, ಸೈರನ್ ಮೊಳಗಲು ಶುರುಹಮಾಸ್ ಉಗ್ರರ ಪೈಕಿ ಸುಮಾರು 200 ಜನರು ಇಸ್ರೇಲ್‌ಗೆ ನುಸುಳಿದ್ದಾರೆ. ಒಳಗೆ ನುಗ್ಗಿರುವ ಹಮಾಸ್ ಉಗ್ರರನ್ನು ಪತ್ತೆ ಮಾಡಿ, ಉಗ್ರರನ್ನ ಮಟ್ಟ ಹಾಕುವ ಕೆಲಸಕ್ಕೆ ಇಸ್ರೇಲ್ ಮುಂದಾಗಿದೆ. ದಾಳಿ ಹಿನ್ನೆಲೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಇಸ್ರೇಲಿಯರು ಸೇರಿ ಅಲ್ಲಿರುವ ಎಲ್ಲರಿಗೂ ಮನೆಯಿಂದ ಹೊರ ಬರದಂತೆ ಇಸ್ರೇಲ್ ಸರ್ಕಾರ ಸೂಚಿಸಿದೆ.
ಸದ್ಯ ಭಯದ ವಾತಾವರಣ ಇದೆಯಷ್ಟೇ.ಒಳ ನುಗ್ಗಿರುವ ಹಮಾಸ್ ಉಗ್ರರ ನಿರ್ನಾಮಕ್ಕೆ ಇಸ್ರೇಲ್ ಸೈನಿಕರು ಬೇಟೆ ಶುರು ಮಾಡಿವೆ. ಒಳಗಿರುವ ಉಗ್ರರು ಯಾವಾಗ, ಹೇಗೆ, ಯಾರ ಮೇಲೆ, ಎಲ್ಲಿ ದಾಳಿ ಮಾಡುತ್ತಾರೆಂಬ ಮಾಹಿತಿ ಇಲ್ಲ. ಹಾಗಾಗಿ ಯಾರಿಗೂ ಮನೆಯಿಂದ ಹೊರ ಬರದಂತೆ, ಸೈರನ್ ಮೊಳಗಿದಾಗ ಬಂಕರ್‌ಗಳಲ್ಲಿ, ಮೆಟ್ಟಿಲುಗಳ ಕೆಳಗೆ ಸುರಕ್ಷಿತವಾಗಿ ಅಡಗುವಂತೆ ಸೂಚನೆ ನೀಡಲಾಗಿದೆ. ಇಸ್ರೇಲ್‌ನಲ್ಲಿ ಬಹುತೇಕ ಎಲ್ಲಾ ಮನೆಗೂ ಬಂಕರ್ ಇದೆ. ಅಕಸ್ಮಾತ್ ಬಾಂಬ್ ದಾಳಿ ನಡೆದರೆ, ಸೈರನ್ ಮೊಳಗಲು ಶುರು ಮಾಡುತ್ತದೆ. ಸೈರನ್ ಸದ್ದು ಬರುತ್ತಲೇ 2-3 ನಿಮಿಷದಲ್ಲಿ ಎಲ್ಲರೂ ಅದರಲ್ಲಿ ಹೋಗಿರುತ್ತಾರೆ ಎಂದು ಡಿಸೋಜಾ ವಿವರಿಸುತ್ತಾರೆ.
.......ಭಾರತೀಯರ ಬಗ್ಗೆ ಗೌರವ, ಅಭಿಮಾನ
ಇಸ್ರೇಲ್ ಬಗ್ಗೆ ಹೆಮ್ಮೆಯಾಗುತ್ತದೆ. ನಮ್ಮನ್ನು ತುಂಬಾ ಅಭಿಮಾನ ಗೌರವದಿಂದ ಕಾಣುತ್ತಾರೆ. ಭಾರತ, ಭಾರತೀಯರ ತುಂಬು ಗೌರವದಿಂದ ಕಾಣುತ್ತಾರೆ. ಎಲ್ಲೆಡೆ ಇಸ್ರೇಲ್ ಸೇನೆ, ಪೊಲೀಸರು ಸುತ್ತಾಡುತ್ತಿದ್ದಾರೆ. ಸದ್ಯ ಇಲ್ಲಿ ಯಾವುದೇ ರಾಜಕೀಯ ಹೇಳಿಕೆ ಇಲ್ಲ. ಗುಪ್ತ ಕಾರ್ಯಸೂಚಿ ನಡೆಯುತ್ತಿದೆ.ಮೆಲ್ವಿನ್ ಡಿಸೋಜಾ ................