ಸಹಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರು ಸಹಕಾರಿ ತತ್ವ ಸಿದ್ಧಾಂತದ ಮೇಲೆ ನಡೆಯಬೇಕು. ಆಗ ಮಾತ್ರ ಸಹಕಾರಿ ರಂಗದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ, ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರುಸಹಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರು ಸಹಕಾರಿ ತತ್ವ ಸಿದ್ಧಾಂತದ ಮೇಲೆ ನಡೆಯಬೇಕು. ಆಗ ಮಾತ್ರ ಸಹಕಾರಿ ರಂಗದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ, ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಹೇಳಿದರು.ನಗರದ ಕ್ಯಾತ್ಸಂದ್ರದ ಬಲಿಜ ಸಮುದಾಯ ಭವನದಲ್ಲಿ ಶ್ರೀ ಸೋಮೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದ ಸಹಕಾರ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸಹಕಾರ ಸಂಸ್ಥೆಗಳನ್ನು ಸ್ಥಾಪನೆ ಮಾಡುವುದು ಸುಲಭ. ಆದರೆ ಅದನ್ನು ಮುನ್ನಡೆಸಿಕೊಂಡು ಹೋಗುವುದು ಬಹಳ ಕಷ್ಟದ ಕೆಲಸ. ಇಲ್ಲಿ ಎಲ್ಲವೂ ನಂಬಿಕೆ ಆಧಾರದ ಮೇಲೆ ನಡೆಯುತ್ತದೆ. ಸಾಮಾನ್ಯ ಜನರಿಗೂ ಸಾಲ ಸೌಲಭ್ಯಗಳನ್ನು ನೀಡುವುದು ಸಹಕಾರಿ ಸಂಸ್ಥೆಗಳ ಮೊದಲ ಆದ್ಯತೆ ಎಂದರು.
ಸಮಾರಂಭ ಉದ್ಘಾಟಿಸಿದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ರೈತರು, ಸಾಮಾನ್ಯ ಜನರಿಗೆ ಸಾಲ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲು ಸಹಕಾರಿ ಸಂಸ್ಥೆಗಳಿಂದ ಮಾತ್ರ ಸಾಧ್ಯ ಎಂಬುದು ಈಗಾಗಲೇ ಸಹಕಾರಿ ಆಂದೋಲನ ಸಾಬೀತು ಮಾಡಿದೆ ಎಂದರು. ಪ್ರಸ್ತುತ ಸರ್ಕಾರ ಹಾಗೂ ರಾಜಕಾರಣಿಗಳಿಗಿಂತ ಹೆಚ್ಚಿನ ರೀತಿಯಲ್ಲಿ ರೈತರು ಮತ್ತು ಜನಸಾಮಾನ್ಯರಿಗೆ ಸಹಕಾರಿ ಸಂಸ್ಥೆಗಳ ಮೂಲಕ ಸೇವೆ ಮಾಡಲು ಅವಕಾಶ ಇದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಡವರು, ರೈತರು ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಹಕಾರಿ ಸಂಸ್ಥೆಗಳೇ ಬಡಜನರ ಆಶಾಕಿರಣವಾಗಿವೆ ಎಂದು ಹೇಳಿದರು.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ. ವೆಂಕಟೇಗೌಡ ಮಾತನಾಡಿ, ಸಹಕಾರಿ ರಂಗದ ಪ್ರಶಸ್ತಿಗಳು ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಇರಬೇಕು. ಈ ನಿಟ್ಟಿನಲ್ಲಿ ಸಹಕಾರಿ ಆಂದೋಲನದಲ್ಲಿ ಸಹಕಾರಿ ರತ್ನ ಪ್ರಶಸ್ತಿಯನ್ನು ನೀಡುವ ಕೆಲಸವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್. ರಾಜಣ್ಣನವರು ಮಾಡಿದ್ದಾರೆ ಎಂದರು. ಕ್ಯಾತ್ಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು ಮಾತನಾಡಿ, ಸಹಕಾರಿ ಸಂಘಗಳಲ್ಲಿ ರೈತರಿಗೆ ಹೊಸ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷ ಪಿ. ಮೂರ್ತಿ ಮಾತನಾಡಿ, ಕ್ಯಾತ್ಸಂದ್ರ ಶಾಲೆಯ ಮೈದಾನದಲ್ಲಿರುವ ಬಯಲು ಮಂದಿರ ಹಾಗೂ ರಂಗಮಂದಿರವನ್ನು ಸಹಕಾರ ಸಂಸ್ಥೆಗಳ ಸಹಕಾರದಿಂದ ನಿರ್ಮಾಣ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ, ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣನವರನ್ನು ಅಭಿನಂದಿಸಲಾಯಿತು. ಜತೆಗೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಕೆ.ಜಿ. ಜಗದೀಶ್, ಕೆ.ಎ. ದೇವರಾಜು, ಪಿ. ಮೂರ್ತಿ ರವರನ್ನು ಹಾಗ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಸ್.ಎಂ.ಕೆ. ಸ್ವಾಮಿ, ಎಂ.ವಿ. ಲೋಕೇಶ್, ಪತ್ರಕರ್ತ ಜಗನ್ನಾಥ್ ಕಾಳೇನಹಳ್ಳಿ, ಕೆ.ವಿ. ವೀರಭದ್ರಪ್ಪ, ವಿದ್ವಾನ್ ಡಾ. ರಾಜಶೇಖರಶಾಸ್ತ್ರಿಗಳು, ಡಾ. ಮಮತ ಎನ್.ಎಂ. ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಸೋಮೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಜಿ. ಜಗದೀಶ್ ಉಪಸ್ಥಿತರಿದ್ದರು.