ಸಾರಾಂಶ
ಅಂಕೋಲಾ: ನೌಕರರು ಶುದ್ಧ ಹಸ್ತ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು. ನಿಮ್ಮ ಮೇಲೆ ವ್ಯಥಾ ಆರೋಪ ಬಂದಲ್ಲಿ ನಾನಿದ್ದೇನೆ. ಈ ಬಗ್ಗೆ ನಿಮಗೆ ಯಾವುದೇ ಆತಂಕ ಬೇಡಾ ಎಂದು ಕರ್ನಾಟಕ ಲೋಕಾಯುಕ್ತದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅಭಯ ನೀಡಿದರು.ನೌಕರರು ಆಮಿಷ, ಒತ್ತಡಗಳಿಗೆ ಒಳಗಾಗದೇ ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರಾಮಾಣಿಕ ನೌಕರರನ್ನು ಸಮಾಜ ಗುರುತಿಸುವ ಮೂಲಕ ಅವರಿಗೆ ಉತ್ತಮ ಗೌರವ ದೊರೆಯಲಿದೆ ಎಂದರು. ಭ್ರಷ್ಟಾಚಾರ ನಿಯಂತ್ರಣದಲ್ಲಿ ಲೋಕಾಯುಕ್ತ ಸಂಸ್ಥೆಯ ಮೇಲೆ ಸಾರ್ವಜನಿಕರು ಹೆಚ್ಚು ನಂಬಿಕೆಯಿಟ್ಟಿದ್ದು, ಒಂದು ವರ್ಷದಲ್ಲಿ 8000ಕ್ಕೂ ಅಧಿಕ ದೂರು ಸಲ್ಲಿಕೆಯಾಗಿವೆ. ಈ ದೂರುಗಳ ಬಗ್ಗೆ ತ್ವರಿತವಾಗಿ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಲೋಕಾಯುಕ್ತದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ದೂರುಗಳ ಬಗ್ಗೆ ಮಾತ್ರ ತನಿಖೆ ನಡೆಸಿ ಕ್ರಮಕೈಗೊಳ್ಳದೇ ವಿವಿಧ ಇಲಾಖೆಗಳಲ್ಲಿನ ವೈಫಲ್ಯ ಮತ್ತು ಆಡಳಿತ ವ್ಯವಸ್ಥೆಯ ದೋಷಗಳ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಅಂಕೋಲದ ಸ್ವಾತಂತ್ರ್ಯ ಸ್ಮಾರಕ ಭವನಕ್ಕೆ ಮೂಲಭೂತ ಸೌಕರ್ಯ ಒದಗಿಸುವುದು, ಅರಣ್ಯ ಇಲಾಖೆಯ ಜಮೀನು ಖಾಸಗಿ ಅವರಿಗೆ ಶಾಲಾ ನಿರ್ಮಾಣಕ್ಕೆ ನೀಡಿರುವುದು, ಒಂದೇ ಸರ್ವೇ ನಂಬರ್‌ನ್ನು ಇಬ್ಬರಿಗೆ ನೀಡಿರುವುದು, ಜಾಗದ ಅಳತೆಯಲ್ಲಿ ತಪ್ಪಾಗಿ ನಮೂದಿರುವುದು, ಮನೆಯ ಮೇಲಿರುವ ಅಪಾಯಕಾರಿ ಮರ ತೆರವುಗೊಳಿಸುವುದು, ಭೂ ಪರಿವರ್ತನೆ ಕಡತ ಕಾಣೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಜನರು ಅಹವಾಲು ಸಲ್ಲಿಸಿದರು. ಈ ಎಲ್ಲ ಅಹವಾಲುಗಳ ಬಗ್ಗೆ 10 ದಿನದಲ್ಲಿ ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಲೋಕಾಯುಕ್ತರು ಸೂಚಿಸಿದರು.ಸಾರ್ವಜನಿಕರ ಸಮಸ್ಯೆಗಳಿಗೆ ಪರಿಣಾಮವಾಗಿ ಸ್ಪಂದಿಸುವಲ್ಲಿ ಮತ್ತು ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಕರ್ನಾಟಕ ಲೋಕಾಯುಕ್ತ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದರು.