ಧಾರವಾಡ:

ಪ್ರತ್ಯೇಕ ಪಾಲಿಕೆಯ ರಚನೆಗಾಗಿ ಹೋರಾಟ ನಡೆಸಿದ ರೀತಿಯಲ್ಲಿ ಉದ್ಯೋಗ ಆಕಾಂಕ್ಷಿಗಳ ಪ್ರಮುಖ ಬೇಡಿಕೆ ಆಗಿರುವ ಸರ್ಕಾರದ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಕುರಿತಂತೆ ಸರ್ಕಾರದೊಂದಿಗೆ ಚರ್ಚಿಸಿಲು ಸಮಯ ನಿಗದಿಗೊಳಿಸಬೇಕು. ಇಲ್ಲದಿದ್ದರೆ ಜೂ. 9ರಿಂದ ಸತ್ಯ ಪ್ರತಿಪಾದನೆಗಾಗಿ ಸತ್ಯಾಗ್ರಹ ಆರಂಭಗೊಳ್ಳಲಿದೆ ಎಂದು ನ್ಯಾಯವಾದಿ ಬಿ.ಡಿ. ಹಿರೇಮಠ ಎಚ್ಚರಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಭೆಯ ಸಮಯ ನಿಗದಿ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ವಹಿಸಿಕೊಳ್ಳಬೇಕು. ಜೂ. 8ರ ವರೆಗೂ ಚರ್ಚೆಗೆ ಸಿದ್ಧವಾಗಿ ಕಾಯುತ್ತೇವೆ. ಇದು ಸಾಧ್ಯವಾಗದಿದ್ದರೆ ಪೊಲೀಸರು ಒಪ್ಪಿಗೆ ನೀಡದಿದ್ದರೂ ಹೋರಾಟ ನಿಶ್ಚಿತ ಎಂದರು.

ರಾಜ್ಯ ಸರ್ಕಾರ ನೇಮಕಾತಿಗೆ ನಿರ್ಧರಿಸಿದ್ದರೂ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ. ಹೀಗಾಗಿ ಯುವಕರು ಭುಗಿಲೆದ್ದಿದ್ದಾರೆ. ಅವರೆಲ್ಲರ ಧ್ವನಿಯಾಗಿ ಉತ್ತರ ಕರ್ನಾಟಕ ವಿಕಾಸ ವೇದಿಕೆಯು ಅಕ್ಸಾ ಸಹಯೋಗದಲ್ಲಿ ಹೋರಾಟ ರೂಪಿಸಲಿದೆ ಎಂದರು.

ಜೂ. 3ರಿಂದ ಹೋರಾಟಕ್ಕೆ ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ಪೊಲೀಸರು ಅನುಮತಿ ನೀಡಿಲ್ಲ. ಜೂ. 3ರಂದು ನೂತನ ಸಿಎಂ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅದಾದ ಬಳಿಕ ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚೆಗೆ ಸಮಯ ನಿಗದಿಗೊಳಿಸಬೇಕು. ಈ ಜವಾಬ್ದಾರಿಯನ್ನು ಡಿಸಿ, ಪೊಲೀಸ್ ಆಯುಕ್ತರು ವಹಿಸಿಕೊಳ್ಳಬೇಕು. ಇಲ್ಲಿ ಬಿ.ಡಿ. ಹಿರೇಮಠ ಒಬ್ಬರೇ ಚರ್ಚೆಗೆ ಬರಬೇಕೆಂದರೆ ಅದನ್ನು ಒಪ್ಪಲಾಗದು. ರಾಜ್ಯದ ಯುವಜನತೆ ಪ್ರಶ್ನೆ ಇದಾಗಿದ್ದರಿಂದ 31 ಜಿಲ್ಲೆಗಳ ಮುಖಂಡರೂ ಈ ನಿಯೋಗದಲ್ಲಿ ಇರಬೇಕು ಎಂದು ಬಿ.ಡಿ. ಹಿರೇಮಠ ಷರತ್ತು ಹಾಕಿದರು.


ಅನುಮತಿಗೆ ನಕಾರ:

ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಅಕ್ಸಾ) ಅವರು ಜೂ. 3ಕ್ಕೆ ಪ್ರತಿಭಟನೆಗೆ ಅನುಮತಿ ಕೇಳಿದ್ದರು. ಅವರು ಈ ಹಿಂದೆ ಪ್ರತಿಭಟನೆ ಮಾಡಿದಾಗ ನಿಯಮ ಉಲ್ಲಂಘಿಸಿದ್ದರು. ಹೀಗಾಗಿ ಕಾನೂನು ಸುವ್ಯವಸ್ಥೆ ಗಮನದಲ್ಲಿ ಇಟ್ಟುಕೊಂಡು ಅನುಮತಿ ನಿರಾಕರಿಸಲಾಗಿದೆ. ನ್ಯಾಯವಾದಿ ಬಿ.ಡಿ. ಹಿರೇಮಠ ಅವರಿಗೂ ಈ ಹಿಂದಿನ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಸಾರ್ವಜನಿಕರು ಗೊಂದಲದ ಹೇಳಿಕೆಗಳಿಗೆ ಕಿವಿಗೊಡಬಾರದು. ಅಕ್ಸಾ ಕೂಡ ಸಹಕಾರ ನೀಡುವ ವಿಶ್ವಾಸ ಇದೆ ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.