ಮಣ್ಣಿನಲ್ಲಿನ ಸಾವಯವ ಇಂಗಾಲ ಪ್ರಮಾಣ ಏರಿಸಲು ಪ್ರಯತ್ನಿಸಿ: ಡಾ. ಬಬಲಾದ

| Published : Jan 18 2024, 02:03 AM IST

ಮಣ್ಣಿನಲ್ಲಿನ ಸಾವಯವ ಇಂಗಾಲ ಪ್ರಮಾಣ ಏರಿಸಲು ಪ್ರಯತ್ನಿಸಿ: ಡಾ. ಬಬಲಾದ
Share this Article
  • FB
  • TW
  • Linkdin
  • Email

ಸಾರಾಂಶ

ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಸಾವಯವ ಗೊಬ್ಬರ ಬಳಕೆ ಮಾಡಲು ರೈತರು ಮುಂದಾಗಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ. ಎಚ್.ಬಿ. ಬಬಲಾದ ಹೇಳಿದರು.

ಧಾರವಾಡ: ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಕೇವಲ ಶೇ 0.4ರಷ್ಟು ಮಾತ್ರ ಇದ್ದು ಇದನ್ನು ಶೇ 0.7ರಿಂದ ಶೇ 0.8ರಷ್ಟು, ಸಾಧ್ಯವಾದರೆ ಶೇ. 1ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಲ್ಲಿ ಕೃಷಿ ಉತ್ಪಾದನೆಯಲ್ಲಿ ನಾವು ಇನ್ನಷ್ಟು ಪ್ರಗತಿ ಸಾಧಿಸಬಹುದು ಎಂದು ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ. ಎಚ್.ಬಿ. ಬಬಲಾದ ಹೇಳಿದರು.

ಇಲ್ಲಿನ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯಲ್ಲಿ (ವಾಲ್ಮಿ) ಜಲ ಸಂಪನ್ಮೂಲ ಇಲಾಖೆಯಲ್ಲಿ ಹೊಸದಾಗಿ ನೇಮಕಗೊಂಡ ಎಂಜಿನಿಯರ್‌ಗಳಿಗೆ ಆರಂಭವಾದ ಒಂದು ತಿಂಗಳ ಕಡ್ಡಾಯ ತರಬೇತಿ ಶಿಬಿರವನ್ನು ಬುಧವಾರ ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದರು.

ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಸಾವಯವ ಗೊಬ್ಬರ ಬಳಕೆ ಮಾಡಲು ರೈತರು ಮುಂದಾಗಬೇಕು. ಮಣ್ಣಿನಲ್ಲಿ ಲಕ್ಷಾಂತರ ಸೂಕ್ಷ್ಮ ಜೀವಾಣುಗಳಿದ್ದು, ಇವುಗಳನ್ನು ಸಂರಕ್ಷಿಸಿ ಮಣ್ಣಿನ ಫಲವತ್ತತೆ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಕಬ್ಬು, ಜೋಳ, ಮೆಕ್ಕೆಜೋಳ ಮುಂತಾದ ಬೆಳೆಗಳ ಕೃಷಿ ತ್ಯಾಜ್ಯವನ್ನು ಸಂಸ್ಕರಿಸಿ ಮಣ್ಣಿನಲ್ಲಿ ಮತ್ತೆ ಹಾಕಿದರೆ ಅದರ ಫಲವತ್ತತೆ ಹೆಚ್ಚುತ್ತದೆ. ಅದು ಬಿಟ್ಟು ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದರೆ ಸುತ್ತಮುತ್ತಲಿನ ಪರಿಸರ ಹಾಳಾಗುವುದಲ್ಲದೇ ಮಣ್ಣಿನಲ್ಲಿರುವ ಸೂಕ್ಷ್ಮಾಣುಗಳು ಕೂಡ ಸತ್ತು ಮಣ್ಣು ಬರಡಾಗುತ್ತದೆ ಎಂದರು.

ಮಣ್ಣಿನ ಫಲವತ್ತತೆ ಕಾಪಾಡುವಂತೆಯೇ ನೀರು ನಿರ್ವಹಣೆಯನ್ನೂ ಸಮರ್ಪಕವಾಗಿ ನಾವು ಮಾಡಬೇಕಿದೆ. ನೀರು ನಿರ್ವಹಣೆಯಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದ್ದು, ಕಾಲುವೆಯ ಕೊನೆಯಂಚಿನ ರೈತರಿಗೆ ನೀರು ಒದಗಿಸುವ ಗುರುತರ ಜವಾಬ್ದಾರಿ ಅವರ ಮೇಲಿದ್ದು, ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ರೈತರಿಗೆ ಸಹಭಾಗಿತ್ವ ನೀರಾವರಿ ಪದ್ಧತಿಯ ಬಗ್ಗೆ ತಿಳಿವಳಿಕೆ ನೀಡಿ ನೀರು ಸದ್ಬಳಕೆಯಾಗುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದರು.

ನೀರಿನ ಬಳಕೆಯ ಸಾಮರ್ಥ್ಯವನ್ನು ಈಗಿರುವ ಶೇ. 40ರಿಂದ ಶೇ. 80ಕ್ಕೆ ಹೆಚ್ಚಿಸಲು ನಾವೆಲ್ಲರೂ ಮುಂದಾಗಬೇಕಿದೆ ಎಂದು ಸಲಹೆ ಮಾಡಿದ ಅವರು, ಹಸಿರು ಕ್ರಾಂತಿಯ ಒಟ್ಟಾರೆ ಫಲ ನಮಗೆ ದೊರೆಯಬೇಕು ಎಂದರೆ ನೀರಿನ ಸದ್ಬಳಕೆಯ ಜತೆಗೆ ಮಣ್ಣಿನ ಫಲವತ್ತತೆ ಕಾಪಾಡುವ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಪ್ರೊ. ಬಿ.ವೈ. ಬಂಡಿವಡ್ಡರ, ಒಂದು ತಿಂಗಳ ತರಬೇತಿ ಅವಧಿಯಲ್ಲಿ ಅಣೆಕಟ್ಟೆಗಳ ನಿರ್ಮಾಣ, ಕಾಲುವೆಗಳ ನಿರ್ವಹಣೆ, ಕರ್ನಾಟಕ ನೀರಾವರಿ ಕಾಯ್ದೆ, ಕರ್ನಾಟಕ ಸಹಕಾರ ಕಾಯ್ದೆ, ಸಹಭಾಗಿತ್ವ ನೀರಾವರಿ ಪದ್ಧತಿ, ಕಾಲುವೆಗಳಿಗೆ ನೀರು ಒದಗಿಸುವ ಕುರಿತಾದ ಲೆಕ್ಕಾಚಾರ, ನೀರು ಬಳಕೆದಾರರ ಸಹಕಾರ ಸಂಘಗಳ ಮಹತ್ವ, ಕೆಟಿಪಿಪಿ ಕಾಯ್ದೆ, ಅಂತರ ರಾಜ್ಯ ಜಲ ವಿವಾದ ಮೊದಲಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿ ಬಳಿಕ ಕ್ಷೇತ್ರ ಕಾರ್ಯದಲ್ಲಿ ಸಮರ್ಪಕವಾಗಿ ಅದನ್ನು ಅನುಷ್ಠಾನಕ್ಕೆ ತಂದು ರಾಜ್ಯದಲ್ಲಿ ನೀರಾವರಿಯ ಸಮಗ್ರ ಹಾಗೂ ಸಮರ್ಪಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸೂಚಿಸಿದರು.

ತರಬೇತಿಯಲ್ಲಿ ಕೃಷಿಯಲ್ಲಿನ ಅತ್ಯಾಧುನಿಕ ತಂತ್ರಜ್ಞಾನಗಳು, ಜಮೀನಿಗೆ ನೀರು ಹಾಯಿಸುವ ವಿಧಾನದಲ್ಲಿ ಕಂಪ್ಯೂಟರ್ ಚಾಲಿತ ನಿರ್ವಹಣೆ ಮೊದಲಾದ ವಿಷಯಗಳ ಬಗೆಗೂ ತಿಳಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು. ವಾಲ್ಮಿಯ ಸಹ ಪ್ರಾಧ್ಯಾಪಕ ಪ್ರೊ. ಪ್ರದೀಪ ದೇವರಮನಿ ಸ್ವಾಗತಿಸಿದರು. ಸಹ ಸಂಯೋಜಕ ಚೇತನ ಪಿ. ಶೆಟ್ಟಿ ವಂದಿಸಿದರು. ಅನುರಾಧಾ ಮಳಗಿ ಹಾಗೂ ಫಕೀರೇಶ ಅಗಡಿ ನಿರ್ವಹಿಸಿದರು. ವಾಲ್ಮಿ ಸಮಾಲೋಚಕರಾದ ಡಾ. ವಿ.ಐ. ಬೆಣಗಿ, ಪ್ರಾಧ್ಯಾಪಕ ಪ್ರೊ. ಭೀಮಾ ನಾಯ್ಕ, ಎನ್. ಹನುಮಂತಪ್ಪ, ಸಹಾಯಕ ಪ್ರಾಧ್ಯಾಪಕ ಇಂದೂಧರ ಹಿರೇಮಠ ಇದ್ದರು.