ಭಾರತೀಯ ಸಂಗೀತ ಉಳಿಸಿ ಬೆಳೆಸಲು ಪ್ರಯತ್ನಿಸಿ

| Published : Jan 01 2024, 01:15 AM IST

ಸಾರಾಂಶ

ಸಂಗೀತದ ದಿಗ್ಗಜರನ್ನು ಬೆಳಸಿದ ಕೀರ್ತಿ ಧಾರವಾಡಕ್ಕೆ ಸಲ್ಲುತ್ತದೆ. ಸಂಗೀತ ಒಂದು ಭಾಷೆಯಾಗಿದ್ದು, ಸಂಗೀತವನ್ನು ಕಲಿಯಲು ಅಧ್ಯಯನ ಮಾಡಲು ಇಂದಿನ ಯುವಕರು ಮುಂದೆ ಬರಬೇಕು. ಭಾರತೀಯ ಸಂಗೀತ ಸಂಸ್ಕೃತಿ ಉಳಿಸುವಲ್ಲಿ ಸಂಗೀತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು

ಧಾರವಾಡ: ಭಾರತೀಯ ಸಂಗೀತವನ್ನು ಉಳಿಸಿ ಬೆಳಸಬೇಕಾದ ಅವಶ್ಯಕತೆ ಇದೆ ಎಂದು ಹುಬ್ಬಳ್ಳಿಯ ಹಿಂದುಸ್ಥಾನಿ ಗಾಯಕ ಪಂ. ಬಾಲಚಂದ್ರ ನಾಕೋಡ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಪದ್ಮಭೂಷಣ ಡಾ. ಮಲ್ಲಿಕಾರ್ಜುನ ಮನ್ಸೂರ ಸ್ಮರಣಾರ್ಥ ಕರ್ನಾಟಕ ಲಲಿತಕಲಾ ಕಲಾ ಮತ್ತು ಸಂಗೀತ ಕಾಲೇಜಿನ ಸಭಾಂಗಣದಲ್ಲಿ ಸಂಗೀತಜ್ಞರ ದಿನಾಚರಣೆಯಲ್ಲಿ ಮಾತನಾಡಿದರು.

ಸಂಗೀತದ ದಿಗ್ಗಜರನ್ನು ಬೆಳಸಿದ ಕೀರ್ತಿ ಧಾರವಾಡಕ್ಕೆ ಸಲ್ಲುತ್ತದೆ. ಸಂಗೀತ ಒಂದು ಭಾಷೆಯಾಗಿದ್ದು, ಸಂಗೀತವನ್ನು ಕಲಿಯಲು ಅಧ್ಯಯನ ಮಾಡಲು ಇಂದಿನ ಯುವಕರು ಮುಂದೆ ಬರಬೇಕು. ಭಾರತೀಯ ಸಂಗೀತ ಸಂಸ್ಕೃತಿ ಉಳಿಸುವಲ್ಲಿ ಸಂಗೀತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು. ಇದೇ ಸಂದರ್ಭದಲ್ಲಿ ಬಾಲಚಂದ್ರ ನಾಕೋಡ್ ಅವರು ಸಂಗೀತ ಕಚೇರಿಯನ್ನು ನಡೆಸಿಕೊಟ್ಟರು.

ಕವಿವಿ ಮೂಲತತ್ವ ಉಪನ್ಯಾಸಗಳ ಸಂಯೋಜಕ ಡಾ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಕವಿವಿ ಮೂಲತತ್ವ ಉಪನ್ಯಾಸ, ಪ್ರಚಾರ ಉಪನ್ಯಾಸಗಳನ್ನು ಆಯೋಜಿಸುತ್ತಿದೆ. ಶಿಕ್ಷಣ ತಜ್ಞರು ಸೇರಿದಂತೆ ಅನೇಕ ಮಹನೀಯರ ಹೆಸರಿನಲ್ಲಿ ಮೂಲತತ್ವ ಉಪನ್ಯಾಸ ಆಯೋಜಿಸುತ್ತಿದೆ. ಇಂತಹ ಉಪನ್ಯಾಸಗಳನ್ನು ಇಂದಿನ ವಿದ್ಯಾರ್ಥಿಗಳು ಉಪಯೋಗ ಮಾಡಿಕೊಳ್ಳಬೇಕು ಎಂದರು.

ಕವಿವಿ ಪ್ರಸಾರಾಂಗ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ, ರಾಷ್ಟ್ರದ ಮಟ್ಟದಲ್ಲಿ ಧಾರವಾಡವನ್ನು ಗುರುತಿಸುವಂತೆ ಮಾಡುವಲ್ಲಿ ಡಾ. ಮಲ್ಲಿಕಾರ್ಜುನ ಮನ್ಸೂರ ಅವರಿಗೆ ಸಲ್ಲುತ್ತದೆ. ಧಾರವಾಡ ಸಂಗೀತಗಾರರ ತವರೂರು. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಸೇರಿದಂತೆ ಅನೇಕ ಸಂಗೀತ ದಿಗ್ಗಜರು ಧಾರವಾಡದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಸಚಿವ ಡಾ. ಎ. ಚನ್ನಪ್ಪ ಮಾತನಾಡಿದರು. ಸಂಗೀತ ವಿಭಾಗದ ಮುಖ್ಯಸ್ಥರಾದ ಮೃತ್ಯುಂಜಯ ಅಗಡಿ, ಕವಿವಿ ಪ್ರಸಾರಾಂಗ ಉಪನಿರ್ದೇಶಕ ಡಾ. ಸಿದ್ದಪ್ಪ.ಎನ್. ಇದ್ದರು.