ಯಲಬುರ್ಗಾದಲ್ಲಿ ಸುನಾಮಿ ರೀತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ: ಬಸವರಾಜ ರಾಯರಡ್ಡಿ

| Published : Aug 04 2024, 01:25 AM IST

ಯಲಬುರ್ಗಾದಲ್ಲಿ ಸುನಾಮಿ ರೀತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ: ಬಸವರಾಜ ರಾಯರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಯಲಬುರ್ಗಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸುನಾಮಿ ರೀತಿಯಲ್ಲಿ ನಡೆಯುತ್ತಿವೆ.

ಸಿಎಂ ಆರ್ಥಿಕ ಸಲಹೆಗಾರ ಹೇಳಿಕೆ । ನಾನಾ ಕಾಮಗಾರಿಗಳಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಕುಕನೂರು

ಯಲಬುರ್ಗಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸುನಾಮಿ ರೀತಿಯಲ್ಲಿ ನಡೆಯುತ್ತಿವೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಜನರು ಜಮೀನು ನೀಡಿ ಸಹಕರಿಸುವ ಅಗತ್ಯತೆ ಮಾತ್ರವೇ ಇದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದಲ್ಲಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಚೇರಿ ಉದ್ಘಾಟನೆ, ಎಪಿಎಂಸಿಯಲ್ಲಿ 7 ಕೋಟಿ ವೆಚ್ಚದ ಕೋಲ್ಡ್ ಸ್ಟೋರೆಜ್ ಘಟಕದ ಭೂಮಿ ಪೂಜೆ ಹಾಗೂ ತಾಲೂಕಿನ ತಿಪ್ಪರಸನಾಳ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪಿಯು ಕಾಲೇಜಿನ ವಸತಿ ಕಾಲೇಜಿನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಯಲಬುರ್ಗಾ ಕ್ಷೇತ್ರದಲ್ಲಿ ಕಳೆದ ಹದಿನಾಲ್ಕು ತಿಂಗಳಲ್ಲಿ 12 ಪ್ರೌಢಶಾಲೆ, 6 ಪಿಯು ಕಾಲೇಜುಗಳನ್ನು ಹುದ್ದೆ ಸಮೇತ ಹಾಗು ಕಟ್ಟಡಕ್ಕೆ ಅನುದಾನ ಸಮೇತ ಮಂಜೂರು ಮಾಡಿಸಿದ್ದೇನೆ. 15 ಬಸ್ ನಿಲ್ದಾಣ, ಮೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಕುಕನೂರು ತಾಲೂಕಿನ ತಹಸೀಲ್ದಾರ ಕಟ್ಟಡಕ್ಕೆ ₹30 ಕೋಟಿ ಅನುದಾನವನ್ನು, ಕುಕನೂರು ಕುಡಿಯುವ ನೀರಿನ ಯೋಜನೆಗೆ ₹ 210 ಕೋಟಿಯನ್ನು ಮಂಜೂರು ಮಾಡಿಸಿದ್ದೇನೆ. ಕುಕನೂರಿನ ನವೋದಯ ವಿದ್ಯಾಲಯಕ್ಕೆ ₹120 ಕೋಟಿ ಕೊಡಿಸಿ ನೂತನ ಕಟ್ಟಡ ನಿರ್ಮಿಸುತ್ತೇನೆ. ಕ್ಷೇತ್ರದಲ್ಲಿ 38 ನೂತನ ಕೆರೆ ನಿರ್ಮಾಣಕ್ಕೆ ಗ್ರಾಮ ಗ್ರಾಮಗಳಲ್ಲಿ ಸಭೆ ಮಾಡಲಾಗಿದೆ. ಕೆರೆ ಹಾಗೂ ಭವನಗಳ ನಿರ್ಮಾಣಕ್ಕೆ ಜಮೀನು ಅಗತ್ಯತೆ ಇದೆ. ರೈತರು ಜಮೀನು ನೀಡಿ ಸಹಕರಿಸಬೇಕು. ಈ ಭಾಗದಲ್ಲಿ ಅನುಕೂಲ ಆಗಲೆಂದು ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಚೇರಿ ಉದ್ಘಾಟನೆ, ಎಪಿಎಂಸಿಯಲ್ಲಿ 7 ಕೋಟಿ ವೆಚ್ಚದ ಕೋಲ್ಡ್ ಸ್ಟೋರೆಜ್ ಘಟಕದ ಮಂಜೂರು ಮಾಡಿಸಿದ್ದೇನೆ. ಅಲ್ಲದೆ ಯಲಬುರ್ಗಾದಲ್ಲೂ ₹10 ಕೋಟಿಯಲ್ಲಿ ಕೋಲ್ಡ್ ಸ್ಟೋರೆಜ್ ನಿರ್ಮಾಣವಾಗಲಿದೆ ಎಂದರು.

ರಾಜ್ಯದ ರೈತರ ಪಂಪ್ ಸೆಟ್‌ಗೆ ಸೋಲಾರ್:

ರಾಜ್ಯದ 32 ಲಕ್ಷ ರೈತರ ಪಂಪ್ ಸೆಟ್‌ಗೆ ಸೋಲಾರ್ ವಿದ್ಯುತ್ ನೀಡಲು ಈಗಾಗಲೇ ರಾಜ್ಯ ಸರ್ಕಾರ ಮುಂದಾಗಿದೆ. ಶೇ.80 ರಿಯಾಯತಿಯಲ್ಲಿ ಸೋಲಾರ್ ಅಳವಡಿಕೆ ಮಾಡಿಕೊಡಲಾಗುವುದು.ಸದ್ಯ ರೈತರ ಪಂಪಸೆಟ್ ವಿದ್ಯುತ್ ಬಿಲ್ಲನ್ನು ರಾಜ್ಯ ಸರ್ಕಾರವೇ ₹13 ಸಾವಿರ ಕೋಟಿ ನೀಡಿ ಭರಿಸುತ್ತಿದೆ. ಗೃಹಜ್ಯೋತಿ ₹8500 ಕೋಟಿ ಹಾಗೂ ರೈತರ ಪಂಪ್‌ಸೆಟ್ ಬಿಲ್ 13 ಸಾವಿರ ಕೋಟಿ ಹಿಡಿದು ₹22 ಸಾವಿರ ಕೋಟಿಯನ್ನು ರಾಜ್ಯ ಸರ್ಕಾರವೇ ಪಾವತಿ ಮಾಡುತ್ತಿದೆ ಎಂದರು.

ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಲಿಂಗಣ್ಣನವರ್, ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಸುರೇಶ ಕೊಕ್ರೆ, ತಹಸೀಲ್ದಾರ ಪ್ರಾಣೇಶ, ಇಒ ಸಂತೋಷ ಬಿರಾದಾರ, ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ, ಸಿಪಿಐ ಮೌನೇಶ್ವರ ಪಾಟೀಲ್, ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರ, ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಕೆರಿಬಸಪ್ಪನಿಡಗುಂದಿ, ಸತ್ಯನಾರಾಯಣಪ್ಪ ಹರಪನ್ಹಳ್ಳಿ, ಮಂಜುನಾಥ ಕಡೇಮನಿ, ಸಿದ್ದಯ್ಯ ಕಳ್ಳಿಮಠ, ಸಂಗಮೇಶ ಗುತ್ತಿ, ಪಪಂ ಸದಸ್ಯರಾದ ಸಿರಾಜ್ ಕರಮುಡಿ, ಗಗನ ನೋಟಗಾರ, ನೂರುದ್ದೀನ್ ಗುಡಿಹಿಂದಲ್ ಇತರರಿದ್ದರು.

3ಕೆಕೆಆರ್1:

ಕುಕನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ₹7 ಕೋಟಿ ವೆಚ್ಚದ ಕೋಲ್ಡ್ ಸ್ಟೋರೆಜ್ ಘಟಕದ ನಿರ್ಮಾಣದ ಭೂಮಿ ಪೂಜೆಯ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.