ಸಾರಾಂಶ
ಬಳ್ಳಾರಿ: ಕ್ಷಯರೋಗ ನಿರ್ಮೂಲನೆಗೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಮನವಿ ಮಾಡಿದರು.ಜಿಲ್ಲಾಡಳಿತ, ಜಿಪಂ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಘಟಕಗಳ ಸಹಯೋಗದಲ್ಲಿ ಕ್ಷಯರೋಗ ಜಾಗೃತಿಗಾಗಿ ನಗರದಲ್ಲಿ ಹಮ್ಮಿಕೊಂಡಿದ್ದ 5 ಕಿ.ಮೀ. ಮ್ಯಾರಥಾನ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಯಾರಿಗಾದರೂ ಎರಡು ವಾರಗಳಿಗಿಂತ ಹೆಚ್ಚು ದಿನದ ಕೆಮ್ಮು, ಉಸಿರಾಟದಲ್ಲಿ ತೊಂದರೆ, ಸಂಜೆ ವೇಳೆ ಜ್ವರ, ರಾತ್ರಿವೇಳೆ ಮೈ ಬೆವರುವುದು, ಕಫದಲ್ಲಿ ರಕ್ತ ಬೀಳುವುದು, ಎದೆನೋವು, ಹಸಿವಾಗದಿರುವುದು, ತೂಕ ಇಳಿಕೆ, ರೋಗದ ಪ್ರಮುಖ ಲಕ್ಷಣಗಳು ತಮ್ಮ ಗಮನಕ್ಕೆ ಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ಕಫ ಪರೀಕ್ಷೆ ಮಾಡಿಸುವ ಮೂಲಕ ರೋಗವನ್ನು ಬೇಗನೆ ಪತ್ತೆ ಹಚ್ಚಲು ಸಹಕರಿಸಬೇಕು ಎಂದರು.ಒಮ್ಮೆ ಕ್ಷಯರೋಗ ಪತ್ತೆಯಾದರೆ ಅವರ ಚಿಕಿತ್ಸಾ ಅವಧಿ ಮುಗಿಯುವವರೆಗೆ ಮೇಲ್ವಿಚಾರಣೆ, ರೋಗಿಗೆ ಬೆಂಬಲ ಹಾಗೂ ದಾನಿಗಳಿಂದ ಪೌಷ್ಟಿಕ ಆಹಾರ ಒದಗಿಸಲಾಗುವುದು. ಅದರಲ್ಲೂ ಮಕ್ಕಳಿಗೆ ಕ್ಷಯರೋಗ ಇದ್ದಲ್ಲಿ ಪಾಲಕರ, ಸುತ್ತಲಿನ ಮನೆಗಳ ಮತ್ತು ಮಗುವಿಗೆ ಒಡನಾಟವಿರುವವರ ಪರೀಕ್ಷೆ ಮಾಡಲು ಕ್ರಮ ವಹಿಸಬೇಕು ಎಂದು ತಿಳಿಸಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ, ರೋಗ ಖಚಿತ ಪಟ್ಟವರನ್ನು ಚಿಕಿತ್ಸೆ ಮುಗಿಯುವವರೆಗೂ ಮೇಲ್ವಿಚಾರಣೆ ಕೈಗೊಳ್ಳಲಾಗುವುದು. ಚಿಕಿತ್ಸೆ ನಿರ್ಲಕ್ಷಿಸಿದಲ್ಲಿ ರೋಗಿಯು ಬಹು ಔಷಧಿ ರೋಗ ನಿರೋಧಕ ಕ್ಷಯರೋಗಿಯಾಗಿ ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ಹೇಳಿದರು.ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮೈಕ್ರೋ ಬಯೋಲಜಿ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ ವಿಮ್ಸ್ ಆವರಣದಲ್ಲಿ ಚಾಲನೆ ನೀಡಿದರು.ಮ್ಯಾರಥಾನ್ ವಿಮ್ಸ್ ನಿಂದ ಆರಂಭವಾಗಿ ಸುಧಾ ವೃತ್ತದ ಮೂಲಕ ಎಚ್.ಆರ್. ಗವಿಯಪ್ಪ ವೃತ್ತದ ಮಾರ್ಗವಾಗಿ ಹಳೇ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಬಂದು ಜಿಲ್ಲಾಸ್ಪತ್ರೆಯ ಆವರಣಕ್ಕೆ ಆಗಮಿಸಿ ಮುಕ್ತಾಯಗೊಂಡಿತು.ವಿಮ್ಸ್ ತಜ್ಞ ವೈದ್ಯರಾದ ಡಾ.ಮಲ್ಲಿಕಾರ್ಜುನ, ಡಾ.ರಘುವೀರ, ಡಾ.ಅನಿಲಕುಮಾರ ಜೋಸೆಫ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ವೈದ್ಯ ವಿದ್ಯಾರ್ಥಿ ಸಂಘದ ಡಾ.ಲೋಕೇಶ್, ಡಾ.ಗೌರಿ, ಡಾ.ಪ್ರಸನ್ನ, ಡಾ.ಸಂತೋಷ ಹಾವೇರಿ, ಕ್ಷಯರೋಗ ಕಾರ್ಯಕ್ರಮದ ವಿಭಾಗದ ಪಂಪಾಪತಿ, ಓಬಳರೆಡ್ಡಿ, ಬಸವರಾಜ ರಾಜಗುರು, ಪ್ರದೀಪ್, ಚಂದ್ರಶೇಖರ, ಅಂದಾನಪ್ಪ ಅಂಡಿಗೇರಿ, ರಾಮಾಂಜನೇಯಲು, ವೀರೇಶ್ ಸೇರಿದಂತೆ ನೂರಾರು ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮಹಿಳಾ ವಿಭಾಗದಲ್ಲಿ ಡಾ.ವಂದನಾ, ಡಾ.ನಿಸರ್ಗ, ಡಾ.ರಂಜೀತಾ ಪಾಟೀಲ್ ಹಾಗೂ ಪುರುಷರ ವಿಭಾಗದಲ್ಲಿ ಡಾ.ಜೈಕುಮಾರ್.ಟಿ, ಡಾ.ಅಖೀಲ್, ಡಾ.ಮಲ್ಲನಗೌಡ ಅವರು ಬಹುಮಾನ ಪಡೆದರು.