ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕ್ಷಯ ರೋಗ ವಾಸಿಯಾಗುವ ಕಾಯಿಲೆಯಾಗಿದ್ದು, ಈ ಬಗ್ಗೆ ಅನಗತ್ಯ ಆತಂಕ ಬೇಡ. ಎಲ್ಲರೂ ಒಗ್ಗೂಡಿ ಕ್ಷಯರೋಗದ ವಿರುದ್ಧ ಹೋರಾಟ ನಡೆಸಿ ಕ್ಷಯಮುಕ್ತ ಸಮಾಜ ನಿರ್ಮಿಸೋಣ ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕ್ಷಯರೋಗ ಚಿಕಿತ್ಸೆ ಸಂಪೂರ್ಣಗೊಳಿಸಿ ಕ್ಷಯಮುಕ್ತರಾದವರೊಂದಿಗೆ ಟಿಬಿ ಚಾಂಪಿಯನ್ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ, ಕ್ಷಯರೋಗದ ಬಗ್ಗೆ ಇನ್ನೂ ಸಾಮಾಜಿಕ ಕಳಂಕವಿದೆ. ಕೆಲವರಂತು ಕ್ಷಯರೋಗ ತಪಾಸಣೆ ಮಾಡಿಸಲು, ಚಿಕಿತ್ಸೆ ಪಡೆಯಲು ಹಿಂಜರಿಕೆ ವ್ಯಕ್ತಪಡಿಸುತ್ತಿದ್ದು ಇದು ಸರಿಯಾದ ನಡವಳಿಕೆಯಲ್ಲ ಎಂದರು.
ಕೆಲವರು ಕ್ಷಯರೋಗವಿದೆ ಎಂದು ಗೊತ್ತಾದರೆ ಸಾಮಾಜಿಕ ಸ್ಥಾನಮಾನ ಕಡಿಮೆಯಾಗುತ್ತದೆ ಎಂದು ಗೌಪ್ಯತೆ ಕಾಪಾಡುತ್ತಾರೆ. ಕ್ಷಯರೋಗ ಯಾವುದೇ ಶಾಪ ಪಾಪದಿಂದ ಬರುವ ರೋಗವಲ್ಲ. ಇದು ಸೂಕ್ಷ್ಮಾಣು ಜೀವಿಯಿಂದ ಬರುವ ರೋಗವಾಗಿದ್ದು, ನಿರ್ದಿಷ್ಟ ಅವಧಿಗೆ ಔಷಧಗಳನ್ನು ಚಾಚೂ ತಪ್ಪದೇ ಸೇವಿಸಿದಾಗ 6 ರಿಂದ 8 ತಿಂಗಳವರೆಗೆ ಸಂಪೂರ್ಣ ವಾಸಿ ಮಾಡಬಹುದಾಗಿದೆ ಎಂದರು.ಔಷಧ ಅವಧಿ ಸಂಪೂರ್ಣ ಮುಗಿಸಿ ಗುಣಮುಖರಾದ ತಾವುಗಳು ಗ್ರಾಮಗಳಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಸಮಾಜವನ್ನು ಕ್ಷಯ ಮುಕ್ತ ಮಾಡಲು ನಿಮಗೆ ಟಿಬಿ ಚಾಂಪಿಯನ್ ತರಬೇತಿ ನೀಡುತ್ತಿದ್ದೇವೆ. ಯಶೋಗಾಥೆಯನ್ನು ಸಮುದಾಯಕ್ಕೆ ನಿಮ್ಮಿಂದಲೇ ತಿಳಿಸಿದಾಗ ಕ್ಷಯರೋಗದ ಬಗ್ಗೆ ಇರುವ ಸಾಮಾಜಿಕ ಕಳಂಕ ದೂರವಾಗಿರುತ್ತದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಕ್ಷಯರೋಗಕ್ಕೆ ನಿರ್ದಿಷ್ಟವಾದ ಬಹುಔಷಧ ಚಿಕಿತ್ಸೆ ಸರ್ಕಾರದಿಂದ ಲಭ್ಯವಿದೆ. ನಿಮ್ಮ ಪೌಷ್ಟಿಕ ಆಹಾರ ಅಗತ್ಯತೆಗಾಗಿ ಚಿಕಿತ್ಸೆ ಪೂರ್ಣವಾಗುವವರೆಗೆ ಮಾಸಿಕ ₹500 ಪ್ರೋತ್ಸಾಹ ಧನಸಹಾಯ ಡಿಬಿಟಿ ಮೂಲಕ ಖಾತೆಗೆ ಜಮೆ ಮಾಡಲಾಗುತ್ತದೆ. ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗ ಪತ್ತೆ ಉಚಿತ ಚಿಕಿತ್ಸೆ, ನಿಗದಿತ ಅವಧಿಯ ಚಿಕಿತ್ಸೆಯಿಂದ ಕ್ಷಯರೋಗ ಗುಣಪಡಿಸಬಹುದು ಎಂದರು.ಇದೇ ವೇಳೆ ಟಿಬಿ ಗುಣಮುಖರಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಬಿ.ಜಾನಕಿ, ಚಿತ್ತದುರ್ಗ ತಾಲೂಕು ಕ್ಷಯರೋಗ ವಿಭಾಗದ ಎಸ್‍ಟಿಎಸ್‍ಗಳಾದ ಮಹೇಂದ್ರ, ಲೋಕೇಶ್, ಎಸ್‍ಟಿಎಲ್‍ಎಸ್‍ಗಳಾದ ಮಾರುತಿ, ನಾಗರಾಜ್ ಇದ್ದರು.