ಕ್ಷಯರೋಗ ಗುಣಪಡಿಸಬಹುದಾದ ಕಾಯಿಲೆ: ಡಾ. ನಿಡಗುಂದಿ

| Published : Mar 28 2025, 12:34 AM IST

ಸಾರಾಂಶ

ಇಂದಿನ ಯುವಕರೇ ದೇಶದ ಉತ್ತಮ ಪ್ರಜೆಗಳು. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಕೈಜೋಡಿಸಬೇಕಾಗಿದೆ.

ಬ್ಯಾಡಗಿ: ಕ್ಷಯರೋಗವು ಸೂಕ್ತ ವೈದ್ಯಕೀಯ ಚಿಕಿತ್ಸೆಯಿಂದ ತಡೆಗಟ್ಟಬಹುದಾದ ಹಾಗೂ ಗುಣಪಡಿಸಬಹುದಾದ ರೋಗವಾಗಿದ್ದು, ನಿರಂತರ ಕೆಮ್ಮು, ಜ್ವರ, ಎದೆನೋವು, ತೂಕದಲ್ಲಿ ಗಮನಾರ್ಹ ಇಳಿಕೆ ರೋಗದ ಲಕ್ಷಣಗಳಾಗಿದ್ದು, ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ರೋಗದಿಂದ ಮುಕ್ತವಾಗುವಂತೆ ಡಾ. ಎಸ್.ಎನ್. ನಿಡಗುಂದಿ ತಿಳಿಸಿದರು.

ಪಟ್ಟಣದ ಬಿಇಎಸ್ಎಂ ಕಾಲೇಜು ಸಭಾಭವನದಲ್ಲಿ ಕ್ಷಯರೋಗ ಮುಕ್ತ ಭಾರತ ಅಭಿಯಾನದ ಅಂಗವಾಗಿ ರೋಟರಿ ಕ್ಲಬ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷಯರೋಗ(ಟಿಬಿ) ಎಂಬುದು ಟ್ಯುಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆ, ಶ್ವಾಸಕೋಶದ ಮೇಲೆ ಇದು ಹೆಚ್ಚು ಪರಿಣಾಮ ಬೀರುತ್ತದೆ. ಬೆನ್ನುಮೂಳೆ, ಮೆದುಳು ಮೂತ್ರಪಿಂಡಗಳ ಮೇಲೂ ಪರಿಣಾಮ ಸಾಧ್ಯತೆ ಇರುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡಿದಾಗ ಗಾಳಿಯ ಮೂಲಕ ಕ್ಷಯರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡಲಿದ್ದು, ಅನುಮಾನಿತ ವ್ಯಕ್ತಿಗಳಿಂದ ನಿಗದಿತ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಎಂ.ಎನ್. ನೀಲೇಶ ಮಾತನಾಡಿ, ಇಂದಿನ ಯುವಕರೇ ದೇಶದ ಉತ್ತಮ ಪ್ರಜೆಗಳು. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಕೈಜೋಡಿಸಬೇಕಾಗಿದೆ. ಕಾಲೇಜುಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಇಂತಹ ಲಕ್ಷಣವಿರುವ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತಿಳಿಸಬೇಕು ಅಥವಾ ಯಾರಾದರೂ ಸಹಾಯ ಕೇಳಿದರೆ ಕೂಡಲೆ ಕ್ಷಯರೋಗ ನಿಯಂತ್ರಣ ಘಟಕಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ರೋಟರಿ ಕ್ಲಬ್ ವತಿಯಿಂದ ಕ್ಷಯರೋಗಿಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿದ ಮಾತನಾಡಿದ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಕ್ಲಬ್ಬಿನ ಸದಸ್ಯರ ಆರ್ಥಿಕ ಸಹಕಾರದಿಂದ ಎಲ್ಲ ಕ್ಷಯರೋಗಿಗಳಿಗೆ ಉಚಿತವಾಗಿ ಪೌಷ್ಟಿಕಾಂಶಯುಕ್ತ ಕಿಟ್ ವಿತರಿಸಲಾಗಿದೆ. ಇದಕ್ಕೆ ಸಹಕರಿಸಿದ ಸದಸ್ಯರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಪ್ರಾಚಾರ್ಯ ಡಾ. ಎಸ್‌.ಜಿ. ವೈದ್ಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ್ ಭಜಂತ್ರಿ, ಹಿರಿಯ ಮೇಲ್ವಿಚಾರಕ ಜೆ.ಪಿ. ವಿನಾಯಕ, ರೋಟರಿ ಕ್ಲಬ್ ಖಜಾಂಚಿ ವೀರೇಶ ಬಾಗೋಜಿ ಸದಸ್ಯ ಕಿರಣ ಮಾಳೇನಹಳ್ಳಿ ಕಾಲೇಜು ಉಪನ್ಯಾಸಕರಾದ ಎನ್.ಎಸ್. ಪ್ರಶಾಂತ್, ಸುರೇಶಕುಮಾರ ಪಾಂಗಿ, ಪ್ರಭು ದೊಡ್ಮನಿ, ಜ್ಯೋತಿ ಹಿರೇಮಠ, ಎ.ಎಸ್. ರಶ್ಮಿ, ನಿವೇದಿತ ವಾಲಿಶೆಟ್ಟರ, ಅಂಬಿಕಾ ನವಲೆ ಸೇರಿದಂತೆ ಕಾಲೇಜಿನ ಶಿಕ್ಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಇಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಶಿಗ್ಗಾಂವಿ: ಹುಬ್ಬಳ್ಳಿಯ ಕೆಎಲ್ಇ ಜಗದ್ಗುರು ಗಂಗಾಧರ ಸ್ವಾಮಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ, ಕೆಎಲ್ಇ ಆಸ್ಪತ್ರೆಯ ಆಶ್ರಯದಲ್ಲಿ ಶಿಗ್ಗಾಂವಿ ಪಟ್ಟಣದ ಹೊಸ ಬಸ್ ನಿಲ್ದಾಣ ಪಕ್ಕದಲ್ಲಿರುವ ಕೆಎಲ್ಇ ಸ್ಪೆಷೆಲಿಸ್ಟ್ ಸ್ಟಾಟಲೈಟ್ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವು ಮಾ. ೨೮ರಂದು ಬೆಳಗ್ಗೆ ೧೦ರಿಂದ ಸಂಜೆ ೪ರ ವರೆಗೆ ನಡೆಯಲಿದೆ ಎಂದು ಹುಬ್ಬಳ್ಳಿಯ ಕೆಎಲ್ಇ ಜೆಜಿ ಎಂಎಂಸಿ ಪ್ರಾಂಶುಪಾಲ ಡಾ. ಎಂ.ಜಿ. ಹಿರೇಮಠ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ. ೨೮ರಂದು ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಎಲ್ಇ ಚೇರ್ಮನ್ ಡಾ. ಪ್ರಭಾಕರ್ ಕೋರೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಂಕ್ರಣ್ಣ ಮುನವಳ್ಳಿ, ಡಾ. ಪ್ರೊ. ನಿತಿನ್ ಗಂಗಾನೆ, ಡಾ. ಪ್ರೊ. ವಿ.ಡಿ. ಪಾಟೀಲ ಆಗಮಿಸಲಿದ್ದಾರೆ ಎಂದರು.ಈ ಆಸ್ಪತ್ರೆಯಲ್ಲಿ ಉಚಿತವಾಗಿ ವಾರದ ಐದು ದಿನಗಳ ಕಾಲ ವೈದ್ಯಕೀಯ ಸೇವೆ ನಡೆಯಲಿದೆ. ಸೋಮವಾರ ಮತ್ತು ಗುರುವಾರ ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ಸಾಮಾನ್ಯ ಶಸ್ತ್ರಚಿಕಿತ್ಸೆ ತಪಾಸಣೆ ನಡೆಯಲಿದೆ. ಮಂಗಳವಾರ ಚಿಕ್ಕಮಕ್ಕಳ ತಪಾಸಣೆ, ಚರ್ಮರೋಗ ಮಾನಸಿಕ ರೋಗಿಗಳ ತಪಾಸಣೆ ನಡೆಯಲಿದೆ.

ಬುಧವಾರ ಪ್ರಸೂತಿ ಮತ್ತು ಸ್ತ್ರೀರೋಗ, ಎಲುಬು ಮತ್ತು ಕೀಲುಗಳ ತಪಾಸಣೆ. ಫಿಸಿಯೋಥೆರಪಿ, ಹೃದಯರೋಗ ತಪಾಸಣೆ, ಶುಕ್ರವಾರ ಕಣ್ಣು, ಕಿವಿ, ಮೂಗು, ಗಂಟಲು, ದಂತ ತಪಾಸಣೆ ಇರುತ್ತದೆ. ಪ್ರತಿದಿನವೂ ಹುಬ್ಬಳ್ಳಿಯ ಕೆಎಲ್ಇ ವೈದ್ಯಕೀಯ ಸಂಸ್ಥೆಯ ತಜ್ಞ ವೈದ್ಯರ ತಂಡ ತಪಾಸಣೆಗೆ ಬರಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಿಗ್ಗಾಂವಿ ಕೆಎಲ್ಇ ಸ್ಪೆಷೆಲಿಸ್ಟ್ ಸ್ಟಾಟಲೈಟ್ ಪಾಲಿಕ್ಲಿನಿಕ್ ಅಧಿಕಾರಿ ಬಸವರಾಜ ಸಜ್ಜನ ಸೇರಿದಂತೆ ಹಲವರು ಇದ್ದರು.