ತುಕಾರಾಂ ಹೆಸರು ಘೋಷಣೆಯಿಂದ ಶ್ರೀರಾಮುಲುಗೆ ನಡುಕ: ಸಚಿವ ನಾಗೇಂದ್ರ

| Published : Apr 02 2024, 01:00 AM IST

ತುಕಾರಾಂ ಹೆಸರು ಘೋಷಣೆಯಿಂದ ಶ್ರೀರಾಮುಲುಗೆ ನಡುಕ: ಸಚಿವ ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯಲ್ಲಿ ರಾಜಕೀಯ ತಂತ್ರ ಮಾಡುವುದು ಸಹಜ. ನಾವು ತಂತ್ರಗಾರಿಕೆ ಮಾಡುತ್ತಿದ್ದೇವೆಯೇ ವಿನಃ ಶ್ರೀರಾಮುಲು ಹೇಳಿದಂತೆ ಯಾವುದೇ ಷಡ್ಯಂತ್ರ ರೂಪಿಸುತ್ತಿಲ್ಲ.

ಬಳ್ಳಾರಿ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ.ತುಕಾರಾಂ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ನಡುಕು ಶುರುವಾಗಿದೆ ಎಂದು ಜಿಲ್ಲಾ ಸಚಿವ ಬಿ.ನಾಗೇಂದ್ರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವುದು ಖಚಿತ. ಅವರು ಗೆಲ್ಲಲು ಬಿಡುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದಾಗಿ ಎಐಸಿಸಿ ಹಾಗೂ ಕೆಪಿಸಿಸಿ ನಾಯಕರಿಗೆ ಮಾತು ಕೊಟ್ಟಿದ್ದೇವೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರು ಒಗ್ಗೂಡಿ ಕಾರ್ಯನಿರ್ವಹಿಸುತ್ತೇವೆ. ಯಾವುದೇ ಕಾರಣಕ್ಕೂ ಶ್ರೀರಾಮುಲು ಲೋಕಸಭಾ ಪ್ರವೇಶ ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದರು.

ಈಗಾಗಲೇ ನಾಲ್ಕು ಬಾರಿ ಶಾಸಕರಾಗಿ ಅಪಾರ ಅನುಭವ ಇರುವ ಈ.ತುಕಾರಾಂ ಕಾಂಗ್ರೆಸ್ ಅಭ್ಯರ್ಥಿ ಎಂದು ಗೊತ್ತಾಗುತ್ತಿದ್ದಂತೆಯೇ ಶ್ರೀರಾಮುಲುಗೆ ಸೋಲಿನ ಅನುಭವವಾಗಿದೆ ಎಂದು ವ್ಯಂಗ್ಯವಾಡಿದರು.

ಚುನಾವಣೆಯಲ್ಲಿ ರಾಜಕೀಯ ತಂತ್ರ ಮಾಡುವುದು ಸಹಜ. ನಾವು ತಂತ್ರಗಾರಿಕೆ ಮಾಡುತ್ತಿದ್ದೇವೆಯೇ ವಿನಃ ಶ್ರೀರಾಮುಲು ಹೇಳಿದಂತೆ ಯಾವುದೇ ಷಡ್ಯಂತ್ರ ರೂಪಿಸುತ್ತಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಆದಾಯ ತೆರಿಗೆ (ಐಟಿ) ದಾಳಿಗಳ ಮೂಲಕ ಬೆದರಿಸುತ್ತಿದೆ. ಕೇಂದ್ರದ ನಡೆಯನ್ನು ನಾಡಿನ ಜನರು ನೋಡುತ್ತಿದ್ದಾರೆ. ಪಕ್ಷ ನಡೆಸಿದ ಆಂತರಿಕ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದರು.

ಶ್ರೀರಾಮುಲು-ಶಾಂತಾ ಮಾಡಿದ್ದೇನು?:

ಶ್ರೀರಾಮುಲು ಹಾಗೂ ಜೆ.ಶಾಂತಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ, ಬಳ್ಳಾರಿ ಜಿಲ್ಲೆಗೆ ಅವರು ಮಾಡಿದ ಅಭಿವೃದ್ಧಿ ಕೆಲಸವೇನು? ಈ ಇಬ್ಬರು ಎಂದಾದರೂ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜನರ ಕಷ್ಟ ಸುಖ ಕೇಳಿದರಾ? ತಾಲೂಕು ಕೇಂದ್ರಗಳಿಗಾದರೂ ಭೇಟಿ ನೀಡಿದರಾ ಎಂದು ಶಾಸಕ ಜೆ.ಎನ್. ಗಣೇಶ್ ಪ್ರಶ್ನಿಸಿದರು.

ಚುನಾವಣೆ ಸಮಯದಲ್ಲಿ ಬಿಜೆಪಿಯವರು ನಾಟಕ ಶುರು ಮಾಡುತ್ತಾರೆ. ಬೀದಿಯಲ್ಲಿ ಟೀ ಕುಡಿಯುವುದು, ಬಡವರ ಕಷ್ಟ ಕೇಳುವುದು, ಜನಸಾಮಾನ್ಯರ ಜೊತೆ ಬೆರೆಯುವುದು ಮಾಡುತ್ತಾರೆ. ಚುನಾವಣೆ ಮುನ್ನ ಏಕೆ ಬಡವರು ನೆನಪಾಗುವುದಿಲ್ಲ ಎಂದು ಬಿ.ಶ್ರೀರಾಮುಲು ವಿರುದ್ಧ ಹರಿಹಾಯ್ದರು.

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ ಮಾತನಾಡಿ, ಕರುಣಾಕರ ರೆಡ್ಡಿಯಿಂದ ಹಿಡಿದು ವೈ.ದೇವೇಂದ್ರಪ್ಪಗೆ ಬಿಜೆಪಿಯ ಲೋಕಸಭಾ ಸದಸ್ಯರು ಬಳ್ಳಾರಿ ಜಿಲ್ಲೆಗೆ ಮಾಡಿದ ಕೆಲಸವೇನು? ಅಭಿವೃದ್ಧಿಗೆ ಇವರ ಕೊಡುಗೆ ಏನು ಎಂಬುದು ಇಡೀ ಜಿಲ್ಲೆಗೆ ಗೊತ್ತಿದೆ. ಇವರ ವೈಫಲ್ಯವೇ ನಮಗೆ ಶ್ರೀರಕ್ಷೆಯಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಕೆಎಸ್‌ಎಲ್ ಸ್ವಾಮಿ, ಅಲ್ಲಂ ಪ್ರಶಾಂತ್, ಮುಂಡ್ರಗಿ ನಾಗರಾಜ್, ಶ್ವೇತಾ, ಶಿವಯೋಗಿ, ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯಲು, ರಾಮಪ್ರಸಾದ್, ಪಕ್ಷದ ಜಿಲ್ಲಾಧ್ಯಕ್ಷ ಮಹ್ಮದ್ ರಫೀ, ವೆಂಕಟೇಶ್ ಹೆಗಡೆ ಇದ್ದರು.