ಎಲ್ಲರನ್ನು ಬೇಗನೆ ಸೆಳೆಯುವ ಪ್ರೀತಿಯ ಭಾಷೆ ತುಳು: ಡಾ.ವೀರೇಂದ್ರ ಹೆಗ್ಗಡೆ

| Published : Aug 15 2025, 01:01 AM IST

ಸಾರಾಂಶ

‘ನಮ್ಮ ಕುಡ್ಲ ತುಳು ಚಾನೆಲ್‌’ ಮಂಗಳೂರು ಪುರಭವನದಲ್ಲಿ ಮಂಗಳವಾರ ಏರ್ಪಡಿಸಿದ ‘ಬೊಳ್ಳಿ ಪರ್ಬ-2025’ ಸಾಧನೆಯ ಸಂಭ್ರಮ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಅಧ್ಯಕ್ಷತೆ ವಹಿಸಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು.

ಮಂಗಳೂರು: ತುಳು ಅತ್ಯಂತ ಪ್ರೀತಿಯ ಭಾಷೆಯಾಗಿದ್ದು, ಸರಳ ರೀತಿಯಲ್ಲಿ ಎಲ್ಲರನ್ನೂ ಬೇಗನೆ ಸೆಳೆಯುತ್ತದೆ. ಅಂತಹ ತುಳು ಭಾಷೆಯಲ್ಲಿ ಸುದ್ದಿಯನ್ನು ಪ್ರಸಾರ ಮಾಡುವುದಲ್ಲದೆ, ನಾಡಿನ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ಈ ಚಾನೆಲ್‌ನ ಶ್ರಮ ಅಭಿನಂದನೀಯ ಎಂದು ರಾಜ್ಯಸಭಾ ಸದಸ್ಯ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

‘ನಮ್ಮ ಕುಡ್ಲ ತುಳು ಚಾನೆಲ್‌’ ಮಂಗಳೂರು ಪುರಭವನದಲ್ಲಿ ಮಂಗಳವಾರ ಏರ್ಪಡಿಸಿದ ‘ಬೊಳ್ಳಿ ಪರ್ಬ-2025’ ಸಾಧನೆಯ ಸಂಭ್ರಮ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೆ ದೃಶ್ಯ ಮಾಧ್ಯಮ ಅಷ್ಟಾಗಿ ಬೆಳೆದಿರದ ದಿನಗಳಲ್ಲಿ ಸ್ಥಳೀಯ ಚಾನೆಲ್‌ ಆಗಿ ದಿನೇ ದಿನೇ ಪ್ರಗತಿ ಹೊಂದುತ್ತಾ ಈಗ ಎಲ್ಲ ಕಡೆಗಳಿಗೆ ವಿಸ್ತರಣೆಗೊಳ್ಳುತ್ತಿರುವುದು ಸಂತಸದ ಸಂಗತಿ. ಕರಾವಳಿಯ ತುಳುನಾಡಿನಲ್ಲಿ ಮಾತೃ ಭಾಷೆಯಲ್ಲಿ ಸುದ್ದಿ ಪ್ರಸಾರಕ್ಕೆ ಮನ್ನಣೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ ಆಳ್ವ ಮಾತನಾಡಿ, ಸತ್ಯ, ನ್ಯಾಯ, ಧರ್ಮ ಹಾಗೂ ಚತುರ್ದಾನಗಳಿಗೆ ಹೆಸರಾದ ಧರ್ಮಸ್ಥಳಕ್ಕೆ ಪುರಾತನ ಇತಿಹಾಸ ಇದೆ. ಕಳೆದ 55 ವರ್ಷಗಳಿಂದ ಧರ್ಮಾಧಿಕಾರಿಯಾಗಿ ಡಾ.ವೀರೇಂದ್ರ ಹೆಗ್ಗಡೆ ಅವರು ಅದ್ಭುತ ಕೆಲಸ ಮಾಡಿದ್ದಾರೆ. ಈ ಮೂಲಕ ಜಿಲ್ಲೆಗೆ ಗೌರವ ತಂದಿದ್ದಾರೆ. ಅವರ ದಾಖಲೆಯ ಅಭಿವೃದ್ಧಿ ಕಾರ್ಯಗಳು ಸಂತಸದಾಯಕ ಎಂದರು.

ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಮಂಗಳೂರು ಧರ್ಮಪ್ರಾಂತ್ಯ ಬಿಷಪ್‌ ರೆ.ಫಾ. ಡಾ.ಪೀಟರ್‌ ಪಾವ್ಲ್‌ ಸಲ್ದಾನಾ ಆಶೀರ್ವಚನ ನೀಡಿದರು.

ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್‌, ವಿನಯ ಕುಮಾರ್‌ ಸೊರಕೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಮಂಗಳೂರು ಎಸ್‌.ಎಲ್‌.ಶೇಟ್‌ ಜುವೆಲ್ಲರ್ಸ್‌ ಅಂಡ್‌ ಡೈಮಂಡ್ಸ್‌ ಮಾಲೀಕ ಪ್ರಶಾಂತ್ ಶೇಟ್‌, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡಾ, ಅಬ್ದುಲ್‌ ರಹಿಮಾನ್‌ ಕರ್ನಿರೆ, ಡಾ.ನವೀನ್‌ ಕುಮಾರ್,ಉದಯ ಶೆಟ್ಟಿ ಮುನಿಯಾಲ್‌, ಸಿನಿಮಾ ನಟ ಸುಮನ್‌ ತಲ್ವಾರ್‌, ಚಿತ್ರ ನಿರ್ದೇಶಕ ವಿಜಯ ಕುಮಾರ್‌ ಕೊಡಿಯಾಲಬೈಲ್‌, ನಮ್ಮ ಕುಡ್ಲ ಚಾನೆಲ್‌ ನಿರ್ದೇಶಕರಾದ ಸುರೇಶ್‌ ಬಿ.ಕರ್ಕೇರ, ಲೀಲಾಕ್ಷ ಕರ್ಕೇರ ಮತ್ತಿತರರಿದ್ದರು.

ಈ ಸಂದರ್ಭ ಬೊಳ್ಳಿ ಮುಗಿಲು ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ನಿತಿನ್‌ ಸಾಲ್ಯಾನ್‌ ನಿರೂಪಿಸಿದರು.