ನೀನಾಸಂ ರಂಗಾಯಣ ತರಬೇತಿ ಕೇಂದ್ರಗಳಂತೆ ತುಳು ರಂಗಭೂಮಿಗೂ ತರಬೇತಿ ಕೇಂದ್ರದ ಅಗತ್ಯವಿದೆ. ಹೊಸ ಕಲಾವಿದರು ಈ ಕ್ಷೇತ್ರಕ್ಕೆ ಪರಿಚಯವಾಗಬೇಕಿದೆ. ಇತ್ತೀಚೆಗೆ ಸ್ಥಳೀಯ ಟಿವಿ ಶೋಗಳು ಈ ರೀತಿಯ ಕೆಲಸಕ್ಕೆ ತೊಡಗಿವೆ ಎಂದು ತುಳು ನಾಟಕ ಮತ್ತು ಸಿನೆಮಾ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್ ಹೇಳಿದರು.

ಉಳ್ಳಾಲ: ನೀನಾಸಂ ರಂಗಾಯಣ ತರಬೇತಿ ಕೇಂದ್ರಗಳಂತೆ ತುಳು ರಂಗಭೂಮಿಗೂ ತರಬೇತಿ ಕೇಂದ್ರದ ಅಗತ್ಯವಿದೆ. ಹೊಸ ಕಲಾವಿದರು ಈ ಕ್ಷೇತ್ರಕ್ಕೆ ಪರಿಚಯವಾಗಬೇಕಿದೆ. ಇತ್ತೀಚೆಗೆ ಸ್ಥಳೀಯ ಟಿವಿ ಶೋಗಳು ಈ ರೀತಿಯ ಕೆಲಸಕ್ಕೆ ತೊಡಗಿವೆ ಎಂದು ತುಳು ನಾಟಕ ಮತ್ತು ಸಿನೆಮಾ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ವತಿಯಿಂದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ತುಳು ವಿಭಾಗ ಮತ್ತು ಕನ್ನಡ ವಿಭಾಗದ ಸಹಕಾರದಲ್ಲಿ ವಿಶ್ವವಿದ್ಯಾಲಯದ ಲ್ಲಿ ನಡೆದ ‘ಪ್ರಚಾರೋಪನ್ಯಾಸ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ತುಳು ರಂಗಭೂಮಿ ಯಶಸ್ವಿಯಾಗಲು ಮುಖ್ಯ ಕಾರಣ ಈ ಮಣ್ಣಿನ ಸತ್ವ, ಜನಪದೀಯ ಕತೆಗಳು. ತುಳು ನಾಟಕಗಳನ್ನು ಏಕಕಾಲಕ್ಕೆ 20,000 ಪ್ರೇಕ್ಷಕರು ವೀಕ್ಷಿಸಿದ ದಾಖಲೆಗಳಿವೆ. ತುಳು ರಂಗಭೂಮಿಗೆ ಶ್ರೀಮಂತ, ಮಧ್ಯಮ ಮತ್ತು ಬಡ ವರ್ಗ ಹೀಗೆ ಎಲ್ಲ ರೀತಿಯ ಕಲಾಭಿಮಾನಿಗಳಿದ್ದಾರೆ. ಇದು ನಮ್ಮ ರಂಗಭೂಮಿಯ ವಿಶೇಷತೆ. ಹಿಂದೆ ಗದ್ದೆಗಳಲ್ಲಿ ಊರಿನ ಸಂಘ ಸಂಸ್ಥೆಗಳ ಮೂಲಕ ನಾಟಕಗಳು ನಡೆಯುತ್ತಿದ್ದವು ಎಂದು ನೆನಪಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಧವ ತಿಂಗಳಾಯರ ‘ಜನಮರ್ಲ್’ ನಾಟಕದಿಂದ ತುಳು ರಂಗಭೂಮಿಯ ಪಯಣ ಆರಂಭವಾಗಿದ್ದು, ಇಂದು ಅತೀ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ಕ್ಷೇತ್ರವಾಗಿದೆ. ಸಮಾಜದ ಕೆಲವು ನ್ಯೂನ್ಯತೆಗಳ ವಿರುದ್ಧ, ಅದರ ಪರಿಣಾಮಗಳ ಸಂದೇಶವನ್ನು ಹಂಚುವ ಉದ್ದೇಶ ತುಳು ರಂಗಭೂಮಿಯ ಆರಂಭದಲ್ಲಿ ಇತ್ತು ಎಂದರು.

ಸಂತ ಅಲೋಶಿಯಸ್ ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನದ ಸಹಾಯಕ ಡೀನ್ ಡಾ.ದಿನೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ನಾಟಕಗಳಲ್ಲಿ ಬರುವ ಹಾಸ್ಯಗಳಲ್ಲೂ ಸಮಾಜದ ಗಂಭೀರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ. ಪ್ರೇಕ್ಷಕರ ಗಳಿಕೆಯೇ ತುಳು ನಾಟಕಗಳ ಶಕ್ತಿ ಎಂದರು. ತುಳು ವಿಭಾಗದ ಉಪನ್ಯಾಸಕಿ ಪ್ರಶಾಂತಿ ಬಿ.ಶೆಟ್ಟಿ ಇರುವೈಲು ಇದ್ದರು.

ತುಳು ಪೀಠದ ಪ್ರಸಾದ್ ಅಂಚನ್ ವಂದಿಸಿದರು. ಕನ್ನಡ ಎಂ.ಎ. ವಿದ್ಯಾರ್ಥಿನಿ ಶ್ರುತಿ ನಿರೂಪಿಸಿದರು.-----