ಮಂಗಳೂರು: ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಮ್‌ಯು), ಯುಎಇ ಮತ್ತು ಪೋಲಂಡ್‌ನ ಮೆಡಿಕಲ್ ಯುನಿವರ್ಸಿಟಿ ಆಫ್ ಲುಬ್ಲಿನ್ ನಡುವಿನ ಶೈಕ್ಷಣಿಕ ಸಹಭಾಗಿತ್ವದಡಿ ನಡೆಯುತ್ತಿರುವ ತುಂಬೆ ಇಂಟರ್‌ನ್ಯಾಷನಲ್ ಪಾತ್‌ವೇ-ಪೋಲಂಡ್ ಕಾರ್ಯಕ್ರಮ ತನ್ನ ಯಶಸ್ವಿ ದಶಕವನ್ನು ಆಚರಿಸುತ್ತಿದೆ. ಈ ಅವಧಿಯಲ್ಲಿ ಕಾರ್ಯಕ್ರಮ ೯೦ ವೈದ್ಯರನ್ನು ರೂಪಿಸಿದ್ದು, ಅವರು ಪ್ರಸಕ್ತ ವಿಶ್ವದ ವಿವಿಧ ದೇಶಗಳಲ್ಲಿ ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ.ಇತ್ತೀಚೆಗೆ ಪೋಲಂಡ್‌ನ ಲುಬ್ಲಿನ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ನೂತನ ಪದವೀಧರರನ್ನು ಗೌರವಿಸುವ ಮೂಲಕ ಕಾರ್ಯಕ್ರಮದ ಹತ್ತು ವರ್ಷಗಳ ಸಾಧನೆಯನ್ನು ಸ್ಮರಿಸಲಾಯಿತು.೨೦೧೭ರಲ್ಲಿ ಕೇವಲ ೨೭ ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಕಾರ್ಯಕ್ರಮ ಇಂದು ಅಂತಾರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿ ಮತ್ತು ವಿಶ್ವಾಸಾರ್ಹ ಮಾದರಿಯಾಗಿ ಬೆಳೆದಿದೆ. ಈ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಮೊದಲ ಮೂರು ವರ್ಷಗಳನ್ನು ಯುಎಇಯ ಅಜ್ಮಾನ್‌ನಲ್ಲಿರುವ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಪೂರ್ವ-ಕ್ಲಿನಿಕಲ್ ವೈದ್ಯಕೀಯ ಶಿಕ್ಷಣ ಪಡೆಯುತ್ತಾರೆ. ಬಳಿಕ ಪೋಲಂಡ್‌ನ ಮೆಡಿಕಲ್ ಯುನಿವರ್ಸಿಟಿ ಆಫ್ ಲುಬ್ಲಿನ್‌ಗೆ ವರ್ಗಾವಣೆಗೊಂಡು ಮೂರು ವರ್ಷಗಳ ಕ್ಲಿನಿಕಲ್ ತರಬೇತಿಯನ್ನು ಪೂರ್ಣಗೊಳಿಸಿ ಎಂ.ಡಿ. (ಡಾಕ್ಟರ್ ಆಫ್ ಮೆಡಿಸಿನ್) ಪದವಿ ಪಡೆಯುತ್ತಾರೆ.೨೦೨೨ರಲ್ಲಿ ಈ ಕಾರ್ಯಕ್ರಮಕ್ಕೆ ಶೈಕ್ಷಣಿಕ ಮಾನ್ಯತೆ ನವೀಕರಿಸಲ್ಪಟ್ಟಿದ್ದು, ಹೈಯರ್ ಡಿಪ್ಲೊಮಾ ಇನ್ ಪ್ರೀ-ಕ್ಲಿನಿಕಲ್ ಸೈನ್ಸಸ್ ಕಾರ್ಯಕ್ರಮವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದರ ಮೂಲಕ ವಿದ್ಯಾರ್ಥಿಗಳು ಯುಎಇ ಹಾಗೂ ಯುರೋಪಿನ ವೈದ್ಯಕೀಯ ಶಿಕ್ಷಣ ವ್ಯವಸ್ಥೆಗಳ ಅನುಭವವನ್ನು ಒಂದೇ ಕಾರ್ಯಕ್ರಮದಲ್ಲಿ ಪಡೆಯುವ ಅಪರೂಪದ ಅವಕಾಶವನ್ನು ಹೊಂದಿದ್ದಾರೆ.೨೦೧೭ರಿಂದ ಇಲ್ಲಿಯವರೆಗೆ ೬೨ ದೇಶಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ದಾಖಲಾತಿ ಪಡೆದಿದ್ದಾರೆ. ಪ್ರಸ್ತುತ ೪೫ಕ್ಕೂ ಹೆಚ್ಚು ರಾಷ್ಟ್ರೀಯತೆಗಳ ವಿದ್ಯಾರ್ಥಿಗಳು ಜಿಎಮ್‌ಯುವಿನ ಪೂರ್ವ-ಕ್ಲಿನಿಕಲ್ ಹಂತದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ೨೦೨೩ರಲ್ಲಿ ಮೊದಲ ಬ್ಯಾಚ್ ಪದವಿ ಪಡೆದಿದ್ದು, ನಂತರ ಪ್ರತಿ ವರ್ಷ ಪದವೀಧರರ ಸಂಖ್ಯೆ ಹೆಚ್ಚುತ್ತಾ ಬಂದಿದೆ.ಈ ಸಂದರ್ಭದಲ್ಲಿ ಮಾತನಾಡಿದ ಜಿಎಮ್‌ಯು ಚಾನ್ಸಲರ್ ಪ್ರೊ. ಮಂಡ ವೆಂಕಟರಮಣ, ವೈದ್ಯರಾಗಬೇಕೆಂಬ ಕನಸಿನೊಂದಿಗೆ ಬರುವ ವಿದ್ಯಾರ್ಥಿಗಳಿಗೆ ಅಜ್ಮಾನ್‌ನಿಂದ ಯುರೋಪಿಯನ್ ವೈದ್ಯಕೀಯ ಪದವಿಯವರೆಗೆ ನೇರ ಮತ್ತು ವಿಶ್ವಾಸಾರ್ಹ ಮಾರ್ಗವನ್ನು ನಾವು ನಿರ್ಮಿಸಿದ್ದೇವೆ. ಇಂದು ನಮ್ಮ ಪದವೀಧರರು ವಿಶ್ವದಾದ್ಯಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವುದು ಈ ಕಾರ್ಯಕ್ರಮದ ಯಶಸ್ಸಿನ ಪ್ರತೀಕವಾಗಿದೆ ಎಂದು ಹೇಳಿದರು.ಮೆಡಿಕಲ್ ಯುನಿವರ್ಸಿಟಿ ಆಫ್ ಲುಬ್ಲಿನ್‌ನ ರೆಕ್ಟರ್ ಪ್ರೊ. ವೊಯ್ಚೆಕ್ ಝಲುಸ್ಕಾ ಮಾತನಾಡಿ, ಕಳೆದ ಎಂಟು ದಶಕಗಳಿಂದ ನಮ್ಮ ವಿಶ್ವವಿದ್ಯಾಲಯ ವೈದ್ಯರನ್ನು ರೂಪಿಸುತ್ತಿದೆ. ಗಲ್ಫ್ ಮೆಡಿಕಲ್ ಯುನಿವರ್ಸಿಟಿಯೊಂದಿಗಿನ ಶೈಕ್ಷಣಿಕ ಸಹಭಾಗಿತ್ವವು ಆ ಪಯಣದ ಅತ್ಯಂತ ಫಲಪ್ರದ ಅಧ್ಯಾಯಗಳಲ್ಲಿ ಒಂದಾಗಿದೆ. ಅಜ್ಮಾನ್‌ನಿಂದ ಬರುವ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಸಿದ್ಧಗೊಂಡವರಾಗಿದ್ದು, ಮೊದಲ ದಿನದಿಂದಲೇ ಕ್ಲಿನಿಕಲ್ ತರಬೇತಿಯಲ್ಲಿ ತೊಡಗಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಅವರನ್ನು ನಮ್ಮ ವಿದ್ಯಾರ್ಥಿಗಳೆಂದು ಕರೆಯಲು ಹಾಗೂ ಸಮರ್ಥ ವೈದ್ಯರಾಗಿ ಜಗತ್ತಿಗೆ ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದರು.ಈ ಘಟಿಕೋತ್ಸವ ತುಂಬೆ ಗ್ರೂಪ್ ಹಾಗೂ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದಿನ್ ಅವರ ಉಪಸ್ಥಿತಿಯಲ್ಲಿ ನಡೆಯಿತು. 23 ರಂದು ಯುಎಇಯಲ್ಲಿ ಘಟಿಕೋತ್ಸವ, ಪದವಿ ಪ್ರದಾನ : ಯುಎಇಯ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ವೈದ್ಯಕೀಯ ವೃತ್ತಿಜೀವನದತ್ತ ನೇರ ಮತ್ತು ವಿಶ್ವಾಸಾರ್ಹ ಮಾರ್ಗವನ್ನು ಒದಗಿಸಬೇಕು ಎಂಬ ಅವರ ದೂರದೃಷ್ಟಿಯೇ ಈ ಕಾರ್ಯಕ್ರಮದ ಅಡಿಪಾಯವಾಗಿದೆ.ಡಾ. ತುಂಬೆ ಮೊಯಿದಿನ್ ಅವರ ದೂರದೃಷ್ಟಿಯ ಕಲ್ಪನೆಯಾಗಿ ಆರಂಭವಾದ ಈ ಕಾರ್ಯಕ್ರಮವು ಇಂದು ೯೦ ವೈದ್ಯಕೀಯ ಪದವೀಧರರನ್ನು ರೂಪಿಸಿದ್ದು, ಇನ್ನೂ ನೂರಾರು ವಿದ್ಯಾರ್ಥಿಗಳು ಇದೇ ಮಾರ್ಗದ ಮೂಲಕ ತಮ್ಮ ವೈದ್ಯಕೀಯ ವೃತ್ತಿಜೀವನದ ಕನಸನ್ನು ನನಸಾಗಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಜೂನ್ ೨೩ರಂದು ನಡೆಯಲಿರುವ ಘಟಿಕೋತ್ಸವವು ಪದವೀಧರರು, ಅವರ ಕುಟುಂಬ ಸದಸ್ಯರು ಹಾಗೂ ಉಭಯ ವಿಶ್ವವಿದ್ಯಾಲಯಗಳ ಅಧ್ಯಾಪಕರು ಮತ್ತು ಶಿಕ್ಷಣ ತಜ್ಞರ ಸಾಧನೆಯನ್ನು ಗೌರವಿಸುವ ವಿಶೇಷ ಸಂದರ್ಭವಾಗಲಿದೆ.