ತುಮಕೂರು: ವಿಕೃತಿ ಮೆರೆದಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ

| Published : Feb 01 2024, 02:03 AM IST

ತುಮಕೂರು: ವಿಕೃತಿ ಮೆರೆದಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆ ಕೆರೆಗೋಡಿನ ಹನುಮಧ್ವಜ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಕುರುಬರ ಹಾಸ್ಟೆಲ್‌ಗೆ ಕಲ್ಲು ತೂರಾಟ: ಆರೋಪಿಗಳನ್ನು ಬಂಧಿಸುವಂತೆ ತುಮಕೂರಿನಲ್ಲಿ ಹೋರಾಟ

ಕನ್ನಡಪ್ರಭ ವಾರ್ತೆ ತುಮಕೂರು

ಮಂಡ್ಯ ಜಿಲ್ಲೆ ಕೆರೆಗೋಡಿನ ಹನುಮಧ್ವಜ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಕುರುಬರ ಹಾಸ್ಟೆಲ್‌ಗೆ ಕಲ್ಲು ತೂರಾಟ ನಡೆಸಿ, ಹಾಸ್ಟೆಲ್‌ ಕಟ್ಟಡದಲ್ಲಿ ತೂಗು ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಭಕ್ತ ಕನಕದಾಸರ ಭಾವಚಿತ್ರಗಳನ್ನು ಒಳಗೊಂಡ ಪ್ಲಕ್ಸ್ ಹರಿದು ಹಾಕಿ ವಿಕೃತಿ ಮೆರೆದಿರುವ ಕಿಡಿಗೇಡಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಕುರುಬರ ಸಂಘ, ಕನಕ ಯುವಸೇನೆ, ಕರ್ನಾಟಕ ಪ್ರದೇಶ ಕುರುಬರ ಸಂಘ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕುರುಬ ಸಮುದಾಯದ ಮುಖಂಡರು, ಸರ್ಕಾರ ಈ ಕೂಡಲೇ ಪ್ರತಿಭಟನೆಯ ವೇಳೆ ರೇಕಾರ್ಡ್ ಆಗಿರುವ ವಿಡಿಯೋ ಪೂಟೇಜ್ ಅನ್ನು ಆಧಾರವಾಗಿಟ್ಟು ಕೊಂಡು ಪ್ಲಕ್ಸ್ ಹರಿದು ಹಾಕಿದ ಹಾಗೂ ಕುರುಬರ ಹಾಸ್ಟೆಲ್‌ಗೆ ಕಲ್ಲೂ ತೂರಾಟ ಮಾಡಿ ಅದರ ಕಿಟಿಕಿ ಬಾಗಿಲುಗಳ ಗಾಜುಗಳನ್ನು ಒಡೆದು ಹಾಕಿದ ವ್ಯಕ್ತಿಗಳನ್ನು ಬಂಧಿಸಿ, ಕಠಿಣ ಶಿಕ್ಷಗೆ ಒಳಗಪಡಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ಟಿ.ಆರ್‌., ಹನುಮಧ್ವಜಕ್ಕೂ ಕುರುಬರಿಗೂ ಸಂಬಂಧವಿಲ್ಲ. ಹಾಗಿದ್ದರೂ ಪ್ರತಿಭಟನೆಯ ವೇಳೆ ಕುರುಬರ ಹಾಸ್ಟೆಲ್‌ನ್ನು ಕೇಂದ್ರೀಕರಿಸಿ ಧಾಳಿ ನಡೆದಿರುವುದು ಖಂಡನೀಯ. ಕುರಿ ಕಾಯುವ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಎರಡು ಬಾರಿ ಮುಖ್ಯಮಂತ್ರಿಯಾಗಿರುವುದು ಇತರೆ ಸಮುದಾಯಗಳಿಗೆ ಸಹಿಸಲು ಸಾಧ್ಯವಿಲ್ಲದಂತಾಗಿ, ಪ್ರತಿಭಟನೆಯ ನೆಪದಲ್ಲಿ ಕುರುಬರನ್ನು ಹೆದರಿಸುವ ತಂತ್ರಕ್ಕೆ ಕೈಹಾಕಿದ್ದಾರೆ. ಕುರುಬರು ಸಹ ರಾಜ್ಯದಲ್ಲಿ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿದ್ದು, ಇವರ ಈ ಧೋರಣೆ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು.

ಕನಕ ಯುವಸೇನೆಯ ಜಿಲ್ಲಾಧ್ಯಕ್ಷ ಕೆಂಪರಾಜು ಮಾತನಾಡಿ, ಮಂಡ್ಯದ ಕೆರಗೋಡಿನಲ್ಲಿ ನಡೆದಿರುವುದು ಅತ್ಯಂತ ಹೇಯವಾದ ಕೃತ್ಯ. ನೇರವಾಗಿ ಸಿದ್ದರಾಮಯ್ಯನವರನ್ನು ಎದುರಿಸಲಾಗದೆ ಕಿಡಿಗೇಡಿಗಳು ಸಮುದಾಯದ ಮಕ್ಕಳು ಕಲಿಯುತ್ತಿರುವ ಹಾಸ್ಟೆಲ್‌ ಮೇಲೆ ಕಲ್ಲು ತೂರಾಟ ನಡೆಸಿ, ಬೆದರಿಕೆ ಒಡ್ಡುವ ತಂತ್ರಗಾರಿಕೆ ನಡೆಸಿದ್ದಾರೆ. ಈ ತಂತ್ರಗಳಿಗೆ, ಕುತಂತ್ರಗಳಿಗೆ ನಾವು ಹೆದರುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್. ಮಧುಕರ್ ಮಾತನಾಡಿ, ಹಿಂದೂ ಹೆಸರಿನಲ್ಲಿ ಗಲಾಟೆ ನಡೆಸುತ್ತಿರುವ ನಾಯಕರು ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನಕದಾಸರು ಇಬ್ಬರು ಸಹ ಹಿಂದೂಗಳೇ ಆಗಿದ್ದಾರೆ. ಹನುಮಧ್ವಜ ಅದು ಸರ್ಕಾರ ಮತ್ತು ನಿಮ್ಮ ನಡುವಿನ ಹೋರಾಟ. ಅದಕ್ಕೂ ಕುರುಬರ ಸಂಘಕ್ಕೂ ಸಂಬಂಧವಿಲ್ಲ. ಆದರೆ ಕುರುಬರನ್ನು ಗುರಿಯಾಗಿಸಿಕೊಂಡು ಹೀನ ಕೃತ್ಯಗಳನ್ನು ನಡೆಸಿದರೆ ಸಹಿಸಲು ಸಾಧ್ಯವಿಲ್ಲ. ನಾವು ಕೂಡ ಜಾಗೃತರಾಗಿದ್ದೇವೆ. ನಮ್ಮ ಶಕ್ತಿ ಏನು ಎಂಬುದು ಕೆಲವೇ ದಿನಗಳಲ್ಲಿ ಅರ್ಥವಾಗಲಿದೆ. ಇಂದು ಕೇವಲ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ ಎಂದರು.

ಶೀಘ್ರವಾಗಿ ಕಲ್ಲು ತೂರಿ ಆಸ್ತಿ, ಪಾಸ್ತಿ ಹಾನಿ ಮಾಡಿದ ಕಡಿಗೇಡಿಗಳನ್ನು ಬಂಧಿಸದಿದ್ದಲ್ಲಿ, ಉಗ್ರ ಹೋರಾಟ ಅನಿವಾರ್ಯ ಎಂದರು.

ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಮಾತನಾಡಿದರು. ಈ ಸಂಬಂದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಅವರಿಗೆ ಸಲ್ಲಿಸಿದರು. ಈ ವೇಳೆ ಮಹಾಲಿಂಗಯ್ಯ, ವಕೀಲ ರಾಜೇಶ್, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಮಾಲೂರಪ್ಪ, ಸಿ. ಪುಟ್ಟರಾಜು, ಕುಮಾರಸ್ವಾಮಿ, ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಗೌರವಾಧ್ಯಕ್ಷ ರಾಜು, ಧರ್ಮರಾಜು, ಟಿ.ಈ. ರಘುರಾಮ್, ವಿರೂಪಾಕ್ಷ, ಟಿ.ಎಚ್. ಮಹದೇವ್ ಮತ್ತಿತರರು ಜೊತೆಗಿದ್ದರು.