ಕಳೆದ ಎರಡೂವರೆ ವರ್ಷಗಳಿಂದ ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಆಗಿ ಚಿಕ್ಕಬಳ್ಳಾಪುರ ಡಿಸಿಯಾಗಿ ಪದೋನ್ನತಿ ಹೊಂದಿರುವ ಕ್ರಿಯಾಶೀಲ ಐಎಎಸ್ ಅಧಿಕಾರಿ ಜಿ.ಪ್ರಭು ಅವರಿಗೆ ಜಿಲ್ಲೆಯ ಅಧಿಕಾರಿ ವೃಂದದವರಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ತುಮಕೂರು
ಕಳೆದ ಎರಡೂವರೆ ವರ್ಷಗಳಿಂದ ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಆಗಿ ಚಿಕ್ಕಬಳ್ಳಾಪುರ ಡಿಸಿಯಾಗಿ ಪದೋನ್ನತಿ ಹೊಂದಿರುವ ಕ್ರಿಯಾಶೀಲ ಐಎಎಸ್ ಅಧಿಕಾರಿ ಜಿ.ಪ್ರಭು ಅವರಿಗೆ ಜಿಲ್ಲೆಯ ಅಧಿಕಾರಿ ವೃಂದದವರಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.ಪ್ರಭು ಅವರ ಸಹ ಒಡನಾಡಿಗಳಾಗಿ ಸೇವೆ ಸಲ್ಲಿಸಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಂಜೀವಪ್ಪ, ಈಶ್ವರಚಂದ್ರ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಯೋಜನಾ ನಿರ್ದೇಶಕ ನಾರಾಯಣಸ್ವಾಮಿ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಡಿಎಚ್‌ಒ ಡಾ.ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಸಿರಾ ಇಒ ಹರೀಶ್, ಕೊರಟಗೆರೆ ತಹಸೀಲ್ದಾರ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕೃಷ್ಣಕಾಂತ್, ಜಿಪಂ ನೌಕರ ವೃಂದದಿಂದ ಲಕ್ಷ್ಮೀ ಸೋಷಿಯಲ್ ಆಡಿಟ್‌ನಿಂದ ಚಂದ್ರಣ್ಣ, ಪಿಡಿಒಗಳ ಪರವಾಗಿ ನಾಗರಾಜು, ಜಿಪಂ ಅಭಿವೃದ್ಧಿ ಶಾಖೆಯ ಮಂಜುನಾಥ್, ಡಿಸಿಎಫ್ ದೇವರಾಜ್ ಅವರು ಪ್ರಭು ಅವರ ಕಾರ್ಯ ಸಾಧನೆಯ ಬಗ್ಗೆ ಮುಕ್ತ ಅನಿಸಿಕೆಯನ್ನು ಹಂಚಿಕೊಂಡರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿ.ಪ್ರಭು ಅವರು, ನನ್ನ ಕರ್ತವ್ಯದ ಸೇವಾವಧಿಯಲ್ಲಿ ಆರ್‌ಡಿಪಿಆರ್ ಇಲಾಖೆಯಲ್ಲಿ ಸುಮಾರು 5ವರ್ಷಗಳ ಕಾಲ ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಆಗಿದ್ದರಿಂದ ಜನರ ನಾಡಿ ಮಿಡಿತ ಅರಿಯಲು ಅನುಕೂಲವಾಯಿತು. ನಾನು ಸಿಇಒ ಆಗಿ ಮುಂದವರಿಯದಿದ್ದರೆ ಹಳ್ಳಿಗಾಡಿನ ಜನರು ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ದೊಡ್ಡ ಸಮೂಹಕ್ಕೆ ಸಲ್ಲಿಸಬಹುದಾದ ಅವಕಾಶವನ್ನೇ ಕಳೆದುಕೊಳ್ಳುತ್ತಿದ್ದೆ. ಈ ಅವಕಾಶವನ್ನು 2023ರಲ್ಲಿ ತುಮಕೂರಿಗೆ ಕಲ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಪರಮೇಶ್ವರ್ ಹಾಗೂ ಮುಖ್ಯಮಂತ್ರಿಗಳಿಗೆ ನಾನು ಆಭಾರಿಯಾಗಿದ್ದೇನೆ. ನನ್ನ ಎರಡೂವರೆ ವರ್ಷದ ತುಮಕೂರು ಜಿಲ್ಲೆಯ ಸಿಇಒ ಪಯಣದಲ್ಲಿ ಸಮಯವನ್ನು ಲೆಕ್ಕಿಸದೆ ಇಲಾಖೆಗಳ ಗುರಿ ಯೋಜನೆ ತಲುಪಲು ನನ್ನ ಜತೆ ಹೆಜ್ಜೆ ಹಾಕಿದ ಜಿಪಂ ಸೇರಿದಂತೆ ಎಲ್ಲಾ ಇಲಾಖೆಗಳು ಅಧಿಕಾರ ವರ್ಗ, ನೌಕರರು ವಿಶೇಷವಾಗಿ ಸಚಿವರು, ಶಾಸಕರು, ಸಂಸದರು, ಇತರೆ ಎಲ್ಲಾ ಜನಪ್ರತಿನಿಧಿಗಳು, ಮಾಧ್ಯಮದವರು, ಸಾರ್ವಜನಿಕರು, ಸಂಘಟನೆಗಳ ಮುಖಂಡರು ಎಲ್ಲರಿಗೂ ನನ್ನ ಹೃದಯಂತಾರಳದಿಂದ ವಂದಿಸುತ್ತೇನೆ ಎಂದು ಹೇಳಿದರು.ದೇಶ ಸೇವೆಗೆ ಸಿಕ್ಕಿರುವ ಮಹತ್ವದ ಅವಕಾಶವೆಂದು ಭಾವಿಸಿ ಅದನ್ನು ಸಾರ್ಥಕಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಲಾಖೆ ಯೋಜನೆಗಳನ್ನು ಶೇ. 100 ರಷ್ಟು ಕಾರ್ಯಗತಗೊಳಿಸೋಣ. ತುಮಕೂರಿನ ಸೇವಾವಧಿಯಲ್ಲಿ ದೊರೆತ ಪ್ರೀತಿ, ಸಾಧನೆಯ ಅವಕಾಶಗಳು ನನ್ನ ಜೀವನದಲ್ಲಿ ಮರೆಯಲಾಗದ ನೆನಪಾಗಿವೆ ಎಂದರು.
ನಂತರ ಜಿಲ್ಲಾ ಪಂಚಾಯತ್ ಅಧಿಕಾರಿ ನೌಕರ ವೃಂದದವರು ಸೇರಿದಂತೆ ವಿವಿಧ ಇಲಾಖೆಯವರು ಸಾರ್ವಜನಿಕರು ವಿಶೇಷವಾಗಿ ಜಿ. ಪ್ರಭು ದಂಪತಿಯನ್ನು ಸನ್ಮಾನಿಸಿ ಜಿಲ್ಲಾಧಿಕಾರಿಗಳಾಗಿ ಮತ್ತಷ್ಟು ಹೆಸರು ಮಾಡಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಪಿಡಬ್ಲುಡಿ ಹಾಗೂ ಆರ್‌ಡಿಪಿಆರ್ ಕಾರ್ಯಪಾಲಕ ಅಭಿಯಂತರರು, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಶಾರದಮ್ಮ ಮತ್ತಿತರರು ಉಪಸ್ಥಿತರಿದ್ದರು.