ತುಮಕೂರು: ಕಣ್ಮನ ಸೆಳೆದ ಶ್ವಾನ, ಬೆಕ್ಕುಗಳ ಪ್ರದರ್ಶನ

| Published : Feb 19 2024, 01:33 AM IST

ತುಮಕೂರು: ಕಣ್ಮನ ಸೆಳೆದ ಶ್ವಾನ, ಬೆಕ್ಕುಗಳ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ., ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ 2023-24ನೇ ಸಾಲಿನ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ., ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ 2023-24ನೇ ಸಾಲಿನ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನಕ್ಕೆ ವಿವಿಧ ತಳಿಯ ತರೇಹವಾರಿ ಶ್ವಾನಗಳು ಹಾಗೂ ಬೆಕ್ಕುಗಳನ್ನು ಕರೆತರಲಾಗಿತ್ತು. ಮಾಲೀಕರು ತಮ್ಮ ಮನೆಯಲ್ಲಿ ಸಾಕಿದ್ದ ವಿವಿಧ ತಳಿಯ ಶ್ವಾನಗಳು ಮತ್ತು ಬೆಕ್ಕುಗಳನ್ನು ಈ ಕಾರ್ಯಕ್ರಮಕ್ಕೆ ಕರೆ ತಂದು ಪ್ರದರ್ಶಿಸಿದ್ದು ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು.

ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಪಂಚಾಯತ್ ಮುಖ್ಯ ಸಿಇಒ ಜಿ. ಪ್ರಭು ಮಾತನಾಡಿ, ಶ್ವಾನ ಎಂದಾಕ್ಷಣ ನಮಗೆಲ್ಲಾ ನೆನಪಿಗೆ ಬರುವುದು ಇತ್ತೀಚಿನ ದಿನಗಳಲ್ಲಿ ಮಾನವಲ್ಲಿ ಕಡಿಮೆಯಾಗುತ್ತಿರುವ ಮೌಲ್ಯಗಳು. ನಿಷ್ಠೆ, ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ ಎಂದರು.

ಬೆಕ್ಕುಗಳು ಸಹ ಮನೆಯಲ್ಲಿ ನಮ್ಮಗಳ ಜತೆ ಸಾಕುತ್ತಿದ್ದೇವೆ. ಬದ್ಧತೆ, ಸ್ವಾಮಿ ನಿಷ್ಠೆ ಎಂದರೆ ನಮ್ಮ ವಿವೇಚನೆಗೆ ಬರುವುದು ಶ್ವಾನಗಳು ಎಂದು ಹೇಳಿದರು.

ನಾಗರಿಕ ಸಮಾಜದಲ್ಲಿ ಮಾನವ ಮೇಲಕ್ಕೆ ಏರುತ್ತಿರುವಂತೆ ಸಂಬಂಧಗಳು ಕಡಿಮೆಯಾಗುತ್ತಿವೆ, ಕುಟುಂಬದ ಬಾಂಧವ್ಯಗಳು ಸಹ ಕ್ಷೀಣಿಸುತ್ತಿವೆ. ಪ್ರೀತಿ, ವಾತ್ಸವ್ಯ, ಗುರು ಹಿರಿಯರ ಬಗೆಗಿನ ಮಮತೆ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಶ್ವಾನಗಳ ಜತೆ ಸಂಬಂಧ ಇರುವವರು ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕೆ ಪೂರಕವಾಗಿರುತ್ತಾರೆ ಎಂದರೆ ತಪ್ಪಾಗಲಾರದು ಎಂದರು.

ಕರ್ನಾಟಕ ಪಶು ವೈದ್ಯಕೀಯ ಸಂಘದ ತುಮಕೂರು ಅಧ್ಯಕ್ಷ ಡಾ. ವೈ.ಜಿ. ಕಾಂತರಾಜು ಮಾತನಾಡಿ, ಅನಾದಿ ಕಾಲದಿಂದ ಮಾನವನ ಒಡನಾಡಿಯಾಗಿರುವ ನಿಷ್ಠೆ, ಪ್ರೀತಿಗೆ ಪಾತ್ರರಾಗಿರುವಂತಹ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಪ್ರಾಣಿ ಪ್ರಿಯರಲ್ಲಿ ಜಾಗೃತಿ ಮೂಡಿಸಲು ಹಾಗೂ ವೈಜ್ಞಾನಿಕವಾದ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಪ್ರಾಣಿಗಳ ಆರೋಗ್ಯ ಕಾಪಾಡುವ ರೀತಿಯಲ್ಲೂ ಸಹ ಮಾಹಿತಿಯನ್ನು ಇಂತಹ ಕಾರ್ಯಕ್ರಮಗಳ ಮೂಲಕ ನೀಡಲಾಗುತ್ತದೆ ಎಂದು ಹೇಳಿದರು.

ಪಶುಪಾಲನಾ ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಜಿ. ಗಿರೀಶ್‌ಬಾಬು ರೆಡ್ಡಿ ಮಾತನಾಡಿ, ಜಿಲ್ಲಾ ಮಟ್ಟದ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನದಲ್ಲಿ ೨೫ಕ್ಕೂ ಹೆಚ್ಚು ಜಾತಿಯ ೨೫೦ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿವೆ ಎಂದರು.

20ಕ್ಕೂ ಹೆಚ್ಚು ಬೆಕ್ಕುಗಳು ಭಾಗವಹಿಸಿದ್ದು, ಈ ಕಾರ್ಯಕ್ರಮ ಪ್ರಾಣಿಪ್ರಿಯರಿಗೆ ಅತ್ಯಂತ ಪ್ರೀತಿಪೂರ್ವಕ ಕಾರ್ಯಕ್ರಮವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಇಲಾಖೆ ಹೊರ ತಂದಿದ್ದ ಸ್ಮರಣ ಸಂಚಿಕೆಯನ್ನು ಸಿಇಒ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಡಾ. ಪುರುಷೋತ್ತಮ್, ಡಾ. ನಾಗರಾಜು ಸೇರಿದಂತೆ ಪಶುಪಾಲನಾ ಇಲಾಖೆಯ ವೈದ್ಯರು ಭಾಗವಹಿಸಿದ್ದರು.