ಸಾರಾಂಶ
ತುಮಕೂರು: ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯಲ್ಲಿ ಆಚರಿಸುತ್ತಿರುವ ದಸರಾ ಉತ್ಸವಕ್ಕೆ ಸಂಬಂಧಿಸಿದ ಅಗತ್ಯ ಪೂರ್ವ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ದಸರಾ ಉತ್ಸವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಶಸ್ವಿ ದಸರಾ ಉತ್ಸವ ಆಚರಣೆಗಾಗಿ 12ಕ್ಕಿಂತ ಹೆಚ್ಚು ಉಪಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳು ತಮಗೆ ವಹಿಸಿರುವ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದ ಅವರು, ಪ್ರಸ್ತುತದವರೆಗೆ ಆಗಿರುವ ಪ್ರಗತಿ ವಿವರವನ್ನು ಪರಿಶೀಲಿಸಿದರು. ನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತೆ ವಿದ್ಯುತ್ ಅಲಂಕಾರವು ವೈವಿಧ್ಯಮಯವಾಗಿ ವಿನ್ಯಾಸಗೊಳಿಸಿ ನಗರವನ್ನು ಅಲಂಕೃತಗೊಳಿಸಬೇಕು. ಈ ನಿಟ್ಟಿನಲ್ಲಿ ಮಹಾನಗರಪಾಲಿಕೆ ಹಾಗೂ ಬೆಸ್ಕಾಂ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸುಸಜ್ಜಿತ ಹಾಗೂ ಸುರಕ್ಷಿತವಾದ ಹೆಲಿಪ್ಯಾಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.ಪ್ರತಿ ದಿನ ಸಂಜೆ ನಡೆಯುವಂತಹ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಆಕರ್ಷಕವಾಗುವ ರೀತಿಯಲ್ಲಿ ಕಾರ್ಯಕ್ರಮಗಳ ಪಟ್ಟಿಯನ್ನು ತಯಾರಿಸಿ ವರದಿ ಸಲ್ಲಿಸುವಂತೆ ಮುಜರಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ದಸರಾ ಉತ್ಸವದಲ್ಲಿ ನಡೆಯುವಂತಹ ವಿವಿಧ ಕಾರ್ಯಕ್ರಮಗಳು, ಸಮಾರಂಭ, ಕ್ರೀಡೆ ಬಗ್ಗೆ ಸಾಮಾಜಿಕ ಮಾಧ್ಯಮ, ಎಲ್‌ಇಡಿ ಪರದೆ, ಕರಪತ್ರ, ಬ್ಯಾನರ್, ದಿನಪತ್ರಿಕೆ, ಟಿವಿ ಮೊದಲಾದ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ತಲುಪಿಸಬೇಕು ಹಾಗೂ ಕಾರ್ಯಕ್ರಮದಲ್ಲಿ ದಸರಾ ಲೋಗೋ ಕಡ್ಡಾಯವಾಗಿ ಬಳಸಬೇಕು. ವಿವಿಧ ಉಪ ಸಮಿತಿಗಳಿಗೆ, ಅಧಿಕಾರಿಗಳಿಗೆ ವಹಿಸಿರುವಂತಹ ಸೂಚನೆ ನಿರ್ದೇಶನಗಳನ್ನು ಲೋಪವಿಲ್ಲದಂತೆ ನಿರ್ವಹಿಸಬೇಕೆಂದು ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಮಾತನಾಡಿ, ದಸರಾ ಕಾರ್ಯಕ್ರಮದ ಅಂಗವಾಗಿ ಆಚರಿಸಲಾಗುವ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋನಿಯಾ ವರ್ಣೇಕರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ, ವಿವಿಧ ದೇವಾಲಯಗಳ ಅರ್ಚಕರು ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳುಹಾಜರಿದ್ದರು.