ದಸರಾ ಉತ್ಸವ : ಮುಖ್ಯಮಂತ್ರಿಗಳಿಗೆ ಆಹ್ವಾನ

| Published : Oct 10 2024, 02:20 AM IST

ಸಾರಾಂಶ

ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಿಲ್ಲಾಡಳಿತದಿಂದ ಆಚರಿಸಲಾಗುತ್ತಿರುವ ತುಮಕೂರು ದಸರಾ ಉತ್ಸವಕ್ಕೆ ಆಗಮಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯಲ್ಲಿ ಮೊದಲ ಬಾರಿಗೆ ಜಿಲ್ಲಾಡಳಿತದಿಂದ ಆಚರಿಸಲಾಗುತ್ತಿರುವ ತುಮಕೂರು ದಸರಾ ಉತ್ಸವಕ್ಕೆ ಆಗಮಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಬಿ.ವಿ.ಆಶ್ವಿಜಾ ಅವರೊಂದಿಗೆ ಮುಖ್ಯಮಂತ್ರಿಗಳ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಅವರು, ದಸರಾ ಉತ್ಸವದ ಅಂಗವಾಗಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಅಮರ ಶಿಲ್ಪಿ ಜಕಣಾಚಾರಿ ಮುಖ್ಯ ವೇದಿಕೆಯಲ್ಲಿ ಅಕ್ಟೋಬರ್ ೧೧ ಮತ್ತು ೧೨ರಂದು ಜರುಗುವ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಅವರು ಮಾಹಿತಿ ನೀಡಿದರು.ಮಹಾಗೌರಿ (ಮಹಾಕಾಳಿ) ಅಲಂಕಾರ ಇಂದು...ದಸರಾ ಉತ್ಸವ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿಯು ಅಕ್ಟೋಬರ್ ೧೦ರ ಗುರುವಾರ ಮಹಾಗೌರಿ(ಮಹಾಕಾಳಿ) ಅಲಂಕಾರದಲ್ಲಿ ದರ್ಶನ ಪಡೆದ ಭಕ್ತರಿಗೆ ಆಶೀರ್ವದಿಸಲಿದ್ದಾಳೆ ಎಂದು ಮುಜರಾಯಿ ತಹಸೀಲ್ದಾರ್ ಸವಿತ ತಿಳಿಸಿದ್ದಾರೆ. ಶರದ್ ಋತು ಅಶ್ವಿಜ ಮಾಸ ಶುಕ್ಲ ಪಕ್ಷದ ಗುರುವಾರ ಬೆಳಿಗ್ಗೆ 5.30 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಗಣಪತಿ ಪೂಜೆ, ಪ್ರಧಾನ ಕಳಶರಾಧನೆ, ದೇವಿಗೆ ಪಂಚಾಮೃತ ಅಭಿಷೇಕ, ಅಗ್ನಿ ಪ್ರತಿಷ್ಠಾಪನೆ, ಶ್ರೀ ದುರ್ಗಾ ಹೋಮ, ಲಘು ಪೂರ್ಣಾಹುತಿ, ಅಷ್ಟಾವದಾನ ಸೇವೆ, ಮಂತ್ರಪುಷ್ಪ ರಾಷ್ಟ್ರಾಶೀರ್ವಾದ, ಬೆಳಿಗ್ಗೆ 9:30 ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ 4:30 ಗಂಟೆಗೆ ವೇದಪಾರಾಯಣ, ದುರ್ಗಾಸಪ್ತಶಶಿ ಪಾರಾಯಣ, ಅಷ್ಟಾವದಾನ, ಕುಂಕುಮಾರ್ಚನೆ, ರಾ.7:30 ಗಂಟೆಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ...:-ದಸರಾ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 10ರಂದು ಸಂಜೆ 7 ಗಂಟೆಯಿಂದ ತುಮಕೂರಿನ ಅನಘ ಮತ್ತು ತಂಡದವರಿಂದ ಹರಿಕಥೆ, ಸಿ.ಜಿ.ನಾಗಮಣಿ ತಂಡದವರಿಂದ ಭಕ್ತಿಗೀತೆ ಗಾಯನ ಮತ್ತು ತಿಪಟೂರಿನ ನಳಿನಾ ಮತ್ತು ತಂಡದವರಿಂದ ಜಾನಪದ ರೂಪಕ ಹಾಗೂ ಎ.ಆರ್.ಪುಟ್ಟಸ್ವಾಮಿ ತಂಡದವರಿಂದ ಯಕ್ಷಗಾನ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ತಿಳಿಸಿದ್ದಾರೆ.

ಮ್ಯಾರಥಾನ್‌ ನಾಳೆ

ದಸರಾ ಉತ್ಸವ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಅಕ್ಟೋಬರ್ 11 ರಂದು ಬೆಳಿಗ್ಗೆ 7 ಗಂಟೆಗೆ ಹಮ್ಮಿಕೊಂಡಿರುವ ಮಿನಿ ಮ್ಯಾರಥಾನ್‌ಗೆ ಗೃಹ ಹಾಗೂ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.ಬೆಳಿಗ್ಗೆ 7 ಗಂಟೆಗೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಡಾ. ಶಿವಕುಮಾರ ಸ್ವಾಮೀಜಿ ವೃತ್ತ, ಎಸ್‌ಐಟಿ ಕಾಲೇಜು, ಗಂಗೋತ್ರಿ ರಸ್ತೆ, ಎಸ್.ಎಸ್. ಪುರಂ ಮುಖ್ಯರಸ್ತೆ, ಭದ್ರಮ್ಮ ಛತ್ರ, ಬಿ.ಜಿ.ಎಸ್. ಸರ್ಕಲ್, ಕಾಲ್‌ಟ್ಯಾಕ್ಸ್, ಗುಬ್ಬಿ ಗೇಟ್, ದಿಬ್ಬೂರು ಕ್ರಾಸ್, ಡಬಲ್ ರೋಡ್, ಅಮಾನಿಕೆರೆ ರಸ್ತೆ, ಡಿಸಿ ಕಚೇರಿ ರಸ್ತೆ, ಕೆಇಬಿ ಚೌಲ್ಟ್ರಿ, ಕೋತಿ ತೋಪು ವೃತ್ತ, ತಮ್ಮಯ್ಯ ಹಾಸ್ಪಿಟಲ್ ವೃತ್ತದ ಮೂಲಕ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಅಂತ್ಯಗೊಳ್ಳಲಿದೆ ಎಂದು ತಿಳಿಸಿದರು. ಮ್ಯಾರಥಾನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಂಡು ಯಶಸ್ವಿಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ದಸರಾ ಕ್ರೀಡಾ ಸಮಿತಿಗೆ ಸೂಚನೆ ನೀಡಿದರು. ಮ್ಯಾರಾಥಾನ್ ನಂತರ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಬ್ಬಡಿ, ಖೋ-ಖೋ, ವಾಲಿಬಾಲ್ ಮತ್ತು ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಬಿ. ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು, ಆರೋಗ್ಯ ಮತ್ತು ಕುಂಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಶೇಖರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋನಿಯಾ ವರ್ಣೇಕರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆಂಪಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.