ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ ಕಾರ್ಯಕ್ರಮವಾಗಿ ಯಶಸ್ವಿ ಕಂಡಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಅಭಿಪ್ರಾಯಪಟ್ಟರು.ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಅಮರಶಿಲ್ಪಿ ಜಕಣಾಚಾರಿ ಸಾಂಸ್ಕೃತಿಕ ದಸರಾ ವೈಭವ ಮಹಾವೇದಿಕೆಯಲ್ಲಿ ತುಮಕೂರು ಸಾಂಸ್ಕೃತಿಕ ದಸರಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಸೆಪ್ಟೆಂಬರ್ 22 ರಿಂದ ಇಂದಿನವರೆಗೂ ತುಮಕೂರಿನಲ್ಲಿ ದಸರಾ ಉತ್ಸವವನ್ನು 2ನೇ ಬಾರಿ ಅತ್ಯಂತ ಅದ್ಧೂರಿಯಾಗಿ ಎಲ್ಲರೂ ಸೇರಿ ಒಟ್ಟಾಗಿ ಆಚರಿಸುತ್ತಿದ್ದೇವೆ. ದಸರಾ ಉತ್ಸವವು ಅಭೂತಪೂರ್ವ ಯಶಸ್ಸನ್ನು ಕಂಡಿದ್ದು, ಯಶಸ್ಸಿಗೆ ಸಹಕಾರ ನೀಡಿದ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿ ವರ್ಗ, ಹಲವಾರು ಸಂಘ- ಸಂಸ್ಥೆಗಳಿಗೆ ಅಭಿನಂದನೆ ತಿಳಿಸಿದರು.
ಇಂದು ನಾಡಿನಾದ್ಯಂತ ತುಮಕೂರು ದಸರಾ ಜನಮನ ಗೆದ್ದಿದೆ. ಆಧುನಿಕ ಭಾರತದಲ್ಲಿ ಕರ್ನಾಟಕ ರಾಜ್ಯವು ವೇಗವಾಗಿ ಅಭಿವೃದ್ಧಿಯ ಮಾರ್ಗದಲ್ಲಿ ಸಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ತುಮಕೂರು ವಿಶೇಷ ಸ್ಥಾನಮಾನ ಹೊಂದಿದ್ದು, ಸಿದ್ಧಗಂಗಾ ಶ್ರೀಗಳು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಅನ್ನದಾನ ನೀಡುತ್ತಿರುವುದು ಮಾದರಿ ಸಂಗತಿಯಾಗಿದೆ. ಇನ್ನೊಂದು ಕಡೆ ದಿವಂಗತ ಗಂಗಾಧರಯ್ಯ ಅವರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ಹರಡಿದ್ದರು ಎಂದು ಸ್ಮರಿಸಿದರು.ದಸರಾ ಹಬ್ಬವು ಉಳಿದ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದೆ ಎಂದು ಇತಿಹಾಸ ಹೇಳುತ್ತದೆ. ಕರ್ನಾಟಕದ ಇತಿಹಾಸ ವೈವಿಧ್ಯಮಯವಾಗಿದ್ದು, ಮೂರನೇ ಶತಮಾನದಲ್ಲಿ ಅಶೋಕ ಚಕ್ರವರ್ತಿ ಕಾಲದಲ್ಲಿ ಮಸ್ಕಿಯಲ್ಲಿ ಬೌದ್ಧ ಸಿದ್ಧಾಂತ ಹರಡಿದ ಉದಾಹರಣೆ, ಬೇಲೂರು ಹಳೇಬೀಡಿನಲ್ಲಿ ಜೈನ ಪರಂಪರೆಯ ಸಾಕ್ಷಿಗಳು ಕಾಣಸಿಗುತ್ತವೆ. ಹೀಗಾಗಿ ಕರ್ನಾಟಕ ಇತಿಹಾಸವನ್ನು ಅವಲೋಕಿಸಿದಾಗ ಭಾರತ ದೇಶದ ಯಾವುದೇ ರಾಜ್ಯದಲ್ಲಿ ಸಿಗದಷ್ಟು ಐತಿಹಾಸಿಕ ಪರಂಪರೆ ಇಲ್ಲಿ ಅಡಕವಾಗಿದೆ ಎಂದು ಅವರು ಹೇಳಿದರು.
ಇಡೀ ದೇಶದಲ್ಲಿ ಯಾವುದೇ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ದೊರೆತಿಲ್ಲ. ಆದರೆ ಕನ್ನಡ ಭಾಷೆಗೆ ಮಾತ್ರ 8 ಜ್ಞಾನಪೀಠ ಪ್ರಶಸ್ತಿ ದೊರೆತಿದೆ. 2008 ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿತ್ತು. ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ನಾಟಕ, ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ಕರ್ನಾಟಕವನ್ನು ಮೀರಿಸುವ ರಾಜ್ಯ ಬೇರಿಲ್ಲವೆಂದು ಅವರು ಬಣ್ಣಿಸಿದರು.ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ, ತುಮಕೂರು ದಸರಾ ಉತ್ಸವವು ಅತ್ಯಂತ ಅದ್ಧೂರಿಯಾಗಿ ಯಶಸ್ವಿಯಾಗಿ ನಡೆಯುತ್ತಿದೆ. ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಬಾರಿ ಉತ್ಸವದಲ್ಲಿ ವಿಭಿನ್ನ ಸಾಂಸ್ಕೃತಿಕ, ಕ್ರೀಡಾ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಯುವ ಪೀಳಿಗೆಗೆ ಕ್ರೀಡಾ ಪ್ರೇರಣೆಯನ್ನು ನೀಡುವ ಉದ್ದೇಶದಿಂದ ಮ್ಯಾರಥಾನ್, ಕುಸ್ತಿ, ಚೆಸ್, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ ಸೇರಿದಂತೆ ಹಲವು ಕ್ರೀಡಾ ಸ್ಪರ್ಧೆಗಳು ನಡೆದಿವೆ. ಯುವಕರಲ್ಲಿ ಸ್ಫೂರ್ತಿ, ಶಿಸ್ತಿನ ಜೀವನ ಹಾಗೂ ಆರೋಗ್ಯ ಕಾಳಜಿಯನ್ನು ಹೆಚ್ಚಿಸಲು ಈ ಸ್ಪರ್ಧೆಗಳು ನೆರವಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪ್ರಾಸ್ತಾವಿಕವಾಗಿ ಮಾತನಾಡಿ, ತುಮಕೂರು ದಸರಾ ಉತ್ಸವ ಈ ಬಾರಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ವೈಭವವನ್ನು ಒಳಗೊಂಡಿದ್ದು, ಜನಮನವನ್ನು ಆಕರ್ಷಿಸಿದೆ. ದಸರಾ ಉತ್ಸವದ ಪ್ರಯುಕ್ತ ಹೆಲಿರೈಡ್ ಮೂಲಕ ಸುಮಾರು ೨೦೦೦ ಸಾರ್ವಜನಿಕರು ನಗರದ ಸುಂದರ ಪಕ್ಷಿನೋಟವನ್ನು ವೀಕ್ಷಿಸಿ ಹೊಸ ಅನುಭವ ಪಡೆದುಕೊಂಡಿದ್ದಾರೆ. ಕ್ರೀಡಾ ಉತ್ಸವ, ಮ್ಯಾರಥಾನ್, ಮಹಿಳಾ ಬೈಕ್‌ರೈಡ್, ರಂಗೋಲಿ ಸ್ಪರ್ಧೆ, ಡಬಲ್ ಡೆಕ್ಕರ್ ಅಂಬಾರಿ ಬಸ್‌ನಲ್ಲಿ ನಗರ ದೀಪಾಲಂಕಾರ ವೀಕ್ಷಣೆ, ಮುಂತಾದ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳಿಂದ ಉತ್ಸವಕ್ಕೆ ಇನ್ನಷ್ಟು ಕಳೆ ಬಂದಿದೆ ಎಂದು ತಿಳಿಸಿದರು.ಪ್ರತಿದಿನ ಈ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ಕಲಾ ಸಂಸ್ಕೃತಿಯ ಸವಿಯನ್ನು ನೀಡಿವೆ. ಸಮನ್ವಯ ಮತ್ತು ಶ್ರಮದಿಂದ ಉತ್ಸವ ಯಶಸ್ವಿಯಾಗಲು ತೊಡಗಿಸಿಕೊಂಡ ಎಲ್ಲಾ ಇಲಾಖೆಗಳಿಗೂ ಅವರು ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ತುಮುಲ್ ಅಧ್ಯಕ್ಷ ಹಾಗೂ ಪಾವಗಡ ಶಾಸಕ ಎಚ್.ವಿ ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಮಹಾನಗರ ಪಾಲಿಕೆ ಆಯುಕ್ತ ಅಶ್ವಿಜ ಬಿ.ವಿ., ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮುನ್ನ ಕಲಾವಿದ ಮಲ್ಲಿಕಾರ್ಜುನ ಕೆಂಕೆರೆ ಮತ್ತು ತಂಡವು ಪ್ರಸ್ತುತಪಡಿಸಿದ ಸುಗಮ ಸಂಗೀತ ಕಾರ್ಯಕ್ರಮವು ನೆರೆದಿದ್ದ ಪ್ರೇಕ್ಷಕರನ್ನು ಸಂಗೀತ ಕಡಲಲ್ಲಿ ಮುಳುಗಿಸಿದವು.