ಗುಣಮಟ್ಟದ ಹಾಲು ಶೇಖರಣೆ ಮಾಡುತ್ತಿರುವ ತುಮಕೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನಗಳಿಸಿದೆ ಎಂದು ತುಮಕೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಮತ್ತು ಪಾವಗಡ ಶಾಸಕರಾದ ಎಚ್.ವಿ.ವೆಂಕಟೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಗುಣಮಟ್ಟದ ಹಾಲು ಶೇಖರಣೆ ಮಾಡುತ್ತಿರುವ ತುಮಕೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನಗಳಿಸಿದೆ ಎಂದು ತುಮಕೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಮತ್ತು ಪಾವಗಡ ಶಾಸಕರಾದ ಎಚ್.ವಿ.ವೆಂಕಟೇಶ್ ಹೇಳಿದರು.ತಾಲ್ಲೂಲೂಕಿನ ಅರೇಮಲ್ಲೇನಹಳ್ಳಿ ರಂಗನಾಥ ಸ್ವಾಮಿ ಬೆಟ್ಟದಲ್ಲಿ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ, ಜಿಲ್ಲಾ ರೈತರ ಮತ್ತು ಎಂ.ಪಿ.ಸಿ.ಎಸ್ ನೌಕರರ ಮತ್ತು ಸಾಮಾನ್ಯ ಕಲ್ಯಾಣ ಟ್ರಸ್ಟ್ ಮಲ್ಲಸಂದ್ರ, ತುಮಕೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಆದಿಚುಂಚನಗಿರಿ ಆಸ್ಪತ್ರೆ, ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಅರೇಮಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ನಡೆದ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ತಾಲೂಕಿನ ಹಾಲು ಸಹಕಾರ ಸಹಕಾರ ಸಂಘಗಳ ನಿರ್ದೇಶಕರೂ, ಹಾಲಿ ಕೆಎಂಎಫ್ ನ ನಿರ್ದೇಶಕರಾಗಿರುವ ಸಿ.ವಿ.ಮಹಲಿಂಗಯ್ಯನವರು ಹಾಲು ಸಹಕಾರ ಸಂಘದಲ್ಲಿ ಉತ್ತಮ ತಾಲೂಕಿನಲ್ಲಿ ಉತ್ತಮ ಹೆಸರುಗಳಿಸಿದ್ದಾರೆ. ಅವರನ್ನೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರೂ, ಗೃಹ ಸಚಿವರೂ ಆಗಿರುವ ಡಾ.ಜಿ.ಪರಮೇಶ್ವರ್ ಮತ್ತು ಮಾಜಿ ಸಚಿವರಾದ ಕೆ.ಎನ್. ರಾಜಣ್ಣನವರು ಇಚ್ಚಿಸಿದ್ದಾರೆ ಎಂದು ಶಾಸಕ ವೆಂಕಟೇಶ್ ವೇದಿಕೆಯಲ್ಲಿ ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದರು.ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ರೈತರಿಗೆ ಹೈನುಗಾರಿಕೆ ವರದಾನವಾಗಿದೆ. ನಮ್ಮ ತಾಲೂಕನ್ನು ಕಲ್ಪತರು ನಾಡೆಂದು ಕರೆಯಲಾಗುತ್ತದೆ. ಆದರೆ ಇತ್ತೀಚೆಗೆ ತೆಂಗಿನ ಮರಕ್ಕೆ ವಿವಿಧ ರೋಗಗಳು ಬಂದು ತೆಂಗು ಬೆಳೆ ಕಡಿಮೆಯಾಗಿದೆ. ತೆಂಗು ಮತ್ತು ಕೊಬ್ಬರಿಯ ಬೆಲೆ ಹೆಚ್ಚಾಗಿದ್ದರೂ ಸಹ ಕಡಿಮೆ ಬೆಳೆ ಬರುತ್ತಿರುವ ಹಿನ್ನೆಲೆಯಲ್ಲಿ ರೈತರು ಹೈರಾಣರಾಗಿದ್ದಾರೆ. ಈಗ ಹೈನುಗಾರಿಕೆ ರೈತರಿಗೆ ಕಲ್ಪವೃಕ್ಷವಾಗಿದೆ. ಉತ್ತಮವಾದ ಹಾಲು ಹಾಕಿದರೆ ಉತ್ತಮ ಬೆಲೆ ದೊರೆಯುತ್ತಿದೆ. ಈ ಹೈನುಗಾರಿಕೆ ಇಲ್ಲದಿದ್ದರೆ ರೈತರ ಪಾಡು ಶೋಚನೀಯವಾಗುತ್ತಿತ್ತು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧಾ ವಿಜೇತರಿಗೆ ಮತ್ತು ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನದ ನಡೆಸಿ ಬಹುಮಾನ ನೀಡಲಾಯಿತು. ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಸಹ ನಡೆಯಿತು. ನೂರಾರು ರೈತರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್ ಗೌಡ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ತ್ಯಾಗರಾಜು, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಪ್ರೊ.ಪುಟ್ಟರಂಗಪ್ಪ, ರಾಮೇಗೌಡ, ಸ್ವಾಮಿ, ಸಿದ್ದಗಂಗಾ ಆಸ್ಪತ್ರೆ ವೈದ್ಯರಾದ ಜೆ.ಎಂ.ಅಭಿಜ್ಞಾ ಮಾಧುಸ್ವಾಮಿ, ಡಾ.ಶರಣ್, ತುಮುಲ್ ವ್ಯವಸ್ಥಾಪಕ ಜಿ.ಶ್ರೀನಿವಾಸನ್, ಶಿವಪ್ರಸಾದ್, ಬಿ.ಶ್ರೀನಿವಾಸ್, ಚಂದ್ರಶೇಖರ ಕೇದನೂರಿ, ಅರೇಮಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಬಿ.ಜಗದೀಶ್, ಉಪ ವ್ಯವಸ್ಥಾಪಕ ಡಾ. ದೀಕ್ಷಿತ್, ತಾಲೂಕು ಮುಖ್ಯಸ್ಥ ಮಂಜುನಾಥ್, ವಿಸ್ತರಣಾಧಿಕಾರಿಗಳಾದ ದಿವಾಕರ್, ಕಿರಣ್ ಕುಮಾರ್, ಸುನಿಲ್ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಹಾಗು ಅರೇಮಲ್ಲೇನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.