ಮೆಟ್ರೋ ಗುಲಾಬಿ ಮಾರ್ಗ : ಒಂದೇ ತಿಂಗಳಲ್ಲಿ 308 ಮೀಟರ್ ಸುರಂಗ ಕೊರೆದ ತುಂಗಾ ದಾಖಲೆ

| Published : Aug 02 2024, 01:30 AM IST / Updated: Aug 02 2024, 10:32 AM IST

ಮೆಟ್ರೋ ಗುಲಾಬಿ ಮಾರ್ಗ : ಒಂದೇ ತಿಂಗಳಲ್ಲಿ 308 ಮೀಟರ್ ಸುರಂಗ ಕೊರೆದ ತುಂಗಾ ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಳೇನ ಅಗ್ರಹಾರ, ನಾಗವಾರ ನಡುವಿನ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಒಂದೇ ತಿಂಗಳಿನಲ್ಲಿ 308 ಮೀಟರ್ ಸುರಂಗ ಕೊರೆದಿದೆ. ಇದು ದಾಖಲೆ ಆಗಿದೆ ಎಂದು ನಿಗಮ ತಿಳಿಸಿದೆ.

 ಬೆಂಗಳೂರು :  ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆವ ಯಂತ್ರ ‘ತುಂಗಾ’ ಒಂದೇ ತಿಂಗಳಲ್ಲಿ 308 ಮೀಟರ್ ಸುರಂಗ ಕೊರೆದು ಹೊಸ ದಾಖಲೆ ಮಾಡಿದ್ದು, ಹಿಂದೆ ಟಿಬಿಎಂ ‘ಉರ್ಜಾ’ ಹೆಸರಿನಲ್ಲಿದ್ದ 273 ಮೀ. ದಾಖಲೆ ಮೀರಿಸಿದೆ.

ಮೆಟ್ರೋ 2ನೇ ಹಂತದ ಯೋಜನೆಯ ಭಾಗವಾಗಿ ಕೆ.ಜೆ.ಹಳ್ಳಿಯಿಂದ ನಾಗವಾರದವರೆಗೆ ‘ತುಂಗಾ’ ಟಿಬಿಎಂ ಸುರಂಗ ಕೊರೆಯುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಬರೆದಿರುವ ಬಿಎಂಆರ್‌ಸಿಎಲ್‌, 2022 ರ ಮೇ ತಿಂಗಳಲ್ಲಿ ‘ಉರ್ಜಾ’ ಟಿಬಿಎಂ ದಾಖಲಿಸಿದ್ದ ಗರಿಷ್ಠ ಸುರಂಗ ಕೊರೆವ ಮೂಲಕ ದಾಖಲೆ ಬರೆದಿತ್ತು. ಐಟಿಡಿ ಕಂಪನಿಯ ‘ತುಂಗಾ’ ಟಿಬಿಎಂ ಜುಲೈ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಿ ದಾಖಲೆ ಬರೆದಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಯಮಿತವು ತಿಳಿಸಿದೆ.

ಜೂನ್ ತಿಂಗಳಲ್ಲಿ ಇದೇ ಕಾಳೇನ ಅಗ್ರಹಾರ-ನಾಗವಾರದ ಸುರಂಗ ಮಾರ್ಗದ ಕೆಲಸ ನಡೆಯುವಾಗ ದೊಡ್ಡ ಕಲ್ಲು ಎದುರಾಗಿ ಕೆಲಸಕ್ಕೆ ತೊಂದರೆ ಆಗಿತ್ತು. ಅಲ್ಲದೇ ಕೆ.ಜಿ.ಹಳ್ಳಿಯಲ್ಲಿ ರಸ್ತೆಯ ಮೇಲ್ಮೈನಲ್ಲಿ ಹೊಂಡ (ಸಿಂಕ್ ಹೋಲ್) ಕಾಣಿಸಿಕೊಂಡಿತ್ತು. ಕಾಂಕ್ರೀಟ್‌ನಿಂದ ಹೊಂಡ ಮುಚ್ಚಿದ ಬಳಿಕ ಕೆಲಸ ಮುಂದುವರಿಸಲಾಗಿತ್ತು. ಅಡೆ-ತಡೆ ನಡುವೆಯೇ ಟಿಬಿಎಂ ತುಂಗಾ ಹೆಚ್ಚಿನ ಸುರಂಗ ಕೊರೆದಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

ತುಂಗಾ ಟಿಬಿಎಂ ಗುಲಾಬಿ ಮಾರ್ಗದಲ್ಲಿ ನಾಲ್ಕನೇಯ ಬಾರಿಯ ಹಾಗೂ ತನ್ನ ಕೊನೆಯ 938 ಮೀ. ಸುರಂಗ ಕೆಲಸವನ್ನು ಮಾಡುತ್ತಿದೆ. ಫೆ.1ರಂದು ಕಾಡುಗೊಂಡನಹಳ್ಳಿಯಿಂದ ನಾಗವಾರ ದಕ್ಷಿಣದ ಕಡೆಗೆ ಸುರಂಗ ಕೊರೆಯುವ ಕೆಲ ಆರಂಭಿಸಿದೆ. ಜೂನ್‌ ಅಂತ್ಯದವರೆಗೆ 469ಮೀ. ಸುರಂಗ ಕೊರೆದಿತ್ತು.