ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ : ಸರಪಳಿ ತುಂಡಾಗಿ ಕಳಚಿಬಿದ್ದಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಂ.19ಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಸಾಹಸ ಶನಿವಾರ ಯಶಸ್ವಿಯಾಗಿದೆ. ಹರಿಯುವ ನೀರಿನಲ್ಲೇ 65 ಟನ್ ತೂಕದ ಐದು ಸ್ಟೀಲ್ ಗೇಟ್‌ಗಳನ್ನು ಇಳಿಸಿ ಸ್ಟಾಪ್ ಲಾಗ್ ಗೇಟ್ ಅಳವಡಿಸಿರುವುದು ದೇಶದಲ್ಲಿ ಇದೇ ಮೊದಲು ಎನ್ನಲಾಗಿದೆ.
ತುಂಗಭದ್ರಾ ಜಲಾಶಯದ ಇತಿಹಾಸದಲ್ಲೂ ಇದೇ ಮೊದಲ ಬಾರಿಗೆ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡಲಾಗಿದ್ದು, ಕ್ರಸ್ಟ್ ಗೇಟ್ ಕಿತ್ತುಹೋದ ಏಳು ದಿನಗಳಲ್ಲೇ ಇಂಥದ್ದೊಂದು ಸಾಹಸ ಮಾಡಿರುವ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದ ತಂಡದ ಸಾಹಸ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಏಳು ದಶಕಗಳಷ್ಟು ಹಳೆಯ ತುಂಗಭದ್ರಾ ಜಲಾಶಯ ಎರಡು ವರ್ಷದ ಬಳಿಕ ತುಂಬಿತ್ತು. ಆದರೆ ಜಲಾಶಯದ ನೀರಿನ ಮಟ್ಟ 1633 ಅಡಿ ಇದ್ದಾಗ ಆ.10ರ ರಾತ್ರಿ ಕ್ರಸ್ಟ್ ಗೇಟ್ ನಂ.19 ಕಳಚಿ ಬಿದ್ದಿತ್ತು. ಇದರಿಂದ ಕಲ್ಯಾಣ ಕರ್ನಾಟಕ ಸೇರಿ ಆಂಧ್ರ ಮತ್ತು ತೆಲಂಗಾಣದ 13 ಲಕ್ಷ ಎಕರೆ ಪ್ರದೇಶಗಳಿಗೆ ನೀರುಣಿಸುವ ಹಾಗೂ ಕುಡಿಯುವ ನೀರೊದಗಿಸುವ ಈ ಮಹತ್ವದ ಜಲಾಶಯದಲ್ಲಿ ಸಂಗ್ರಹವಾಗಿದ್ದ 105 ಟಿಎಂಸಿ ನೀರಿನಲ್ಲಿ 53 ಟಿಎಂಸಿ ನದಿಗೆ ಹರಿಸಬೇಕಾದ ಸಂದಿಗ್ಧ ಸ್ಥಿತಿ ನಿರ್ಮಾಣಗೊಂಡಿತ್ತು.
ಜಲಾಶಯದ ನೀರಿನ ಮಟ್ಟ 1623.32 ಅಡಿ ಇದ್ದಾಗ ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ ಮುಂದಾಗಿದ್ದು, ಆ ವೇಳೆಗಾಗಲೇ ದಿನಕ್ಕೆ 1ಲಕ್ಷ ಕ್ಯುಸೆಕ್ ನೀರು ನದಿ ಪಾಲಾಗುತ್ತಿತ್ತು. ಈಗ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲ ಗೇಟ್‌ಗಳನ್ನು ಬಂದ್ ಮಾಡಿ, ಹೊರಹರಿವು ನಿಲ್ಲಿಸಲಾಗಿದೆ. ಸದ್ಯ ಜಲಾಶಯದಲ್ಲಿ 71.139 ಟಿಎಂಸಿ ನೀರಿನ ಸಂಗ್ರಹ ಇದ್ದು, 84,796 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಉತ್ತಮ ಮಳೆಯಾದರೆ ಮತ್ತೆ ಜಲಾಶಯ ಭರ್ತಿಯಾಗಿ ರೈತರ ಎರಡನೇ ಬೆಳೆಗೂ ನೀರು ಕೊಡುವ ಆಶಾಭಾವನೆ ಮೂಡಿದೆ.
ಆ.16ರಂದು ಮೊದಲ ಗೇಟ್:
ಹೈದರಾಬಾದ್‌ನ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ನಾನಾ ಅಡ್ಡಿ-ಆತಂಕಗಳ ನಡುವೆಯೇ ಹರಿಯುತ್ತಿದ್ದ ನೀರಿನಲ್ಲೇ ಆ.16ರ ಶುಕ್ರವಾರ ಮೊದಲ ಸ್ಟಾಪ್ ಲಾಗ್ ಗೇಟ್ ಅಳವಡಿಸಲಾಗಿತ್ತು. ಇದೀಗ ಅವರ ನೇತೃತ್ವದಲ್ಲಿ ಉಳಿದ ನಾಲ್ಕು ಗೇಟ್‌ಗಳನ್ನು ಅಳವಡಿಸುವ ಮೂಲಕ ಕಿತ್ತುಹೋಗಿದ್ದ ಕ್ರಸ್ಟ್‌ಗೇಟ್ 19ರಿಂದ ಹೊರಹೋಗುತ್ತಿದ್ದ ನೀರನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಶನಿವಾರ ಮಧ್ಯಾಹ್ನ 1.50ರಿಂದ ಆರಂಭಗೊಂಡ ಗೇಟ್ ಅಳವಡಿಕೆ ಕಾರ್ಯ ಸಂಜೆ 6:28ಕ್ಕೆ ಪೂರ್ಣಗೊಂಡಿತು.
100ಕ್ಕೂ ಅಧಿಕ ಕಾರ್ಮಿಕರ ಶ್ರಮ:
ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ 100ಕ್ಕೂ ಅಧಿಕ ಕಾರ್ಮಿಕರು, ಎಂಜಿನಿಯರ್‌ಗಳು ಹಗಲಿರುಳು ಶ್ರಮಿಸಿದ್ದರೆ, ಜಿಂದಾಲ್, ನಾರಾಯಣ ಎಂಜಿನಿಯರ್ಸ್ ಮತ್ತು ಹಿಂದೂಸ್ತಾನ್ ಎಂಜಿನಿಯರ್ಸ್‌ಗಳು ತುರ್ತಾಗಿ ಗೇಟ್ ನಿರ್ಮಿಸಲು ನೆರವು ನೀಡಿದ್ದವು. ಕಾರ್ಮಿಕರು, ಕಾರ್ಮಿಕರು ಊಟಕ್ಕೂ ತೆರಳದೆ ಗೇಟ್‌ಗಳನ್ನು ಯಶಸ್ವಿಯಾಗಿ ಅಳವಡಿಸಲು ಸಹಕಾರ ನೀಡಿದರು.
ಸದ್ಯ ತಾತ್ಕಾಲಿಕವಾಗಿ ಸ್ಟಾಪ್‌ಲಾಗ್ ಗೇಟ್ ಹಾಕಿ ನೀರು ತಡೆಹಿಡಿಯಲಾಗಿದ್ದು, ಬೇಸಿಗೆ ಕಾಲದಲ್ಲಿ ನೀರು ಖಾಲಿಯಾದಾಗ ಶಾಶ್ವತ ಗೇಟ್ ಅಳವಡಿಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟಾಪ್ ಲಾಗ್‌ನಿಂದ ಬರೀ 10 ಕ್ಯುಸೆಕ್ ಸೋರಿಕೆ
ಗೇಟ್ ನಂ.19ಕ್ಕೆ ಸ್ಟಾಪ್ ಲಾಗ್ ಅಳವಡಿಕೆ ಮಾಡಿದ ಬಳಿಕ ಬರೀ 10 ಕ್ಯುಸೆಕ್ ನೀರು ಸೋರಿಕೆ ಆಗುತ್ತಿದೆ. ಗೇಟ್ ಕಿತ್ತುಹೋಗಿದ್ದಾಗ ದಿನಕ್ಕೆ 35 ಸಾವಿರ ಕ್ಯುಸೆಕ್ ನೀರು ನದಿಗೆ ಹರಿದು ಹೋಗುತ್ತಿತ್ತು. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಆಗ ಇತರೆ 32 ಗೇಟ್‌ಗಳನ್ನೂ ತೆರೆದು ನದಿಗೆ ವ್ಯರ್ಥವಾಗಿ ನೀರು ಹರಿಸಲಾಗಿತ್ತು.
ಕೊಚ್ಚಿಹೋಗಿಲ್ಲ, ಕಳಚಿ ಬಿದ್ದಿದೆ ಜಲಾಶಯದ ಎಲ್ಲ 33 ಗೇಟ್‌ಗಳನ್ನು ಬಂದ್ ಮಾಡಿ ನೀರು ಹರಿಸುವುದನ್ನು ನಿಲ್ಲಿಸಿರುವ ಕಾರಣ ಆ.10 ರಂದು ಸರಪಳಿ ತುಂಡಾಗಿ ನಂ.19ನೇ ಗೇಟ್ ಕೊಚ್ಚಿಹೋಗಿತ್ತು ಎಂದು ಹೇಳಲಾಗಿತ್ತು. ಇದೀಗ ಆ ಗೇಟ್ ಕೊಚ್ಚಿಹೋಗಿಲ್ಲ, ಅಲ್ಲೇ ಕಳಚಿ ಬಿದ್ದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ರೈತರ ಬದುಕು ಹಸನುಗೊಳಿಸಲು ನಾನು ಈ ಇಳಿವಯಸ್ಸಿನಲ್ಲೂ ದೂರದ ಹೈದರಾಬಾದ್‌ನಿಂದ ಆಗಮಿಸಿ ಸ್ಟಾಪ್ ಲಾಗ್ ಗೇಟ್ ಅಳವಡಿಸಿರುವೆ. ಹರಿಯುವ ನೀರಿನಲ್ಲೇ ಗೇಟ್ ಅಳವಡಿಕೆ ಸವಾಲಿನ ಕೆಲಸ ಆಗಿತ್ತು. ಆದರೂ ನಮ್ಮ ಮನೆ ದೇವರಾದ ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಯಶಸ್ಸು ಸಾಧಿಸಿದ್ದೇವೆ. ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುವೆ.
-ಕನ್ಹಯ್ಯ ನಾಯ್ಡು, ಪರಿಣತ ತಜ್ಞ