ಮಳೆ ಹಾನಿ ರೈತರಿಗೆ ಕೂಡಲೇ ಪರಿಹಾರ ನೀಡಿ: ಶಾಸಕ ಗೋಪಾಲ ಕೃಷ್ಣ ಬೇಳೂರು

| Published : Aug 18 2024, 01:46 AM IST

ಮಳೆ ಹಾನಿ ರೈತರಿಗೆ ಕೂಡಲೇ ಪರಿಹಾರ ನೀಡಿ: ಶಾಸಕ ಗೋಪಾಲ ಕೃಷ್ಣ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಕುದರೂರು ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಮಳೆ ಹಾನಿಗೊಳಗಾದ ರೈತರ ಅರ್ಜಿಗಳನ್ನು ಶಾಸಕ ಗೋಪಾಲ ಕೃಷ್ಣ ಬೇಳೂರು ಪರಿಶೀಲಿಸಿ, ಮಳೆಹಾನಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಪಡೆದುಕೊಳ್ಳಲು ಸಹಕಾರ ನೀಡಿ ಎಂದು ಶಾಸಕ ಬೇಳೂರು ಗೊಪಾಲಕೃಷ್ಣ ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಸಾಗರ / ಬ್ಯಾಕೋಡು

ಮೂವತ್ತು ವರ್ಷಗಳ ಈಚೆಗೆ ಈ ವರ್ಷ ಅತೀ ಹೆಚ್ಚು ಮಳೆಯಾಗಿದ್ದು, ಇದರಿಂದ ಮಲೆನಾಡು ಭಾಗದಲ್ಲಿ ಅಡಕೆ ಕೊಳೆ ಹೆಚ್ಚಾಗಿದೆ ಮತ್ತು ಗ್ರಾಮೀಣ ಭಾಗದ ಗುಡ್ಡದ ಅಂಚಿನಲ್ಲಿರುವ ಹಲವು ರಸ್ತೆಗಳು ಹಾಳಾಗಿ ಸಂಪರ್ಕ ಕಳೆದುಕೊಂಡಿರುವ ಸೂಕ್ತ ದಾಖಲೆಗಳನ್ನು ತಯಾರಿ ಮಾಡಿ ಬಡವರಿಗೆ ಸೂಕ್ತ ಪರಿಹಾರ ಪಡೆದುಕೊಳ್ಳಲು ಸಹಕಾರ ಮಾಡಿ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕರೂರು ಹೋಬಳಿ ವ್ಯಾಪ್ತಿಯ ಕುದರೂರು, ಸಂಕಣ್ಣ ಶ್ಯಾನುಭೋಗ , ತುಮರಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಕುದರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಚಗೋಡಿನ ಬಳಿ ಗುಡ್ಡ ಕುಸಿದು ತೋಟಕ್ಕೆ ಹಾನಿಯಾಗಿರುವ ಪ್ರದೇಶ ಹಾಗೂ ಅಡಕೆ ಕೊಳೆ ರೋಗಪೀಡಿತ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕರು ಕೊಡಲೇ ಸೂಕ್ತ ವರದಿ ತಯಾರಿಸಿ ಅಗತ್ಯ ಪರಿಹಾರಕ್ಕೆ ಸೂಚಿಸಿ ನಂತರ ಕುದರೂರು ಪಂಚಾಯ್ತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.

ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಅಲ್ಲಲ್ಲಿ ಬೆಳೆ ಹಾನಿಯಾಗಿದ್ದು, ರೈತರ ಅರ್ಜಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಈ ವೇಳೆ ಸ್ಥಳದಲ್ಲಿಯೇ ಕಾರ್ಗಲ್ ವಲಯ ಅರಣ್ಯಾಧಿಕಾರಿ ಇಲಾಖೆಗಳಿಗೆ ಕರೆ ಮಾಡಿ ಮಾಹಿತಿ ಪಡೆದ ಶಾಸಕರು ಸರಿಯಾಗಿ ಕೆಲಸ ಮಾಡದಿದ್ದರೆ ನೋಟಿಸ್ ನೀಡುವುದಾಗಿ ಎಚ್ಚರಿಸಿದರು.

ಉಪ ತಹಶೀಲ್ದಾರ್ ಕಚೇರಿ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರ ದೂರಿಗೆ ಉತ್ತರಿಸಿದ ಶಾಸಕರು ಶೀಘ್ರವೇ ನಾಡ ಕಚೇರಿಗೆ ಬಯೋಮೆಟ್ರಿಕ್‌ಗೆ ವ್ಯವಸ್ಥೆ ಕಲ್ಪಿಸಲು ಸ್ಥಳದಲ್ಲೆ ತಹಶೀಲ್ದಾರ್ ಗೆ ಸೂಚನೆ ನೀಡಿದರು.

ಈ ಹಿಂದೆ ಉರುಳಗಲ್ಲು ಪ್ರಕರಣದಲ್ಲಿ ರೈತರಿಗೆ ಸ್ಲೇಟು ಹಿಡಿದ ಪ್ರಕರಣದಲ್ಲಿ ಪ್ರಮೋದ್ ಎಂಬ ಅರಣ್ಯಾಧಿಕಾರಿಯನ್ನು ಪುನಃ ತುಮರಿಗೆ ವರ್ಗಾವಣೆ ಮಾಡು ವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಕೋಡು ಭಾಗದಲ್ಲಿ ಅಸ್ಪತ್ರೆ ಮುಂಭಾಗದಲ್ಲಿ ನಿರಂತರವಾಗಿ ಚಿಲ್ಲರೆ ಮದ್ಯ ಮಾರಾಟ ಆಗುತ್ತಿರುವುದನ್ನು ತಡೆಯಲು ಸ್ಥಳೀಯ ಪೋಲಿಸ್ ಇಲಾಖೆ ವಿಫಲ ವಾಗಿದೆ ಎಂದು ರವಿ ಹೊನ್ನೊಳ್ಳಿ ಆರೋಪಿಸಿದರು. ಸ್ಥಳದಲ್ಲೇ ಕಾರ್ಗಲ್ ಸಬ್ ಇನ್ಸ್‌ಪೆಕ್ಟರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದರೆ ಮುಲಾಜಿಲ್ಲದೆ ಸ್ಥಳೀಯ ಪೋಲೀಸ್ ಅಧಿಕಾರಿಗಳ ಮೇಲೆ ಕ್ರಮಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಸಾಗರ ತಹಶೀಲ್ದಾರ್,ಚಂದ್ರಶೇಖರ್ ನಾಯಕ್,ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ,ಗುರುಕೃಷ್ಣ ಶೆಣೈ, ಕೆಡಿಪಿ ಸದಸ್ಯ, ಜಿ.ಟಿ. ಸತ್ಯನಾರಾಯಣ.ಕುದರೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷೆ, ಸರಸ್ವತಿ ಗಣಪತಿ , ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ಕೊಳೆರೋಗದಿಂದ ಬೆಳೆನಾಶ ಆತಂಕಕಾರಿ: ಬೇಳೂರು

ಸಾಗರ: ವಿಪರೀತ ಮಳೆಯಿಂದಾಗಿ ಅಡಕೆ ತೋಟಗಳಿಗೆ ಕೊಳೆರೋಗ ಬಂದಿದ್ದು, ದೊಡ್ಡ ಪ್ರಮಾಣದಲ್ಲಿ ಬೆಳೆ ನಾಶವಾಗಿರುವುದು ಆತಂಕಕಾರಿ ಸಂಗತಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲ್ಲೂಕಿನ ಕರೂರು ಹೋಬಳಿಯ ವಿವಿಧ ಭಾಗಗಳ ಅಡಿಕೆ ತೋಟಗಳಿಗೆ ಭೇಟಿ ನೀಡಿ ಬೆಳೆಗಾರರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕೊಳೆರೋಗದಿಂದ ಶೇ.೬೦ರಷ್ಟು ಬೆಳೆ ನಾಶವಾಗಿದ್ದು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೇಟಿ ಮಾಡಿದ ಅಡಕೆ ತೋಟಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಡಕೆ ಉದುರಿ ಹೋಗಿದೆ. ಬಿಸಿಲು ಮಳೆಯಿಂದ ಇನ್ನಷ್ಟು ಅಡಕೆ ಉದುರುವ ಸಾಧ್ಯತೆ ಇದೆ. ಬೆಳೆಗಾರರ ರಕ್ಷಣೆಗೆ ಸರ್ಕಾರ ಬದ್ಧವಿದೆ ಎಂದರು.ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಕೊಳೆರೋಗ ಪೀಡಿತ ಅಡಕೆ ತೋಟಗಳಿಗೆ ಹೆಕ್ಟೇರ್‌ಗೆ ೧೨೫೦೦ ರು. ಪರಿಹಾರ ನೀಡಿದ್ದರು. ಇದರಿಂದ ಬೆಳೆಗಾರರಿಗೆ ತಾತ್ಕಾಲಿಕ ಸಾಂತ್ವನ ಸಿಕ್ಕಂತೆ ಆಗಿತ್ತು. ನಂತರದ ದಿನಗಳಲ್ಲಿ ಅಡಕೆ ಬೆಳೆಗಾರರಿಗೆ ಪರಿಹಾರ ಪರಿಪೂರ್ಣವಾಗಿ ಸಿಕ್ಕಿರಲಿಲ್ಲ. ಇದೀಗ ಸಿದ್ದರಾಮಯ್ಯ ಅವರೆ ಮುಖ್ಯಮಂತ್ರಿಗಳಾಗಿರುವುದರಿಂದ ಪರಿಹಾರ ಸಿಗಬಹುದು ಎನ್ನುವ ವಿಶ್ವಾಸ ಬೆಳೆಗಾರರಲ್ಲಿದೆ ಎಂದು ಹೇಳಿದರು.

ಅತಿವೃಷ್ಟಿಯಿಂದ ಎಷ್ಟು ಹೆಕ್ಟೇರ್ ಅಡಕೆ ತೋಟದಲ್ಲಿ ಕೊಳೆಯಿಂದ ಹಾನಿಯುಂಟಾಗಿದೆ ಎನ್ನುವ ಅಂದಾಜು ತಯಾರಿಸಲು ಕಂದಾಯ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಳೆಗಾರರು ಸಲ್ಲಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಜೊತೆಗೆ ಅಡಕೆ ಕೊಳೆರೋಗಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.ಉಪವಿಭಾಗಾಧಿಕಾರಿ ಯತೀಶ್ ಆರ್., ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಆಪ್ಸ್ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ಖಂಡಿಕಾ ಸೂರ್ಯನಾರಾಯಣ, ಕಲಸೆ ಚಂದ್ರಪ್ಪ, ಅಶೋಕ್ ಬೇಳೂರು, ಸವಿತಾ ದೇವರಾಜ್ ಇನ್ನಿತರರು ಹಾಜರಿದ್ದರು.