ಸಾರಾಂಶ
ಹೊಸಪೇಟೆ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್‌ಗಳನ್ನು ತೆರೆದು ನದಿಗೆ 1,47,516 ಕ್ಯುಸೆಕ್ ನೀರು ಹರಿಸಿರುವ ಹಿನ್ನೆಲೆಯಲ್ಲಿ ಜಲಾಶಯದ ವೀಕ್ಷಣೆಗೆ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಇನ್ನು ಹಂಪಿಯಲ್ಲೂ ಪ್ರವಾಸಿಗರು ಹೆಚ್ಚಿದ್ದಾರೆ.
ಜಲಾಶಯದ ಒಳಹರಿವು ತಗ್ಗದಿರುವುದರಿಂದ ಭಾನುವಾರ ಕೂಡ ಭಾರೀ ಪ್ರಮಾಣದಲ್ಲಿ ನೀರು ನದಿಗೆ ಹರಿಸಲಾಗಿದೆ. ಈಗಾಗಲೇ ಹಂಪಿಯ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ರಘುನಂದನ ತೀರ್ಥರ ಬೃಂದಾವನ, ಸುಗ್ರೀವ ಗುಹೆ, ಸೀತೆ ಸೆರಗು, ವಿಷ್ಣುವಿನ ದಶಾವತಾರ ಉಬ್ಬು ಶಿಲ್ಪಗಳು, ಕೋಟಿಲಿಂಗ ಜಲಾವೃತವಾಗಿವೆ.ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಕಾಲು ಸೇತುವೆ, ಜನಿವಾರ ಮಂಟಪಗಳು ಸಂಪೂರ್ಣ ಮುಳುಗಡೆಯಾಗಿವೆ. ಕೋದಂಡರಾಮಸ್ವಾಮಿ ದೇವಾಲಯದ ಬಳಿಯ ಮಂಟಪಗಳು ಜಲಾವೃತವಾಗಿವೆ.
ಹಂಪಿಯ ಚಕ್ರತೀರ್ಥದ ಬಳಿ ಭಾರೀ ಪ್ರಮಾಣದಲ್ಲಿ ನೀರು ನದಿಯಲ್ಲಿ ಹರಿಯುತ್ತಿದೆ. ಈಗಾಗಲೇ ಹರಿಗೋಲು, ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಹಂಪಿ ತುಂಗಭದ್ರಾ ನದಿ ತೀರದಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.ಡ್ಯಾಂನಿಂದ ನದಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ 33 ಗೇಟ್‌ಗಳಿಂದ ನದಿಯಲ್ಲಿ ರಭಸವಾಗಿ ಹರಿಯುವ ನೀರನ್ನು ಕಣ್ಣದುಂಬಿಕೊಳ್ಳಲು ಪ್ರವಾಸಿಗರು, ಸ್ಥಳೀಯರು ತಂಡೋಪತಂಡವಾಗಿ ಜಲಾಶಯಕ್ಕೆ ಬರುತ್ತಿದ್ದಾರೆ. ಈಗಾಗಲೇ ಜಲಾಶಯದಲ್ಲೂ ಪೊಲೀಸರು ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದಾರೆ. ಇನ್ನು ಹಂಪಿಯ ತುಂಗಭದ್ರಾ ನದಿ ತೀರದಲ್ಲೂ ಜನರು ಆಗಮಿಸಿ ನದಿಯಲ್ಲಿ ಹರಿಯುತ್ತಿರುವ ನೀರನ್ನು ವೀಕ್ಷಿಸುತ್ತಿದ್ದಾರೆ. ಬಳಿಕ ಹಂಪಿಯ ವಿರೂಪಾಕ್ಷೇಶ್ವರ ದರ್ಶನ ಪಡೆದು ಸ್ಮಾರಕಗಳನ್ನು ವೀಕ್ಷಿಸುತ್ತಿದ್ದಾರೆ. ಹಂಪಿಯಲ್ಲಿ ಭಾರೀ ಪ್ರಮಾಣದಲ್ಲಿ ನದಿಯಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ವೈಭವದ ಸೊಬಗು ಕಾಣಲು ಜನರು ಬರುತ್ತಿದ್ದಾರೆ.