ಸಾರಾಂಶ
ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿ ನೀರು ಸ್ವಚ್ಛವಾಗಿದ್ದು, ಶುದ್ಧೀಕರಿಸಿ ಸಾರ್ವಜನಿಕರಿಗೆ ಕುಡಿಯಲು ನಲ್ಲಿ ಮೂಲಕ ನೀರನ್ನು ಪೂರೈಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ತಿಳಿಸಿದರು.ಹಮ್ಮಿಗಿ ಬ್ಯಾರೇಜ್ ಕೆಳಭಾಗದಲ್ಲಿ ತುಂಗಭದ್ರಾ ನದಿ ನೀರು ಹಸಿರು ಬಣ್ಣಕ್ಕೆ ಪರಿವರ್ತನೆಗೊಂಡಿದೆ. ಕುಡಿಯಲು ಬಳಸಬಾರದು ಎನ್ನುವ ಮುಂಡರಗಿಯ ಗ್ರಾ.ಕು.ನೀ.ಸ ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿಡಿಒಗೆ ಬರೆದ ಪತ್ರ ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿ, ಪ್ರತಿ ತಿಂಗಳ 1, 15ನೇ ತಾರೀಕಿನಂದು ನದಿ ನೀರಿನ ಮಾದರಿ ಸಂಗ್ರಹಿಸಿ ಕಂಪ್ಲಿಯ ವೈದ್ಯಕೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಬಳ್ಳಾರಿಯ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೈವಿಕ ನೀರು (ಬಯೋಲಾಜಿಕಲ್) ಪರೀಕ್ಷೆ ಮತ್ತು ಜೀವ ರಾಸಾಯನಿಕ (ಬಯೋ ಕೆಮಿಕಲ್) ಪರೀಕ್ಷೆಗೆ ನೀರನ್ನು ಕಳುಹಿಸಿದ್ದು ಕುಡಿಯಲು ಯೋಗ್ಯವೆಂದು ವರದಿ ಬಂದಿದೆ. ಪಟ್ಟಣದ 40ರಿಂದ 50 ಕಡೆ ಕುಡಿಯುವ ನೀರಿನ ಮಾದರಿ ಸಂಗ್ರಹಿಸಿ, ನೀರಿನ ಗುಣಮಟ್ಟ ಪರೀಕ್ಷೆಗಾಗಿ ಕಂಪ್ಲಿಯ ವೈದ್ಯಕೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗುತ್ತಿದ್ದು, ಕುಡಿಯಲು ಯೋಗ್ಯವಿದೆ ಎಂದು ವರದಿ ಬಂದಿದೆ. ನದಿ ನೀರನ್ನು ನೇರವಾಗಿ ಸೇವಿಸದೇ ಪುರಸಭೆ ಪೂರೈಸುವ ಶುದ್ಧ ಕುಡಿವ ನೀರನ್ನು, ಆರ್‌ಒ ಪ್ಲಾಂಟ್ ನೀರನ್ನು ಬಳಸಬೇಕು. ಕುದಿಸಿ ಆರಿಸಿದ ಸ್ವಚ್ಛ ನೀರನ್ನು ಸೇವಿಸಬೇಕು. ಸಿಸ್ಟನ್ ಟ್ಯಾಂಕ್ ಮೂಲಕ ಪೂರೈಸುವ ನೀರು ಕುಡಿಯಲು ಬಳಸದೇ ಕೇವಲ ಬಳಕೆಗೆ ಮಾತ್ರ ಉಪಯೋಗಿಸಬೇಕು. ಸಿಸ್ಟನ್ ಟ್ಯಾಂಕ್ ನೀರನ್ನು ಮಕ್ಕಳು ಸೇವಿಸದಂತೆ ಎಚ್ಚರಿಕೆ ವಹಿಸಬೇಕು. ಕುಡಿವ ನೀರು ಪೈಪ್ ಸೋರಿಕೆ ಕಂಡುಬಂದಲ್ಲಿ ಕೂಡಲೇ ಪುರಸಭೆ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.