ಸಾರಾಂಶ
ಹೂವಿನಹಡಗಲಿ: ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನದಿತಟದ ರೈತರ ನೂರಾರು ಎಕರೆ ಪ್ರದೇಶಕ್ಕೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ನೀರಿನಲ್ಲಿ ಮುಳುಗಿದ ಪಂಪ್‌ಸೆಟ್‌ನ ಮೋಟರ್‌ಗಳನ್ನು ತೆಪ್ಪಗಳ ಸಹಾಯದಿಂದ ಹೊರಕ್ಕೆ ತರಲು ರೈತರು ಹರಸಾಹಸ ಪಡುತ್ತಿದ್ದಾರೆ. ನಿರಂತರ ಮಳೆಗೆ 5 ಮನೆಗಳು ಜಖಂ ಆಗಿವೆ.
ತಾಲೂಕಿನ ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ, ಮಕರಬ್ಬಿ ಸೇರಿದಂತೆ ನದಿ ತೀರದಲ್ಲಿರುವ ರೈತರ ಭತ್ತ, ಮೆಕ್ಕೆಜೋಳ, ಚೆಂಡು ಹೂವು, ಕಬ್ಬಿನ ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.ತಾಲೂಕಿನ ಮಕರಬ್ಬಿ ಬ್ಯಾಲಹುಣ್ಸಿ ಗ್ರಾಮಗಳ ಮಧ್ಯೆ ಇರುವ ರಸ್ತೆ ಸಣ್ಣ ಸೇತುವೆಯನ್ನು ಈಗಾಗಲೇ ನೀರು ಸುತ್ತುವರಿದಿದೆ. ಯಾವುದೇ ಕ್ಷಣದಲ್ಲಿ ರಸ್ತೆ ಮೇಲೆ ನೀರು ಬರುವ ಸಾಧ್ಯತೆ ಇದೆ. ಜತೆಗೆ ಅಕ್ಕಪಕ್ಕದ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ.
ಉಳಿದಂತೆ ಸಿಂಗಟಾಲೂರು ಬ್ಯಾರೇಜ್‌ನಿಂದ ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಟ್ಟಿರುವ ಹಿನ್ನೆಲೆಯಲ್ಲಿ ನವಲಿ ಗ್ರಾಮಕ್ಕೆ ನೀರು ನುಗ್ಗಿದೆ. ಮದಲಗಟ್ಟಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನದಿ ನೀರು ಸುತ್ತುವರಿಯುವ ಸಂಭವವಿದೆ.ತಾಲೂಕಿನ ಅಡವಿಮಲ್ಲನಕೆರೆ ತಾಂಡ-1, ಕೆಂಚಮ್ಮನಹಳ್ಳಿ-1, ನಾಗತಿ ಬಸಾಪುರ ಸೇರಿದಂತೆ ಒಟ್ಟು ತಾಲೂಕಿನಲ್ಲಿ 5 ಮನೆಗಳು ಕುಸಿದು ಬಿದ್ದಿವೆ, ಆದರೆ ಯಾವುದೇ ಜೀವ ಹಾನಿಯಾಗಿಲ್ಲ.
ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತಟದ ಗ್ರಾಮಗಳಿಗೆ ಪ್ರವಾಹ ಭೀತಿರುವ 10 ಗ್ರಾಮಗಳನ್ನು ಗುರುತಿಸಲಾಗಿದೆ. ಅದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನದಿ ಪಾತ್ರದಲ್ಲಿ ಯಾರು ಅನಾವಶ್ಯಕವಾಗಿ ತಿರುಗಾಡದಂತೆ ಎಲ್ಲ ಕಡೆಗೂ ಡಂಗೂರ ಸಾರಲಾಗಿದೆ. ಸಭೆ ಮಾಡಿ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎನ್ನುತ್ತಾರೆ ಹೂವಿನಹಡಗಲಿ ತಹಸೀಲ್ದಾರ್ ಅಮರೇಶ.ಪ್ರತಿ ಬಾರಿ ಪ್ರವಾಹ ಬಂದಾಗ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದೆ. 30 ಎಕರೆ ಮೆಕ್ಕೆಜೋಳ, ಚೆಂಡು ಹೂವು, ಭತ್ತದ ಬೆಳೆ ಹಾನಿಯಾಗಿದೆ. ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ 10 ವಿದ್ಯುತ್ ಪರಿವರ್ತಕಗಳು ನೀರಿನಲ್ಲಿ ಮುಳುಗಿವೆ. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿಯಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎನ್ನುತ್ತಾರೆ ರೈತ ಮಲ್ಲೇಶ ಬನ್ನಿಮಟ್ಟಿ.